ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಉದ್ಯಾನದಲ್ಲಿ ದೇಗುಲ!

Last Updated 27 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆ ವ್ಯಾಪ್ತಿಯ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಹಾಗೂ ಅಲ್ಲಿನ  ಸಾರ್ವಜನಿಕ ರಸ್ತೆ ಬದಿಯಲ್ಲಿ ಅನಧಿಕೃತ ದೇಗುಲಗಳು ತಲೆ ಎತ್ತಿದ್ದು, ಇದರಿಂದ ನಾಗರಿಕರ ಓಡಾಟಕ್ಕೆ ಹಾಗೂ ವನ್ಯಜೀವಿಗಳಿಗೆ ಕಿರಿಕಿರಿ ಉಂಟಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕು ನಾಗರಹೊಳೆಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಮೈಸೂರು- ಮಾನಂದವಾಡಿ  ರಸ್ತೆಯ ಮಾಸ್ತಮ್ಮ  ದೇಗುಲ, ಇದೇ ರಕ್ಷಿತಾರಣ್ಯದ ಹೊಸೂರು ಬಸ್ ನಿಲ್ದಾಣ ಪಕ್ಕದ ಇನ್ನೊಂದು ದೇಗುಲ, ಮೈಸೂರು- ಮಾನಂದವಾಡಿ ರಸ್ತೆಯ ಕಡೇಗದ್ದೆ  ಹಾಡಿಯಲ್ಲಿರುವ ದೇಗುಲ, ಇದೇ ರಸ್ತೆಯ ಬಾವಲಿಯಲ್ಲಿ ಈಚೆಗೆ ನಿರ್ಮಾಣವಾಗಿರುವ ಅಯ್ಯಪ್ಪ ದೇಗುಲ, ಪಿರಿಯಾಪಟ್ಟಣ ತಾಲ್ಲೂಕಿನ  ಆನೆಚೌಕೂರು ವನ್ಯಜೀವಿ ವಲಯದ ಹುಣಸೂರು-ಗೋಣಿ  ಕೊಪ್ಪ ರಸ್ತೆಯ ಹೊಸೂರು ಮಾರಮ್ಮ ದೇಗುಲ, ಇದೇ ರಕ್ಷಿತಾರಣ್ಯದ ಹಂದಿ ಗೆರೆ ಚೌಡಮ್ಮ ದೇಗುಲ ಗಳು ನಾಗರಹೊಳೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿವೆ.

 ಜಿಲ್ಲೆ ವ್ಯಾಪ್ತಿಯ ಬಂಡೀಪುರ ಉದ್ಯಾನದಲ್ಲಿ ಎಚ್.ಡಿ.ಕೋಟೆ ತಾಲ್ಲೂಕು  ಹೆಡಿಯಾಲ ವನ್ಯಜೀವಿ ವಲಯದ ಬೇಲದಕುಪ್ಪೆ ಮಾದೇಶ್ವರ  ದೇಗುಲ, ಮೊಳಿಯೂರು ವನ್ಯಜೀವಿ ವಲಯದ ಬೊಮ್ಮ ದೇವರ ದೇಗುಲ, ಇದೇ ವಲಯದ ಕುರ್ಣೆಗಾಲ ಶಾಖೆಯ ಅಳಗಂಜಿ ಮಾರಿ ಗುಡಿ, ಬೇಗೂರು ವನ್ಯಜೀವಿ ವಲಯದ ಬಾಕವಾಡಿ ಬಸವೇಶ್ವರ ದೇಗುಲ, ಗುಂಡ್ರೆ ವನ್ಯಜೀವಿ ವಲಯದ ಗುಂಡ್ರೆ ಮಾರಮ್ಮ ದೇಗುಲ ಅನ ಧಿಕೃತವಾಗಿ ತಲೆ ಎತ್ತಿವೆ.

ಇಲ್ಲಿನ ಹೆಚ್ಚಿನ ಶಕ್ತಿ ದೇಗುಲಗಳಲ್ಲಿ ಪ್ರತಿ ಮಂಗಳವಾರ-ಶುಕ್ರವಾರದಂದು ಸುಮಾರು 10ರಿಂದ 75 ಮಂದಿ ಸೇರಿ ಪೂಜೆ ಸಲ್ಲಿಸಿ ಕೋಳಿ, ಕುರಿ ಬಲಿ ಕೊಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಂದರ್ಭದಲ್ಲಿ ನೂರಾರು ಮಂದಿ ಸೇರಿ ಕೋಳಿ, ಕುರಿ, ಆಡು ಬಲಿ ಕೊಡುತ್ತಾರೆ. ಬಲಿ ನೀಡಲಾದ ಪ್ರಾಣಿಗಳ ತ್ಯಾಜ್ಯಗಳನ್ನು ಅಲ್ಲೆ ಎಸೆಯುತ್ತಾರೆ. ಅಡುಗೆಗಾಗಿ ಬೆಂಕಿ ಬಳಸುತ್ತಾರೆ. ಉದ್ಯಾನದ ಮರಗಳನ್ನು ಕಡಿದು ತಂದು ಬೆಂಕಿ ಹಾಕಿ ‘ಕೊಂಡ’ ಹಾಯಲಾಗುತ್ತಿದೆ.

ಮೈಸೂರು- ಮಾನಂದವಾಡಿ ರಾಜ್ಯ ಹೆದ್ದಾರಿಯಲ್ಲಿರುವ ಬಳ್ಳೆ ಮಾಸ್ತಮ್ಮ ದೇಗುಲ, ಬಾವಲಿ ಸಮೀಪದ ದೇಗುಲ, ಗೋಣಿಕೊಪ್ಪ- ಹುಣಸೂರು ರಸ್ತೆ ಹೊಸೂರು ಮಾರಮ್ಮ ದೇಗುಲ ಹೆದ್ದಾರಿಯ ಅಂಚಿನಲ್ಲಿಯೇ ಇದ್ದು ಇದರಿಂದ ಸಾರ್ವಜನಿಕರ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಭಕ್ತಿಯ ಹೆಸರಲ್ಲಿ ಪ್ರಾಣಿ ಬಲಿ, ಜೂಜು, ಮದ್ಯ ಸೇವನೆ, ಅಕ್ರಮ ಅರಣ್ಯ ಪ್ರವೇಶ ನಡೆಯುತ್ತಿದೆ.ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂಬ ದೂರು ಕೇಳಿಬರುತ್ತಿದೆ.

ಸುಪ್ರೀಂಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ಕೈಗೊಂಡಿರುವ ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ದೇಗುಲಗಳ ತೆರವು ಕಾರ್ಯಕ್ರಮದಡಿಯಲ್ಲಿ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿನ ಅನಧಿಕೃತ ದೇಗುಲಗಳನ್ನು ತಕ್ಷಣ ತೆರವುಗೊಳಿಸಬೇಕು ಇಲ್ಲವೆ ಗಡಿಯಿಂದಾಚೆಗೆ ಸ್ಥಳಾಂತರಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯಂತೆ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳನ್ನು 2007ರ ನವೆಂಬರ್ 30ರಂದೇ ಅತಿ ಸೂಕ್ಷ್ಮ ಹುಲಿ ತಾಣ ಎಂದು ಘೋಷಿಸಲಾಗಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಅಪರಾಧ.

ವನ್ಯಜೀವಿಗಳಿಗೆ ಅಪಾಯ: ಪ್ರಾಣಿಗಳನ್ನು ಬಲಿ ನೀಡಿ ಅವುಗಳ ತ್ಯಾಜ್ಯಗಳನ್ನು ಅಲ್ಲೆ ಎಸೆಯುವುದರಿಂದ ಚಿರತೆ ಮೊದಲಾದ ಮಾಂಸ ಭಕ್ಷಕಗಳು ಅಲ್ಲೇ ಠಳಾಯಿಸುತ್ತವೆ. ಸುಲಭ ಆಹಾರವನ್ನು ಹುಡುಕಿಕೊಂಡು ಬರುವುದರಿಂದ ಅವುಗಳ ಸಹಜ ಆಹಾರ ಕ್ರಮದಲ್ಲೂ ವ್ಯತ್ಯಯವಾಗಬಹುದು.

ಅಲ್ಲದೆ ರಾತ್ರಿ ಹೊತ್ತು ಹೆದ್ದಾರಿ ವಾಹನಗಳಿಗೆ ಸಿಕ್ಕಿ ಸಾಯುವ, ಕಳ್ಳ ಬೇಟೆಗಾರರಿಗೆ ಬಲಿಯಾಗುವ ಅಪಾಯವೂ ಇದೆ. ತ್ಯಾಜ್ಯ ಭಕ್ಷಿಸುವುದರಿಂದ ಬಲಿ ಕೊಡುವ ಪ್ರಾಣಿಗಳಿಗೆ ಇರಬಹುದಾದ ಊರಿನ ಮೂಲದ ರೋಗಗಳಿಗೆ ಅವು ತುತ್ತಾಗುವ   ಅಪಾಯ ಇದೆ. 

 ತ್ಯಾಜ್ಯಗಳ ರುಚಿ, ವಾಸನೆ ಅನುಸರಿಸಿ ಅವು ಗ್ರಾಮಗಳಿಗೆ ದಾಳಿ ಇಟ್ಟರೆ ಗ್ರಾಮಸ್ಥರೇ ಅಪಾಯ ಆಹ್ವಾನಿಸಿದಂತಾಗುವುದು ಎಂದು ವನ್ಯಜೀವಿ ಪ್ರೇಮಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT