ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಒಕ್ಕೂಟತತ್ವ ಮತ್ತು ಭಾರತೀಯತೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬಿಜೆಪಿಯು ರಾಜ್ಯಸಭೆಗೆ ನಟಿ ಹೇಮಮಾಲಿನಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದನ್ನು ಆಕ್ಷೇಪಿಸಿರುವವರನ್ನು ಆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರು ‘ಅವರೇನು ಭಾರತೀಯರಲ್ಲವೆ’ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಅವರ ಪಕ್ಷ ನಂಬಿರುವ ರಾಷ್ಟ್ರೀಯತೆ ಅಥವಾ ಭಾರತೀಯತೆಯ ಹುಸಿತನಕ್ಕೆ ತಕ್ಕುನಾಗಿಯೇ ಇದೆ.

ಏಕೆಂದರೆ, ಯಾರೇ ಒಬ್ಬ ಅಥವಾ ಒಬ್ಬಳು ಭಾರತೀಯ ಎನ್ನಿಸಿಕೊಳ್ಳುವುದು, ಆತ ಅಥವಾ ಆಕೆ ಒಂದು ರಾಜ್ಯದ ನಿಜವಾದ ನಿವಾಸಿಯಾಗಿ, ಆ ರಾಜ್ಯದ ಭಾಷೆ-ಸಂಸ್ಕೃತಿಗಳ ಅವಿಭಾಜ್ಯ ಅಂಗವಾಗಿರುವ ಮೂಲಕ. ಹೀಗಿರುವಾಗ ಯಾರಾದರೂ ಇನ್ನೊಂದು ರಾಜ್ಯದ ಪ್ರತಿನಿಧಿಯಾಗಲು ತನ್ನ ರಾಜ್ಯದಲ್ಲಿ ಮೈಗೂಡಿಸಿಕೊಂಡ ಭಾರತೀಯತೆಯನ್ನು ‘ಬಳಸಿ’ಕೊಳ್ಳುವುದು ಭಾರತೀಯತೆಯ ಕಲ್ಪನೆಗೆ ಮಾಡುವ ಅನ್ಯಾಯ ಮತ್ತು ಅಪಚಾರವೆನ್ನಿಸಿಕೊಳ್ಳುತ್ತದೆ.

ಒಂದು ಜನತೆ ನೇರವಾಗಿ ಆಯ್ಕೆ ಮಾಡುವ ಸದಸ್ಯರಿಂದ ರಚಿತವಾದ ಲೋಕಸಭೆ. ಇನ್ನೊಂದು ರಾಜ್ಯಗಳ ವಿಶಿಷ್ಟ ಹಿತಗಳನ್ನು ಕಾಪಾಡಲು, ಆಯಾ ರಾಜ್ಯಗಳ ಶಾಸಕರು ಆಯ್ಕೆ ಮಾಡುವ ಸದಸ್ಯರಿಂದ ರಚಿತವಾಗುವ ರಾಜ್ಯಗಳ ಸಭೆ-ರಾಜ್ಯಸಭೆ. ಹಾಗಾಗಿಯೇ ಸಂವಿಧಾನ ಕರ್ತೃಗಳು, ರಾಜ್ಯಸಭೆಗೆ ಆಯ್ಕೆಯಾಗುವವರು, ಅವರು ಯಾವ ರಾಜ್ಯದಿಂದ ಆಯ್ಕೆಯಾಗುವರೋ ಆ ರಾಜ್ಯದ ನಿವಾಸಿಗಳೇ ಆಗಿರಬೇಕೆಂದು ಕಾನೂನು ಮಾಡಿದ್ದರು. ಈ ಅರ್ಥದಲ್ಲಿಯೇ ನಮ್ಮದು ಮೂಲತಃ ಒಕ್ಕೂಟ ರಾಷ್ಟ್ರ.

ಈ ಒಕ್ಕೂಟ ರಾಷ್ಟ್ರವನ್ನು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಮುತ್ಸದ್ದಿಗಳಿಗಿಂತ ದೊಡ್ಡ ದೊಡ್ಡ ವಾಣಿಜ್ಯ ಹಿತಾಸಕ್ತಿಗಳ ದಲ್ಲಾಳಿಗಳು ಆಳತೊಡಗಿದ ಸಂದರ್ಭ ಉಂಟಾದ ಮೇಲೆ, ಅವರು ತಮ್ಮ ಆಳ್ವಿಕೆಯನ್ನು ಬಲಪಡಿಸಿಕೊಳ್ಳಲು, ಅದಕ್ಕೆ ಅಡ್ಡಿಯಾಗತೊಡಗಿದ್ದ ನೆಲಮೂಲ ಸಂಸ್ಕೃತಿಯನ್ನು ಆಧರಿಸಿದ ಒಕ್ಕೂಟ ತತ್ವವನ್ನು ನಿಧಾನವಾಗಿ ನಾಶ ಮಾಡತೊಡಗಿದರು. ಆ ಮೂಲಕ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿಗಳನ್ನು ಹಿನ್ನೆಲೆಗೆ ಸರಿಸುತ್ತಾ, ಜಾಗತಿಕ ಭವ್ಯ ಭಾರತದ ಕನಸನ್ನು ಬಿತ್ತಿ ಸ್ಥಳೀಯ ಬೇರುಗಳೇ ಇಲ್ಲದ ಭೋಳೆ ಭೋಳೆಯಾದ ಭಾರತೀಯತೆಯ ಕಲ್ಪನೆಯನ್ನು ಪೋಷಿಸತೊಡಗಿದರು.

 ಇವರಿಗೆ ಬೆಂಬಲವಾಗಿ ನಿಂತದ್ದು, ಧರ್ಮದ ಹೆಸರಿನಲ್ಲಿ ಏಕರೂಪಿಯಾದ ಅಖಿಲ ಭಾರತ ಸಂಸ್ಕೃತಿಯೊಂದನ್ನು ಆವಿಷ್ಕರಿಸಿಕೊಂಡು ಭಾರತವನ್ನು ಬೌದ್ಧಿಕವಾಗಿ ಆಳುತ್ತಿದ್ದ;ಆದರೆ, ಸ್ವಾತಂತ್ರ್ಯ ಹೋರಾಟ ರೂಪಿಸಿಕೊಟ್ಟ ಹೊಸ ಸಾಮಾಜಿಕ ದರ್ಶನದಿಂದಾಗಿ ಆ ಸವಲತ್ತನ್ನು ಕಳೆದುಕೊಂಡಿದ್ದ ಪುರೋಹಿತಶಾಹಿ. ಈ ಇಡೀ ಪ್ರಕ್ರಿಯೆಗೆ ಮೊದಲಿಂದ ಕೊನೆಯವರೆಗೆ ಒಂದು ರಾಜಕೀಯ ಸೈದ್ಧಾಂತಿಕ ಸ್ವರೂಪ ನೀಡಿ, ತನ್ನ ಅದ್ಭುತ ಸಂಘಟನಾ ಸಾಮರ್ಥ್ಯದ ಮೂಲಕ ಜನರ ಮಧ್ಯೆ ಅಧಿಕೃತ ಮಾನ್ಯತೆಯನ್ನೂ ಒದಗಿಸಿಕೊಟ್ಟ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ. ಹಾಗಾಗಿಯೇ ಈ ಪಕ್ಷದ ನೇತೃತ್ವದ ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿಯೇ, ಒಂದು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿ ಆ ರಾಜ್ಯದ ನಿವಾಸಿಯಾಗಿರಬೇಕು ಎಂಬ ಕಾನೂನನ್ನೇ ಸಂವಿಧಾನ ತಿದ್ದುಪಡಿಯೊಂದರ ಮೂಲಕ ರದ್ದು ಮಾಡಲಾಗಿದ್ದು! ಆ ಮೂಲಕ ರಾಜ್ಯಸಭೆಯ ಮೂಲ ಉದ್ದೇಶವನ್ನೇಭಂಗಗೊಳಿಸಿದ್ದು!!

ಇದಕ್ಕಾಗಿ ಬಿಜೆಪಿಯೊಂದನ್ನೇ ದೂಷಿಸಿ ಫಲವಿಲ್ಲ. ಅದು ಸೈದ್ಧಾಂತಿಕವಾಗಿ ಈ ಭಂಗವನ್ನು ಎತ್ತಿ ಹಿಡಿದು ತನ್ನ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಂಡಿದೆಯಷ್ಟೇ. ರಾಜಕಾರಣವೆಂಬುದನ್ನು ಅಧಿಕಾರ ಮತ್ತು ಹಣದ ಜೂಜಿನ ಕಣವನ್ನಾಗಿ ಪರಿವರ್ತಿಸುವಲ್ಲಿ ಭಾಗಿಯಾಗಿದ್ದ ಎಲ್ಲ ಪಕ್ಷಗಳೂ ಈ ಪ್ರಕ್ರಿಯೆಗೆ ತಂತಮ್ಮ ಕೊಡುಗೆಗಳನ್ನು ಸಲ್ಲಿಸಿವೆ. ನಮ್ಮ ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ದೇವೇಗೌಡ ಎಲ್ಲರೂ ಇದರಲ್ಲಿ ಪಾಲುದಾರರು. ಇದೆಲ್ಲದಕ್ಕೆ ಕಿರೀಟವಿಟ್ಟಂತಹ ಸಂಗತಿ ಎಂದರೆ, ಪಂಜಾಬಿನ ನಿವಾಸಿಯಾದ ಮನಮೋಹನ ಸಿಂಗರು ಎರಡು ಬಾರಿ ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿರುವುದೂ ಜನರಿಂದ ನೇರ ಆಯ್ಕೆಯ ಮೂಲಕ ಅಲ್ಲ;ತಾವು ಗುವಾಹಟಿ ನಗರದ ನಿವಾಸಿಯೆಂದು ಅಫಿಡಿವಿಟ್ ಸಲ್ಲಿಸಿ ಅಸ್ಸಾಂ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ!

ದುಃಖದ ಸಂಗತಿಯೆಂದರೆ, ಇದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಮನಮೋಹನ ಸಿಂಗ್ ಗುವಾಹಟಿ ನಿವಾಸಿಯಲ್ಲ ಎಂದು ಸಾಬೀತು ಮಾಡುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆಂದು ಘೋಷಿಸಿ, ಮನಮೋಹನ ಸಿಂಗರ ಆಯ್ಕೆಯನ್ನು ಎತ್ತಿ ಹಿಡಿಯಿತು. ಈ ತಕರಾರೇ ಬೇಡವೆಂದು ಮುಂದೆ ಎನ್.ಡಿ.ಎ. ಸರ್ಕಾರ ಈ ಸಂಬಂಧ ತಂದ ಸಂವಿಧಾನ ತಿದ್ದುಪಡಿಯನ್ನು ಹಿರಿಯ ಪತ್ರಕರ್ತ ಕುಲದೀಪ್ ನಯ್ಯಾರ್ ಪ್ರಶ್ನಿಸಿದಾಗ, ಅವರ ಅರ್ಜಿಯನ್ನು  ‘ಅಪ್ರಸ್ತುತ’ ಎಂದು ತಳ್ಳಿ ಹಾಕಿತು!

ಇದನ್ನು ಪೂರ್ಣ ಪೀಠದ ಮುಂದೆ ಪ್ರಶ್ನಿಸುವ ಅವಕಾಶವಿದೆಯಾದರೂ, ಸದ್ಯಕ್ಕೆ ಅದು ಯಾರಿಗೂ ಬೇಡವಾಗಿದೆ.  ಭಾರತ ಸಂವಿಧಾನಾತ್ಮಕವಾಗಿ ಏಕಾತ್ಮಕ ರಾಷ್ಟ್ರವೇ ಹೊರತು, ಒಕ್ಕೂಟ ರಾಷ್ಟ್ರವಲ್ಲ ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಬಹು ತಾಂತ್ರಿಕ ಪರಿಣಿತಿಯೊಂದಿಗೆ ವಾದಿಸಿ ಗೆಲ್ಲಬಲ್ಲ ಸಂವಿಧಾನ ಪಂಡಿತರ ದಂಡೇ ನಮ್ಮ ನಡುವೆ ಇದೆ.

ಆದುದರಿಂದ ಹೇಮಮಾಲಿನಿಯವರನ್ನು ನಮ್ಮ ರಾಜ್ಯದಿಂದ ರಾಜ್ಯಸಭೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದುದಕ್ಕೆ ಬಿಜೆಪಿಯನ್ನು ಹಂಗಿಸಿ ಪ್ರಯೋಜನವಿಲ್ಲ. ಬದಲಿಗೆ, ನಮ್ಮ ಸಂವಿಧಾನ ನಿರ್ಮಾಪಕರು  ‘ರಾಜ್ಯಸಭೆ’ ಎಂಬುದರ ಕಲ್ಪನೆಯ ಮೂಲಕ ಎತ್ತಿ ಹಿಡಿದಿದ್ದ ಒಕ್ಕೂಟ ರಾಷ್ಟ್ರ ತತ್ವವನ್ನು ನಾಶಮಾಡಿರುವ ಇಂದಿನ ರಾಜಕೀಯ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ.

ಈ ಕೆಲಸ ಕರ್ನಾಟಕದ ಭಾಷೆ-ಸಂಸ್ಕೃತಿಗಳ ಸ್ವಾಭಿಮಾನದ ಸಂಕೇತವಾಗಿ ಮತ್ತು ಆ ಮೂಲಕ ಒಕ್ಕೂಟ ತತ್ವವನ್ನು ಎತ್ತಿ ಹಿಡಿಯಲು ರಾಜ್ಯಸಭೆಗೆ ಸ್ಪರ್ಧಿಸಿರುವ ಡಾ. ಕೆ. ಮರುಳಸಿದ್ಧಪ್ಪ ಅವರಿಗೆ ಬೆಂಬಲವನ್ನು ಸಂಘಟಿಸುವ ಮೂಲಕ ಆರಂಭವಾಗಬೇಕಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿರುವ, ವಿಶೇಷವಾಗಿ ಬಿಜೆಪಿಯಲ್ಲಿನ ವಿಧಾನಸಭಾ ಸದಸ್ಯರು ಮತ್ತು ರಾಜಕೀಯ ಕಾರ್ಯಕರ್ತರು ನಿಜವಾದ ಸ್ವಾಭಿಮಾನಿ ಕನ್ನಡಿಗರೇ ಆಗಿದ್ದರೆ  ಕನ್ನಡ ಸಂಸ್ಕೃತಿಯ ನಿಜವಾದ ವಕ್ತಾರರಾಗಿರುವ ಮರುಳಸಿದ್ಧಪ್ಪನವರನ್ನು ಗೆಲ್ಲಿಸುವ ದೃಢ ನಿಶ್ಚಯ ಮಾಡಬೇಕಿದೆ.

ಈ ದೃಷ್ಟಿಯಿಂದ ರಾಜ್ಯ ಬಿಜೆಪಿ ಸದ್ಯಕ್ಕೆ ಮಾಡಬಹುದಾದ ನಿಜವಾದ ರಾಷ್ಟ್ರೀಯ ಕೆಲಸವೆಂದರೆ, ತನ್ನ ಶಾಸಕರಿಗೆ ಇಂತಹವರಿಗೇ ಮತ ಹಾಕಬೇಕೆಂಬ ‘ವಿಪ್’ ಜಾರಿ ಮಾಡದಿರುವುದು.

ಆ ಮೂಲಕ  ವಿಧಾನಸಭಾ ಸದಸ್ಯರಿಗೆ ಕನ್ನಡತನವಿಲ್ಲದ ಭಾರತೀಯತೆಯ ಬಗ್ಗೆ ಎಷ್ಟು ನಂಬಿಕೆಯಿದೆ ಎಂಬುದನ್ನು ಕಂಡುಕೊಂಡು, ನಂತರ ಭಾರತೀಯತೆಯನ್ನು ಕುರಿತ ತಮ್ಮ ವ್ಯಾಖ್ಯಾನಗಳನ್ನು ಪರಿಷ್ಕರಿಸಿಕೊಳ್ಳಬಹುದು!
-ಡಿ.ಎಸ್. ನಾಗಭೂಷಣ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT