ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಕಂಚಿಗೆ ತೃಪ್ತಿಪಟ್ಟ ಸಂಧ್ಯಾರಾಣಿ

Last Updated 22 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ರಾಂಚಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಆತಿಥೇಯ ಜಾರ್ಖಂಡ್‌ನ ಸಂಧ್ಯಾರಾಣಿ ದೇವಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ಲೈಟ್‌ವೇಟ್ (48ಕೆಜಿ) ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಬಂಗಾರದ ಪದಕ ಗೆಲ್ಲಬೇಕು ಎನ್ನುವ ಅವರ ಆಸೆಗೆ ಉತ್ತರ ಪ್ರದೇಶದ ಸೋನಿಯಾ ಚಾನು ಅಡ್ಡಿಯಾದರು. ಚಾನು ಅವರು (68+89=157) ಬಂಗಾರದ ಪದಕವನ್ನು ಮಡಿಗೇರಿಸಿಕೊಂಡರು. ಅಸ್ಸಾಂನ ಸಂಜಿತಾ ಚಾನು (67+87=154) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಕೊಕ್ಕೊ: ಫೈನಲ್‌ಗೆ ಕರ್ನಾಟಕ; ಉತ್ತಮ ಆಟವಾಡಿದ ಕರ್ನಾಟಕ ಪುರುಷ ತಂಡ ಕೊಕ್ಕೊ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ 16-15ರಲ್ಲಿ ಕೇರಳ ತಂಡವನ್ನು ಮಣಿಸಿ ಫೈನಲ್‌ಗೆ ಸ್ಥಾನ ಪಡೆಯಿತು. ಫೈನಲ್‌ನಲ್ಲಿ ಕರ್ನಾಟಕ  ಮಹಾರಾಷ್ಟ್ರದ ಸವಾಲನ್ನು ಎದುರಿಸಲಿದೆ.

ಹ್ಯಾಂಡ್‌ಬಾಲ್, ಸೆಮಿಫೈನಲ್‌ಗೆ ಕರ್ನಾಟಕ: ಕರ್ನಾಟಕ ಹ್ಯಾಂಡ್‌ಬಾಲ್ ತಂಡದ ಆಟಗಾರರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಕರ್ನಾಟಕ 48-25ರಲ್ಲಿ ಅಸ್ಸಾಂ ತಂಡದ ಎದುರು ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿತು. ಶ್ರವಣ್ 11 ಗೋಲುಗಳನ್ನು ಕಲೆ ಹಾಕಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಫೈನಲ್‌ಗೆ ರಸ್ತೋಗಿ, ಮುರಳಿ: ಮಹಾರಾಷ್ಟ್ರದ ಕಿರಣ್ ರಸ್ತೋಗಿ ಪುರುಷರ ಟೆನಿಸ್‌ನ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ 6-3, 3-6, 6-3ರಲ್ಲಿ ದೆಹಲಿಯ ವಿವೇಕ್ ಶೋಕೆನ್ ಮೇಲೂ, ತಮಿಳುನಾಡಿನ ಮಿಥುನ್ ಮುರಳಿ 3-6, 7-6, 6-4ರಲ್ಲಿ ದೆಹಲಿಯ ಅಶುತೋಷ್ ಸಿಂಗ್ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದರು.

ಬ್ಯಾಸ್ಕೆಟ್‌ಬಾಲ್: ಪುರುಷರ ವಿಭಾಗದಲ್ಲಿ ಪಂಜಾಬ್ ಮತ್ತು ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ತಂಡದವರು ಬ್ಯಾಸ್ಕೆಟ್‌ಬಾಲ್‌ನ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT