ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿಯು (ಎನ್‌ಸಿಎಸ್‌ಎಂ) ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಶುಕ್ರವಾರ ಉದ್ಘಾಟಿಸಿದರು.

ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ಆಯ್ಕೆ ಮಾಡಲಾದ ಒಟ್ಟು ಎಂಟು ತಂಡಗಳು 8 ನಾಟಕಗಳನ್ನು ಶನಿವಾರ ಪ್ರಸ್ತುತಪಡಿಸಲಿವೆ. ಎನ್‌ಸಿಎಸ್‌ಎಂನ ಕೇಂದ್ರ ಕಚೇರಿ ಇರುವ ಕೋಲ್ಕತ್ತಾ, ಪ್ರಾದೇಶಿಕ ಕಚೇರಿಗಳಾದ ನವದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನಲ್ಲಿ ಈ ಉತ್ಸವ ನಡೆಯಲಿದೆ.

ನಾಟಕೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ರಾಜ್ಯಪಾಲರು, `ವಿಜ್ಞಾನಿಯಾಗಲು ಬಯಸುವವರು ಪರಿಸರ ಪ್ರೇಮಿಗಳಾಗಬೇಕು. ಜಗತ್ತಿನಾದ್ಯಂತ ಜಾಗತಿಕ ತಾಪಮಾನ ಹೆಚ್ಚಳದ ಸಮಸ್ಯೆಗೆ ಪರಿಹಾರ ಒದಗಿಸುವುದು ವಿಜ್ಞಾನಿಗಳ ಕರ್ತವ್ಯವಾಗಿದೆ. ಆ ಕಾರ್ಯ ನೆರವೇರಿಸುವ ವಿಜ್ಞಾನಿಗಳು ಪರಿಸರದ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು~ ಎಂದರು.

`ತಂದೆ-ತಾಯಿಗಳಿಗೆ ಮಕ್ಕಳು ಗೌರವ ಕೊಡುವಂತೆ, ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡಬೇಕು. ಗುರು ತನ್ನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ. ಆದ್ದರಿಂದ ಅವರು ಗೌರವಕ್ಕೆ ಅರ್ಹರು. ದೇಶದ ಪ್ರಾಚೀನ ಸಂಸ್ಕೃತಿಯ ವೇದಗಳಲ್ಲೂ ಈ ಬಗ್ಗೆ ಉಲ್ಲೇಖವಿದೆ. ಗ್ರೀಕ್, ರೋಮನ್ ಮತ್ತು ಲ್ಯಾಟಿನ್ ನಾಗರಿಕತೆಯು ಹಲವು ರಂಗಗಳಲ್ಲಿ ಸಾಧಿಸಲು ವಿಫಲವಾದುದನ್ನು ಭಾರತ ತನ್ನ ಪ್ರಾಚೀನ ಸಂಸ್ಕೃತಿಯ ಬಲದಿಂದ ಸಾಧಿಸಿದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು~ ಎಂದು ಸಲಹೆ ನೀಡಿದರು.

ಎನ್‌ಸಿಎಸ್‌ಎಂನ ಮಹಾನಿರ್ದೇಶಕ ಜಿ.ಎಸ್.ರೌಟೆಲಾ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಸಂಸ್ಥೆಯು ಹಳ್ಳಿಗಾಡಿನಲ್ಲಿರುವ ಆಯ್ದ ನವೋದಯ ವಿದ್ಯಾಲಯಗಳಲ್ಲಿ ತಲಾ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಿದೆ~ ಎಂದರು.

`ಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯಗಳಲ್ಲೇ ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ಕೋಲ್ಕತ್ತಾ ನಂತರ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಂಸ್ಥೆಗೆ ಇದೊಂದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ನಗರದಲ್ಲಿ ಇನ್ನಷ್ಟು ಗ್ಯಾಲರಿಗಳನ್ನು ಸ್ಥಾಪಿಸಲಾಗುತ್ತಿದೆ~ ಎಂದು ಪ್ರಕಟಿಸಿದರು.

`ಈಗಾಗಲೇ ಧಾರವಾಡ ಮತ್ತು ಪಿಲಿಕುಳದಲ್ಲಿ ವಿಜ್ಞಾನ ಕೇಂದ್ರಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಧಾರವಾಡ ಕೇಂದ್ರ ನವೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಪಿಲಿಕುಳ ಕೇಂದ್ರ ಬರುವ ಫೆಬ್ರುವರಿಯಲ್ಲಿ ಆರಂಭಗೊಳ್ಳಲಿದೆ~ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಎಸ್.ರಂಗನಾಥನ್, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ಶಿವಪ್ರಸಾದ್ ಖೆಣೆದ, ವಸ್ತು ಸಂಗ್ರಹಾಲಯದ ಕ್ಯುರೇಟರ್ ಸಜೊ ಭಾಸ್ಕರನ್ ವೇದಿಕೆಯಲ್ಲಿದ್ದರು.

ಇಂದು ಪ್ರದರ್ಶನಗೊಳ್ಳುವ ನಾಟಕಗಳು ಇಂತಿವೆ
ದಿ ಲೈಫ್ ಆಫ್ ಗೆಲಿಲಿಯೊ (ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ, ಶಿರಸಿ), ಎಝಂ ಜನ್ಮಾನ್ (ಮೇಮುಂಡಿ ಹಿರಿಯ ಮಾಧ್ಯಮಿಕ ಶಾಲೆ, ಕೋಯಿಕ್ಕೊಡ್), ಕಾತಿಲ್ ಕೌನ್ (ದೇಶಮುಖ್ ಪಬ್ಲಿಕ್ ಸ್ಕೂಲ್, ಫರೀದ್‌ಕೋಟ್, ಪಂಜಾಬ್), ಲೋಥ್ರಿ (ಮಿಲೇನಿಯಂ ಪಬ್ಲಿಕ್ ಸ್ಕೂಲ್, ಕುರುಕ್ಷೇತ್ರ, ಹರಿಯಾಣ), ಪಿಧಿರ್ ಪಿಧಿ ಎಕೊಯ್ ಸಿಧಿ (ಬಬ್ಲಿಂಗ್ ಬಡ್ಸ್ ಸ್ಕೂಲ್, ಪುರುಲಿಯಾ, ಪ.ಬಂಗಾಳ), ಮುಝೆ ಕಹಾಂ ಲೆ ಆಯೆ ಹೋ ಕೊಲಂಬಸ್ (ಸರ್ಕಾರಿ ಮಾಧ್ಯಮಿಕ ಶಾಲೆ, ಶಾಸ್ತ್ರನಗರ, ಪಟ್ನಾ), ವಿಕ್ರಮ್ ಅಂಡ್ ಬೇತಾಳ (ಚಿಲ್ಡ್ರನ್ಸ್ ಅಕಾಡೆಮಿ, ಕಂಡಿವಲಿ, ಮುಂಬೈ), ಜೈ ಕಿಸಾನ್ ಜೈ ವಿಜ್ಞಾನ್ (ಬಾಯಿ ನವಾಜ್‌ಬಿ ಟಾಟಾ ಬಾಲಕಿಯರ ಪ್ರೌಢಶಾಲೆ, ನವಸಾರಿ, ಗುಜರಾತ್).  ಸ್ಥಳ: ವಸ್ತು ಸಂಗ್ರಹಾಲಯದ ಆವರಣ. ಪ್ರತಿ ನಾಟಕದ ಅವಧಿ 30 ನಿಮಿಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT