ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸ್ಪರ್ಧಾತ್ಮಕ ನೀತಿ ಮಾ.31ಕ್ಕೆ ಜಾರಿ

Last Updated 13 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ಉಡುಪಿ: `ಉದ್ದ್ಯಮಿಗಳನ್ನು ಪ್ರೋತ್ಸಾಹಿಸಿ, ಉದ್ಯಮದ ಬೆಳವಣಿಗೆಯೊಂದಿಗೆ ವಿಪುಲ ಉದ್ಯೋಗಾವಕಾಶ ಸೃಷ್ಟಿಗಾಗಿ ರಾಷ್ಟ್ರೀಯ ಸ್ಪರ್ಧಾತ್ಮಕ ನೀತಿ-2012 ಅನ್ನು ಮಾರ್ಚ್ 31ರಂದು ಜಾರಿಗೆ ತರಲಾಗುವುದು~ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಇಲ್ಲಿ ತಿಳಿಸಿದರು.

ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯದ ಉಡುಪಿ ಘಟಕವು ಭಾನುವಾರ ನಗರದ ಎಂ.ಜಿ.ಎಂ.ಕಾಲೇಜಿನಲ್ಲಿ ಆಯೋಜಿಸಿದ್ದ ಹೂಡಿಕೆದಾರರಿಗೆ ಶಿಕ್ಷಣ, ಜಾಗೃತಿ ಹಾಗೂ ಕಾರ್ಪೊರೇಟ್ ಆಡಳಿತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

`ದೇಶವು 2050ರಲ್ಲಿ ವಿಶ್ವದಲ್ಲಿಯೇ  ಅತಿ ದೊಡ್ಡ ಆರ್ಥಿಕ ಸುಸ್ಥಿರ ದೇಶವಾಗಿ ಹೊರಹೊಮ್ಮಲಿದೆ. ಆಗ ನಮ್ಮ ಆರ್ಥಿಕ ಪ್ರಗತಿ ದರ ಶೇ 20ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಆಂತರಿಕ ಉತ್ಪಾದನೆ ಪ್ರಮಾಣ  89.97 ಟ್ರಿಲಿಯನ್ ಡಾಲರ್‌ನಷ್ಟು ಇರಲಿದ್ದು ಚೀನಾದ ಪ್ರಮಾಣ 80.20 ಟ್ರಿಲಿಯನ್ ಡಾಲರ್‌ನಷ್ಟು ಇರಲಿದ್ದೆ. ನಮ್ಮ ದೇಶವೇ ಮುಂಚೂಣಿಯಲ್ಲಿರಲಿದೆ~ ಎಂದು ಅಂಕಿ ಅಂಶ ನೀಡಿದರು.

`ಋಣಾತ್ಮಕ ಚಿಂತನೆಯನ್ನು, ಪೂರ್ವಾಗ್ರಹ ಮನಸ್ಥಿತಿಯನ್ನು ಬಿಟ್ಟು ಕೆಲಸ ಮಾಡಿದಲ್ಲಿ ಬಂಡವಾಳ ಹೂಡಿಕೆ ಮತ್ತು ಕಂಪೆನಿ ವ್ಯವಹಾರಗಳನ್ನು ಅಭಿವೃದ್ಧಿ ಪಡಿಸಲು ನಮ್ಮ ರಾಷ್ಟ್ರದಂತಹ ಸ್ಥಳ ಇನ್ನೆಲ್ಲಿಯೂ ಸಿಗಲಿಕ್ಕಿಲ್ಲ~ ಎಂದರು.

`ಭವಿಷ್ಯದ ಬಗ್ಗೆ ಎಲ್ಲರೂ ಧನಾತ್ಮಕ ಚಿಂತನೆ ಮೂಡಿಸಿಕೊಳ್ಳಬೇಕು. ಯುವಜನತೆ, ಯುವ ಭಾರತ ಬಹುದೊಡ್ಡ ಶಕ್ತಿ. ನಮ್ಮಲ್ಲಿನ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆ, ಐಟಿ-ಬಿಟಿ ಪ್ರಗತಿಯಿಂದಾಗಿ ವಿಶ್ವದ ಮಹಾನ್ ರಾಷ್ಟ್ರಗಳು ನಮ್ಮತ್ತ ಮುಖಮಾಡಿವೆ~ ಎಂದರು.

`ಗ್ರೀನ್ ಇಂಡಿಯಾ~ ಸಾಕಾರವಾಗಲಿ: ಭ್ರಷ್ಟಾಚಾರ ರಹಿತ ಭಾರತ ಎನ್ನುವ ಕಲ್ಪನೆಯ `ಗ್ರೀನ್ ಇಂಡಿಯಾ~ ನಮ್ಮಲ್ಲಿ ಸಾಕಾರಗೊಳ್ಳಬೇಕಾಗಿದೆ. ಪಾರದರ್ಶಕ ಸರ್ಕಾರ, ಭ್ರಷ್ಟಾಚಾರ ರಹಿತ ಆಡಳಿತ, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯಿಂದ ಸಮಗ್ರ ರಾಷ್ಟ್ರವನ್ನು ಭ್ರಷ್ಟಾಚಾರ ಮುಕ್ತವಾಗಿ ಕಟ್ಟಬೇಕಿದೆ~ ಎಂದರು.

`ನಮ್ಮಲ್ಲಿ ಕಂಪೆನಿ ವ್ಯವಹಾರಗಳ ಬಗ್ಗೆ ಜಾಗೃತಿ ಮೂಡಬೇಕಿದೆ. ಸಾಂಸ್ಥಿಕ ನಾಗರಿಕತೆ ಬೆಳೆಸಬೇಕಿದೆ. ರಾಷ್ಟ್ರದಲ್ಲಿ ಇರುವಷ್ಟು ಸುಸ್ಥಿರ ಆರ್ಥಿಕ ಸ್ಥಿತಿ ಜಗತ್ತಿನಲ್ಲಿ ಇನ್ನ್ಲ್ಲೆಲೂ ಇಲ್ಲ. ನಮ್ಮಲ್ಲಿ ಎಲ್ಲ ಸಮಸ್ಯೆಗಳನ್ನು ಆರ್ಥಿಕ ಕುಸಿತಗಳನ್ನು ಎದುರಿಸುವ ಶಕ್ತಿ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.

` ಕೆಲ ವರ್ಷಗಳ ಹಿಂದೆ ಯುರೋಪ್ ರಾಷ್ಟ್ರಗಳಲ್ಲಿ ಜಾಗತಿಕ ಆರ್ಥಿಕ ಹಿಂಜರಿತದಿಂದ ನೂರಾರು ಬ್ಯಾಂಕ್‌ಗಳು ಮುಚ್ಚಿದವು. ಆದರೆ ನಮ್ಮ ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ ಕಿಂಚಿತ್ ಕೂಡ ಪರಿಣಾಮ ಬೀರಲಿಲ್ಲ. ಅದಕ್ಕೆ ನಮ್ಮ ಜನರ ಕೂಡಿಡುವಿಕೆ ಹಾಗೂ ಬ್ಯಾಂಕ್‌ಗಳ ರಾಷ್ಟ್ರೀಕರಣದ ವ್ಯವಸ್ಥಿತ ಕಾರ್ಯ ಯೋಜನೆಗಳು ಕೂಡ ಕಾರಣ~ ಎಂದು ಅವರು ವಿಶ್ಲೇಷಿಸಿದರು.

ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯದ ಉಡುಪಿ ಘಟಕದ ಅಧ್ಯಕ್ಷ ಕೆ.ಪದ್ಮನಾಭ ಕಾಂಚನ್ ಹಾಗೂ ಕಾರ್ಯದರ್ಶಿ ಮುರಳೀಧರ ಕಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT