ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ಚಾಲನೆ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸುಮಾರು 41 ಲಕ್ಷ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ವಾರ್ಷಿಕ 30 ಸಾವಿರ ರೂಪಾಯಿ ವೆಚ್ಚದವರೆಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸುವಂತಹ `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ~ಗೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಪ್ರಾಯೋಗಿಕವಾಗಿ ಹಲವು ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಈ ಯೋಜನೆಯಡಿ ಬಿಪಿಎಲ್ ವ್ಯಾಪ್ತಿಗೆ ಒಳಪಡುವ ಅಸಂಘಟಿತ ಕಾರ್ಮಿಕರ ಒಂದು ಕುಟುಂಬದ ಐವರು ಸದಸ್ಯರು ವಾರ್ಷಿಕ ಕೇವಲ 30 ರೂಪಾಯಿ ಪಾವತಿಸಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ 351 ಆಯ್ದ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಈ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರೆಯಲಿದೆ.

ಒಂದು ಕುಟುಂಬದಲ್ಲಿ ಪತಿ-ಪತ್ನಿ ಮತ್ತು ಅವರ ಮೂವರ ಮಕ್ಕಳು ಅಥವಾ ತಂದೆ-ತಾಯಿ, ಪತಿ-ಪತ್ನಿ ಮತ್ತು ಒಂದು ಮಗು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಪ್ರಯೋಜನ ಪಡೆಯಬಹುದು.

`ಸ್ಮಾರ್ಟ್ ಕಾರ್ಡ್~ ಪಡೆಯುವಂತಹ ಕುಟುಂಬ 1085 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 75ರಷ್ಟು ಹಣ ಒದಗಿಸಿದರೆ, ರಾಜ್ಯ ಸರ್ಕಾರ ಶೇ 25ರಷ್ಟು ನೆರವು ನೀಡಲಿದೆ.

ಕುಟುಂಬವು ಚಿಕಿತ್ಸೆ ಪಡೆಯಲು ತೆರಳುವ ಸಂದರ್ಭದಲ್ಲಿ 100 ರೂಪಾಯಿ ಪ್ರಯಾಣ ವೆಚ್ಚವನ್ನೂ ಪಡೆಯಬಹುದು. ಈ ರೀತಿ ಒಂದು ಕುಟುಂಬಕ್ಕೆ ವರ್ಷಕ್ಕೆ 1000 ರೂಪಾಯಿವರೆಗೆ ಪ್ರಯಾಣ ವೆಚ್ಚ ಪಡೆಯಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 15 ದಿನ ಕೆಲಸ ಮಾಡಿದಂತಹ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಯೋಜನೆ ಅನುಷ್ಠಾನ ವಿಳಂಬಕ್ಕೆ ಖರ್ಗೆ ಅಸಮಾಧಾನ: ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, `ದೇಶದಲ್ಲಿ 2007ರಲ್ಲಿಯೇ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಜಾರಿಗೆ ಬಂದರೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳು ಐದು ವರ್ಷಗಳ ನಂತರ ಇದೀಗ ಅನುಷ್ಠಾನಗೊಳಿಸುತ್ತಿವೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಪ್ರತಿ ಬಾರಿ ಈ ಯೋಜನೆಯ ಬಗ್ಗೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ನಡೆಸಿದಾಗಲೆಲ್ಲಾ ನಾನು ತಲೆತಗ್ಗಿಸಬೇಕಾಗಿತ್ತು. ಆದರೆ, ತಡವಾಗಿಯಾದರೂ ಕರ್ನಾಟಕದಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ~ ಎಂದರು.

`ಕಟ್ಟಡ ಕಾರ್ಮಿಕರ ಸೆಸ್ 932 ಕೋಟಿ ರೂಪಾಯಿ ಸೇರಿದಂತೆ ಈ ವರ್ಷ ಬಿಡುಗಡೆ ಮಾಡಿರುವ 233 ಕೋಟಿ ರೂಪಾಯಿ ಸೇರಿ ಒಟ್ಟು 1065 ಕೋಟಿ ರೂಪಾಯಿಗಳ ಪೈಕಿ ರಾಜ್ಯ ಸರ್ಕಾರ ಇದುವರೆಗೆ ಕೇವಲ 2.95 ಕೋಟಿ ರೂಪಾಯಿಗಳನ್ನಷ್ಟೇ ಖರ್ಚು ಮಾಡಿದೆ. ಇದ್ಲ್ಲಲದೆ, ಇಎಸ್‌ಐ ಆಸ್ಪತ್ರೆಗಳ ಚಿಕಿತ್ಸೆ, ಔಷಧಿ, ಕಟ್ಟಡಗಳ ನಿರ್ಮಾಣ, ದುರಸ್ತಿ ಮತ್ತಿತರ ಉದ್ದೇಶಗಳಿಗೂ ಕೇಂದ್ರ ಸರ್ಕಾರ ಶೇ 87.5ರಷ್ಟು ನೆರವು ನೀಡುತ್ತಿದೆ. ಆದರೆ, ಈ ಹಣವನ್ನು ಸಕಾಲದಲ್ಲಿ ರಾಜ್ಯ ಸರ್ಕಾರ ಖರ್ಚು ಮಾಡುತ್ತಿಲ್ಲ. ಇಲಾಖೆಯಲ್ಲಿ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಯ ನೇಮಕಾತಿಯೇ ನಡೆದಿಲ್ಲ~ ಎಂದು ವಿಷಾದಿಸಿದರು.

`ಒಮ್ಮೆ ಹಣ ಖರ್ಚಾದರೆ ಮತ್ತೆ ಸಿಗೋದು ಕಷ್ಟ. ಕೇಂದ್ರ ಸರ್ಕಾರದ ಹಣ ಪಡೆಯಲು ರಾಜ್ಯ ಸರ್ಕಾರಗಳು `ಬೊಫೆ ಸಿಸ್ಟಮ್~ನಲ್ಲಿ ನಿಲ್ಲಬೇಕು. ಯಾರು ಮೊದಲು ಪ್ರಯತ್ನ ನಡೆಸುತ್ತಾರೋ ಅವರಿಗೆ ಬೇಗ ಹಣ ಸಿಗಲಿದೆ. `ಕ್ಯೂ~ನಲ್ಲಿ ನಿಂತರೆ ಅಲ್ಲೇ ಉಳಿಯುತ್ತೀರಿ. ಇದು ಟೀಕೆಯಲ್ಲ. ಸಲಹೆಯಷ್ಟೇ~ ಎಂದು ಖರ್ಗೆ ಮಾರ್ಮಿಕವಾಗಿ ಹೇಳಿದರು.

`ಈ ಯೋಜನೆಗಾಗಿ ಕೇಂದ್ರ ಸರ್ಕಾರ ಈ ವರ್ಷ 1124 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ರಾಜ್ಯ ಸರ್ಕಾರಕ್ಕೆ ಈಗಾಗಲೇ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ~ ಎಂದರು.

ಆರು ತಿಂಗಳಲ್ಲಿ ಖರ್ಚು ಮಾಡುತ್ತೇವೆ- ಸಿಎಂ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರ ಮೂರ‌್ನಾಲ್ಕು ವರ್ಷಗಳಲ್ಲಿ ಒದಗಿಸಿರುವ ಹಣವನ್ನು ಕೇವಲ ಆರು ತಿಂಗಳಲ್ಲಿ ನಯಾ ಪೈಸೆ ಬಾಕಿ ಉಳಿಸದೆ ಖರ್ಚು ಮಾಡುತ್ತೇವೆ~ ಎಂದು ಭರವಸೆ ನೀಡಿದರು.

`ಅಸಂಘಟಿತ ಕಾರ್ಮಿಕರನ್ನು ಗುರುತಿಸಿ, ಪಟ್ಟಿ ತಯಾರಿಸುವ ಪ್ರಕ್ರಿಯೆ ಕಷ್ಟವಾಗಿದ್ದರಿಂದ ಯೋಜನೆಯ ಅನುಷ್ಠಾನಕ್ಕೆ ವಿಳಂಬವಾಯಿತು. ಈಗ ಕೇಂದ್ರ ಕಾರ್ಮಿಕ ಸಚಿವರು ದುಡ್ಡಿನ ಮೂಟೆ ತೋರಿಸಿದ್ದಾರೆ. ಜನರ ಹಿತದೃಷ್ಟಿಯಿಂದ ಅದನ್ನು ಖರ್ಚು ಮಾಡುವ ಜವಾಬ್ದಾರಿ ಸರ್ಕಾರದ್ದು~ ಎಂದರು.

ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, `ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಸುಮಾರು 41 ಲಕ್ಷ ಅಸಂಘಟಿತ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಿದ್ದಾರೆ~ ಎಂದರು.

ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಜಿ.ಎಸ್. ನಾರಾಯಣಸ್ವಾಮಿ ಸ್ವಾಗತಿಸಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕ ಆರ್. ರೋಷನ್‌ಬೇಗ್, ಕೇಂದ್ರ ಕಾರ್ಮಿಕ ಇಲಾಖೆಯ ಉಪ ಮಹಾ ನಿರ್ದೇಶಕ ಜೋಷಿ, ಕಾರ್ಮಿಕ ಆಯುಕ್ತ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT