ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌: 114 ವರ್ಷದ ಅಜ್ಜನಿಗೆ ಪ್ರವೇಶವಿಲ್ಲ!

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಕಿ.ಮೀ ದೂರದ ಮೀರತ್‌ನಿಂದ ಉದ್ಯಾನ ನಗರಿಗೆ ಬಂದಿಳಿದಿರುವ 114 ವರ್ಷ ವಯಸ್ಸಿನ ಧರ್ಮಪಾಲ್ ಸಿಂಗ್ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಉತ್ಸಾಹದಿಂದ ಸಿದ್ಧತೆ ನಡೆಸುತ್ತಿದ್ದರು.  ಈ ಬಾರಿಯೂ ಪದಕ ಗೆಲ್ಲಬೇಕೆಂಬ ಛಲ ಅವರ ಸುಕ್ಕುಗಟ್ಟಿದ ಹಣೆಯ ನೆರಿಗೆಗಳಲ್ಲಿ ನಲೆದಾಡುತಿತ್ತು. ಆದರೆ ಸಂಜೆ ವೇಳೆಗೆ ಅವರಿಗೊಂದು ಆಘಾತ ಕಾದಿತ್ತು.

ಕಾರಣ ಗುರುವಾರ ಆರಂಭವಾಗಲಿರುವ 33ನೇ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಧರ್ಮಪಾಲ್ ಅವರಿಗೆ ಸಂಘಟಕರು ಅವಕಾಶ ನಿರಾಕರಿಸಿದ್ದಾರೆ. ಇದಕ್ಕೆ ನೀಡುವ ಕಾರಣ ನೂರಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಅವಕಾಶ ಇಲ್ಲ ಎಂಬುದು.

`ನೂರು ವರ್ಷ ಮೇಲ್ಪಟ್ಟವರಿಗೆ ನಾವು ಅವಕಾಶ ನೀಡುವುದಿಲ್ಲ. ಫೆಡರೇಷನ್‌ನ ನಿಯಮಗಳ ಪ್ರಕಾರ ಅದಕ್ಕೆ ಅವಕಾಶವಿಲ್ಲ. ನಮ್ಮಲ್ಲಿರುವ ದಾಖಲಾತಿಯಲ್ಲಿ ಧರ್ಮಪಾಲ್ ವಯಸ್ಸು 114 ವರ್ಷ ಎಂದಿದೆ. ಹಾಗಾಗಿ ಅವರಿಗೆ ಪ್ರವೇಶವಿಲ್ಲ~ ಎಂದು ಭಾರತ ಹಿರಿಯರ ಅಥ್ಲೆಟಿಕ್ ಫೆಡರೇಷನ್ ಕಾರ್ಯದರ್ಶಿ ಡಿ.ಡೇವಿಡ್ ಪ್ರೇಮ್‌ನಾಥ್ `ಪ್ರಜಾವಾಣಿ~ಗೆ ತಿಳಿಸಿದರು. 

ಆದರೆ ಗರಿಷ್ಠ ವಯಸ್ಸಿನ ನಿರ್ಬಂಧವು ಕೆಲ ಅಥ್ಲೀಟ್‌ಗಳಿಗಂತೂ ಗೊತ್ತೇ ಇಲ್ಲ. ಅವಕಾಶ ನಿರಾಕರಿಸಿದ್ದಕ್ಕೆ ಉತ್ತರ ಪ್ರದೇಶ ಹಿರಿಯರ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಕೆ.ಎನ್.ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  `ನಮಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 95 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಧರ್ಮಪಾಲ್ ಪಾಲ್ಗೊಳ್ಳಲಿದ್ದಾರೆ ಎಂದು ನಾವು ಮೊದಲೇ ಪಟ್ಟಿ ಕಳುಹಿಸಿದ್ದೆವು. ಈಗ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ~ ಎಂದು ಪ್ರಶ್ನಿಸಿದರು.

ಚಂಡೀಗಡದಲ್ಲಿ ನಡೆದ 32ನೇ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಪದಕ ಗೆದ್ದ ಬಗ್ಗೆ ಧರ್ಮಪಾಲ್ ಪ್ರಮಾಣ ಪತ್ರ ಹೊಂದಿದ್ದಾರೆ. 110 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪಾಲ್ಗೊಂಡು ಮೂರು ಪದಕ ಗೆದ್ದಿರುವ ಪ್ರಮಾಣ ಪತ್ರವನ್ನು ಅವರು ತೋರಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೇಮನಾಥ್, `ಹಿಂದಿನ ಕೂಟದಲ್ಲಿ 95 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೆಲವರು ಪಾಲ್ಗೊಂಡು ಪದಕ ಗೆದ್ದಿದ್ದರು. ಅವರ ವಯಸ್ಸು ನೂರು ದಾಟಿದೆ ಎಂಬುದು ಆಮೇಲೆ ನಮಗೆ ಗೊತ್ತಾಯಿತು. ಆದರೆ ಇಂತಹ ಘಟನೆ ನಡೆಯಲು ಮತ್ತೆ ಅವಕಾಶ ನೀಡುವುದಿಲ್ಲ~ ಎಂದರು.

ಈ ಕೂಟವನ್ನು ವೀಕ್ಷಿಸಲು ಆಗಮಿಸಿರುವ ವಿಶ್ವ ಹಿರಿಯರ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಸ್ಟ್ಯಾನ್ ಪೆರ್ಕಿನ್ಸ್ ಹಾಗೂ ಕಾರ್ಯದರ್ಶಿ ವಿನ್‌ಸ್ಟನ್ ಥಾಮಸ್ ಜೊತೆ ಈ ಸಂಬಂಧ ಚರ್ಚೆ ನಡೆಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಈ ಬಗ್ಗೆ ತಡರಾತ್ರಿವರೆಗೂ ಚರ್ಚೆ ನಡೆಯುತ್ತಲೇ ಇತ್ತು.

`ನಾನು ಚಂಡೀಗಡ ಅಂತರರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದೆ. ಕಳೆದ ವರ್ಷದ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಂಡು ಪದಕ ಗೆದ್ದ್ದ್ದಿದೇನೆ. ಈ ಬಾರಿ ಕೂಡ ಅದೇ ಉತ್ಸಾಹದಲ್ಲಿ ಎರಡು ಸಾವಿರ ಕಿ.ಮೀ. ದೂರದಿಂದ ಸ್ವಂತ ದುಡ್ಡು ಖರ್ಚು ಮಾಡಿಕೊಂಡು ರೈಲಿನಲ್ಲಿ ಇಲ್ಲಿಗೆ ಬಂದಿದ್ದೇನೆ. ಈ ಬಾರಿ ಏಕೆ ಅವಕಾಶ ನೀಡುವುದಿಲ್ಲ~ ಎಂದು ಧರ್ಮಪಾಲ್ ನುಡಿದರು.

ಮೀರತ್ ಬಳಿಯ ಪುಟ್ಟ ಗ್ರಾಮದವರಾದ ಧರ್ಮಪಾಲ್ ರೈತ ಕುಟುಂಬದವರು. ಅಥ್ಲೆಟಿಕ್ ಚಾಂಪಿಯನ್‌ಷಿಪ್ ಉದ್ಘಾಟಿಸಲಿರುವ ಗಣ್ಯರಿಗೆ ನೀಡಲೆಂದು ಅವರು ಮವಾನಾದ ವಿಶೇಷ ಸಕ್ಕರೆಯನ್ನು ಪೊಟ್ಟಣದಲ್ಲಿ ಕಟ್ಟಿಸಿಕೊಂಡು ತಂದಿದ್ದಾರೆ.

`ಇಷ್ಟು ವಯಸ್ಸಾದರೂ ಬದುಕಿದ್ದೇನೆ. ಅದಕ್ಕೆ ಕಾರಣ ಅಥ್ಲೆಟಿಕ್ಸ್. ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಕಾರಣ ನಾನು ಇನ್ನೂ ಆರೋಗ್ಯವಾಗಿದ್ದೇನೆ. ನಾನು ಸಸ್ಯಹಾರಿ. ಇದುವರೆಗೂ ಕನ್ನಡಕ ಧರಿಸಿಲ್ಲ. ಕನ್ನಡಕವಿಲ್ಲದೇ ಬರೆಯಬಲ್ಲೆ ಹಾಗೂ ಓದಬಲ್ಲೆ. ಆದರೆ ನನಗೆ ಗೊತ್ತಿರುವ ಭಾಷೆ ಹಿಂದಿ ಮಾತ್ರ~ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT