ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹುಲಿ ಗಣತಿ ಆರಂಭ

ಸಮೀಕ್ಷೆಗೆ ನೆರವಾದ ‘ಹುಲಿ’ ತಂತ್ರಾಂಶ
Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ­ರಂಗನಾಥ­ಸ್ವಾಮಿ ಹುಲಿ ರಕ್ಷಿತಾರಣ್ಯ (ಬಿಆರ್‌ಟಿ), ಬಂಡೀಪುರ ರಾಷ್ಟ್ರೀಯ ಉದ್ಯಾನ, ಮಲೆಮಹದೇಶ್ವರ ವನ್ಯ­ಜೀವಿ­ಧಾಮ ಹಾಗೂ ಕಾವೇರಿ ವನ್ಯಜೀವಿ­ಧಾಮದಲ್ಲಿ ಬುಧ­ವಾರ ರಾಷ್ಟ್ರೀಯ ಹುಲಿ ಗಣತಿ ಆರಂಭವಾಯಿತು.

ಚಾಮರಾಜನಗರ ವೃತ್ತದ ವ್ಯಾಪ್ತಿ­ಯ 2,638 ಚ.ಕಿ.ಮೀ. ವ್ಯಾಪ್ತಿಯ ಅರಣ್ಯ­­ದಲ್ಲಿ ಗಣತಿ ನಡೆಯು­ತ್ತಿದೆ. ಬುಧ­ವಾರದಿಂದ ಶುಕ್ರವಾರದವರೆಗೆ ಮಾಂಸಾ­­ಹಾರಿ ಪ್ರಾಣಿಗಳ ಗಣತಿ ನಡೆ­ಯ­ಲಿದೆ. ಇದೇ. 21ರಿಂದ 23ರವರೆಗೆ ಸಸ್ಯಾಹಾರಿ ಪ್ರಾಣಿಗಳ ಗಣತಿ ನಡೆಯುತ್ತದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂ­ಸೇವ­ಕರಿಗೆ 2 ನಮೂನೆ ನೀಡ­ಲಾಗಿದೆ. ತಮಗೆ ನಿಗದಿ­ಪಡಿ­ಸಿ­ರುವ 5 ಕಿ.ಮೀ. ಉದ್ದದ ಸೀಳುದಾರಿಯಲ್ಲಿ ಕ್ರಮಿಸಿ ಹುಲಿಯ ಹೆಜ್ಜೆಗುರುತು, ಮಲ, ಮರದಲ್ಲಿ ಉಗುರಿ­ನಿಂದ ಪರಚಿರುವ ಗುರುತಿನ ಬಗ್ಗೆ ಮೊದಲ ನಮೂನೆ­­ಯಲ್ಲಿ ದಾಖಲಿಸಬೇಕಿದೆ. ಇತರೆ ಮಾಂಸಾ­ಹಾರಿ ಪ್ರಾಣಿ­ಗಳ ಬಗ್ಗೆ ಎರಡನೇ ನಮೂನೆಯಲ್ಲಿ ದಾಖ­­ಲಿಸಬೇಕಿದೆ.

‘ಹುಲಿ’ ತಂತ್ರಾಂಶ: ಬಿಆರ್‌ಟಿ ರಕ್ಷಿತಾ­ರಣ್ಯದಲ್ಲಿ ಹುಲಿ­ಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯಿಂದಲೇ ತಂತ್ರಾಂಶ ರೂಪಿಸಿದ್ದು, ಇದಕ್ಕೆ ‘ಹುಲಿ’ ಎಂದು ಹೆಸರಿಡಲಾಗಿದೆ. ಪ್ರಸ್ತುತ ಈ ತಂತ್ರಾಶವನ್ನು ಹುಲಿ ಗಣತಿಗೆ ಬಳಸಿಕೊಳ್ಳಲಾಗಿದೆ. ಗಣತಿ­ದಾರರಿಗೆ ನೀಡಿ­ರುವ ಟ್ಯಾಬ್ಲೆಟ್‌ ಮತ್ತು ಮೊಬೈಲ್‌ನಲ್ಲಿ ತಂತ್ರಾಂಶ ಅಳ­ವಡಿಸಲಾಗಿದೆ.

ಈ ತಂತ್ರಾಂಶದ ಮೂಲಕ ಕಳ್ಳಬೇಟೆ ತಡೆ ಶಿಬಿರ ದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅರಣ್ಯ ವೀಕ್ಷ­ಕರು, ರಕ್ಷಕರು, ವನಪಾಲಕರು ನಿರ್ವಹಿಸುತ್ತಿ ರುವ ಕೆಲಸದ ಬಗ್ಗೆ ನಿಗಾವಹಿಸಲಾಗುತ್ತದೆ. ಎಲ್ಲರಿಗೂ ಹುಲಿ ತಂತ್ರಾಂಶ ಹಾಗೂ ಜಿಪಿಎಸ್‌(ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟ್ಂ) ಉಪಕರಣ ನೀಡಲಾಗಿದೆ. ಸಿಬ್ಬಂದಿ ತಮಗೆ ನಿಗದಿಪಡಿಸಿರುವ ಕಾರ್ಯಕ್ಷೇತ್ರದಲ್ಲಿ ಇದ್ದಾರೆಯೇ ಎಂಬುದನ್ನು ಅಧಿಕಾರಿಗಳು ಕಚೇರಿ­ಯಲ್ಲಿ ಕುಳಿತು ಪರೀಕ್ಷಿಸಬಹುದು.

ಗಣತಿ ನಡೆಯುತ್ತಿರುವ ದೇಶದ 17 ರಾಜ್ಯಗಳ 41 ಹುಲಿ ರಕ್ಷಿತಾರಣ್ಯದಲ್ಲಿ ಹುಲಿಗಳ ಸಂರಕ್ಷಣೆಗೆ ಇಂತಹ ತಂತ್ರ­ಜ್ಞಾನ ರೂಪಿಸಿಲ್ಲ. ಜತೆಗೆ, ‘ಹುಲಿ’ ತಂತ್ರಾಂಶ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿ­ಕಾರ (ಎನ್‌ಟಿ ಸಿಎ)ದಿಂದಲೂ ಮನ್ನಣೆ ಪಡೆದಿದೆ.

‘ಹುಲಿ ತಂತ್ರಾಂಶ ಬಳಸಿಕೊಂಡು ಗಣತಿದಾರರು ಭರ್ತಿ ಮಾಡಬೇಕಿರುವ ನಮೂನೆಗಳನ್ನು ಮೊಬೈಲ್‌ ಹಾಗೂ ಟ್ಯಾಬ್ಲೆಟ್‌ಗೂ ಅಳವಡಿಸಲಾಗಿದೆ.

ಹೀಗಾಗಿ, ಗಣತಿದಾರರು ನಮೂನೆ­ಯಲ್ಲಿ ಮಾಹಿತಿ ದಾಖಲಿ ಸುವ ಜತೆಗೆ ಹುಲಿ ತಂತ್ರಾಂಶದಲ್ಲೂ ಮಾಹಿತಿ ದಾಖಲಿ­ಸುತ್ತಾರೆ. ನಿಖರವಾದ ಮಾಹಿತಿ ತಂತ್ರಾಂಶ ದಲ್ಲಿಯೂ ದಾಖಲಾಗುತ್ತದೆ. ಅದನ್ನು ನಾವು ಸುಲಭವಾಗಿ ಕ್ರೋಡೀಕ­ರಿಸಲು ಸಹಕಾರಿ­ಯಾಗಲಿದೆ’ ಎಂದು ಬಿಆರ್‌ಟಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾ ಧಿಕಾರಿ ಮತ್ತು ನಿರ್ದೇಶಕ ಎಸ್‌.ಎಸ್‌. ಲಿಂಗರಾಜ ತಿಳಿಸಿದರು.

  ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್‌­ಕುಮಾರ್‌ ದಾಸ್‌, ‘ಬಿಆರ್‌ಟಿ ರಕ್ಷಿತಾರಣ್ಯ– 45, ಕಾವೇರಿ– 54 ಹಾಗೂ ಮಲೆಮಹದೇಶ್ವರ ವನ್ಯಜೀವಿ­ಧಾಮದಲ್ಲಿ 45 ಸೀಳುದಾರಿ (ಲೈನ್‌ ಟ್ರಾನ್ಸೆಕ್ಟ್‌) ಗುರುತಿಸಲಾಗಿದೆ. ಒಟ್ಟು 124 ಸ್ವಯಂಸೇವಕರು ಗಣತಿಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.

ಏಳು ಕಡೆ ಹುಲಿ ದರ್ಶನ
ಗಣತಿಯ ಮೊದಲ ದಿನ ಸ್ವಯಂಸೇವಕರಿಗೆ ಹುಲಿಗಳು ನಿರಾಸೆ ಮೂಡಿಸಿಲ್ಲ. ಬಿಆರ್‌ಟಿ ರಕ್ಷಿತಾರಣ್ಯದ ಒಂದು ಸೀಳುದಾರಿ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದ ಆರು ಸೀಳುದಾರಿ ಯಲ್ಲಿ ಗಣತಿದಾರರಿಗೆ ಹುಲಿಗಳು ದರ್ಶನ ನೀಡಿವೆ. ಆದರೆ, ಬೆರಳೆಣಿಕೆಯಷ್ಟು ಸ್ವಯಂ ಸೇವ ಕರು ಮಾತ್ರ ದರ್ಶನ ಭಾಗ್ಯ ಪಡೆದಿದ್ದಾರೆ.

ಬಂಡೀಪುರದ ಮೂಲೆಹೊಳೆ ಅರಣ್ಯ ವಲಯದಲ್ಲಿ ಮೂರು, ಮದ್ದೂರು, ಕುಂದಕೆರೆ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ತಲಾ ಒಂದು ಹುಲಿ ದರ್ಶನ ನೀಡಿವೆ.

‘ಬಂಡೀಪುರದಲ್ಲಿ ಮೊದಲ ದಿನ ಯಾವುದೇ ತೊಂದರೆ ಇಲ್ಲದೆ ಗಣತಿ ನಡೆದಿದೆ. 115 ಸೀಳುದಾರಿ ಗುರುತಿಸಲಾಗಿತ್ತು. ಒಟ್ಟು 234 ಸ್ವಯಂ ಸೇವಕರು ಗಣತಿಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಚ್‌.ಸಿ. ಕಾಂತರಾಜು ತಿಳಿಸಿದರು.

ರಣಹದ್ದು ದಾಖಲು ಕಡ್ಡಾಯ
ಹುಲಿ ಗಣತಿಯ ಜತೆಗೆ ಗಣತಿದಾರರು ಅಳಿವಿನ ಅಂಚಿನಲ್ಲಿರುವ ರಣಹದ್ದುಗಳ ಬಗ್ಗೆಯೂ ದಾಖಲಿಸಬೇಕಿದೆ. ಇದಕ್ಕಾಗಿ ಪ್ರತ್ಯೇಕ ನಮೂನೆ ನೀಡಲಾಗಿದೆ.
ಬಿಆರ್‌ಟಿ ರಕ್ಷಿತಾರಣ್ಯದಲ್ಲಿ ಬಿಳಿ ರಣಹದ್ದು (ಈಜಿಫ್ಟಿಯನ್‌ ವಲ್ಚರ್‌), ಕೆಂದಲೆ ರಣಹದ್ದು (ರೆಡ್‌ ಹೆಡೆಡ್‌ ವಲ್ಚರ್‌), ಬಿಳಿಬೆನ್ನಿನ ರಣಹದ್ದು (ವೈಟ್‌ ಬ್ಯಾಕ್ಡ್‌ ವಲ್ಚರ್‌) ಪತ್ತೆಯಾಗಿವೆ.

‘ರಣಹದ್ದುಗಳು ಅವಸಾನದ ಹಂಚಿನಲ್ಲಿವೆ. ಈ ಹಿನ್ನೆಲೆಯಲ್ಲಿ ಎನ್‌ಟಿಸಿಎ ಸೂಚನೆ ಅನ್ವಯ ಗಣತಿದಾರರು ತಮಗೆ ಕಾಣಸಿಗುವ ರಣಹದ್ದುಗಳ ಬಗ್ಗೆಯೂ ನಮೂನೆಯಲ್ಲಿ ದಾಖಲಿಸಬೇಕಿದೆ’ ಎಂದು ಲಿಂಗರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT