ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ್ಙ75 ಲಕ್ಷ: ಸಚಿವ

Last Updated 20 ಅಕ್ಟೋಬರ್ 2012, 4:35 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನಾದ್ಯಾಂತ ದುಃಸ್ಥಿತಿಗೆ ಒಳಗಾಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ರಸ್ತೆಗಳ ದುರಸ್ತಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದು, ಇದಕ್ಕಾಗಿ 75 ಲಕ್ಷ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಇನ್ನೂ 7-8 ದಿನಗಳೊಳಗೆ ದುರಸ್ತಿ ಕಾರ್ಯ ಮುಗಿಸುವಂತೆ ಹೆದ್ದಾರಿ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಪಡಿತರ ಚೀಟಿಗಾಗಿ ತಾಲ್ಲೂಕಿನಲ್ಲಿ 7,614 ಹೊಸ ಅರ್ಜಿಗಳು ಬಂದಿದ್ದು, ಅದರಲ್ಲಿ 3,728 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಉಳಿದಿರುವ 2,192 ಅರ್ಜಿಗಳನ್ನು ಮುದ್ರಿತವಾಗಿ ಸಂಬಂಧಿತ ಗ್ರಾಮ ಪಂಚಾಯಿತಿಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ 1,600 ಅರ್ಜಿಗಳ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ತಾಲ್ಲೂಕಿನಲ್ಲಿ ಈವರೆಗೆ 32 ಡೆಂಗೆ ಪ್ರಕರಣಗಳು ಕಂಡು ಬಂದಿದ್ದು, ಈ ಎಲ್ಲ ಪ್ರಕರಣಗಳಲ್ಲಿನ ರೋಗಿಗಳು ಗುಣಮುಖರಾಗಿದ್ದಾರೆ. 8 ಇಲಿ ಜ್ವರ ಪ್ರಕರಣ ವರದಿಯಾಗಿದ್ದು, ಅದರಲ್ಲಿ ಒಬ್ಬರು ಮೃತರಾಗಿದ್ದಾರೆ. 127 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ತಾಲ್ಲೂಕಿನ ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ರೋಗ ನಿಯಂತ್ರಣಕ್ಕಾಗಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮಾರಕ ರೋಗಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.

ಮೀನುಗಾರಿಕಾ ಇಲಾಖೆಯಡಿ ಈಗಾಗಲೆ ಮಂಜೂರಾಗಿರುವ 160 ಮನೆಗಳಿಗೆ ಫಲಾನುಭವಿಗಳಿಂದ ಕೂಡಲೇ ಅರ್ಜಿ ಪಡೆದುಕೊಂಡು, ಆದಷ್ಟು ಶೀಘ್ರದಲ್ಲಿ ಅವರಿಗೆ ಚೆಕ್ ವಿತರಣೆ ಮಾಡಲಾಗುವುದು. ತಾಲ್ಲೂಕಿನಾದ್ಯಾಂತ ಸಮಸ್ಯೆಯಾಗಿರುವ ಭೂ ಪರಿವರ್ತನಾ ಕಾರ್ಯವನ್ನು ಸರಳೀಕರಣಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. 15 ಸೆಂಟ್ಸ್‌ಗಿಂತ ಕಡಿಮೆ ವಿಸ್ತೀರ್ಣದ ಜಾಗಗಳ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ವಿಸ್ತೀರ್ಣವುಳ್ಳ ಭೂಮಿಗಳ ಭೂ ಪರಿವರ್ತನೆಗೆ ಕಾನೂನು ಪ್ರಕ್ರಿಯೆಯಂತೆ ಮುಂದುವರೆಯುವುದು ಅನಿವಾರ್ಯ ಎಂದು ಸಚಿವರು ತಿಳಿಸಿದರು.

ಬಸವ ಕಲ್ಯಾಣ ಯೋಜನೆ ಹಾಗೂ ಶೌಚಾಲಯದ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆ ಇರುವುದರಿಂದ, ಈ ಕುರಿತು ಚರ್ಚೆ ನಡೆಸಲು ಹಾಗೂ ಯೋಜನೆಯ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿಗಳ ಸಭೆಯನ್ನು ಇನ್ನೂ 10 ದಿನಗಳ ಒಳಗೆ ಕರೆಯಲಾಗುವುದು. ಬದಲಾದ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ಆಕ್ರಮ-ಸಕ್ರಮ ಸಮಿತಿಯ ಸಭೆಗಳು ನಡೆಯದ ಹಿನ್ನೆಲೆಯಲ್ಲಿ ಬೈಂದೂರು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯದ 3ನೇ ಹಣಕಾಸು ವರದಿ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ಎ.ಜಿ ಕೊಡ್ಗಿ, ಜಿಲ್ಲಾಧಿಕಾರಿ ಡಾ.ಎಂ.ಟಿ ರೇಜು, ಉಪವಿಭಾಗಾಧಿಕಾರಿ ಸದಾಶಿವ ಪ್ರಭು, ಉಡುಪಿ ಜಿ.ಪಂ. ಪ್ರಭಾರ ಅಧ್ಯಕ್ಷ ಉಪೇಂದ್ರ ನಾಯಕ್, ತಾ.ಪಂ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಕುಂದಾಪುರ ಪುರಸಭಾಧ್ಯಕ್ಷ ಕೆ.ಮೋಹನ್‌ದಾಸ್ ಶೆಣೈ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಮಂಜು ಬಿಲ್ಲವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT