ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಅಗತ್ಯ, ಆದರೆ...?

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ರಾಷ್ಟ್ರ ಭಕ್ತಿ ಅಥವಾ ರಾಷ್ಟ್ರ ಸೇವೆಯನ್ನು ನಿರ್ವಹಿಸುವ ಅವಕಾಶ ನಿರಾಯಾಸವಾಗಿ ಒದಗಿದರೆ ನಿರಾಕರಿಸುವುದಾಗಲೀ, ಅಪಸ್ವರ ಎತ್ತುವುದಾಗಲೀ ಯುಕ್ತವೇ? ರಾಷ್ಟ್ರ ಕಟ್ಟುವ ಕಾಯಕಕ್ಕೆ ಕೈ ಜೋಡಿಸುವುದೂ, ಒಂದಿಷ್ಟು ತ್ಯಾಗಶೀಲತೆಯನ್ನು ಕಾಣಿಸುವುದೂ ಪ್ರಜೆಗಳ ಕರ್ತವ್ಯ ತಾನೆ?’- ಎಂದು ಯಾರಾದರೂ ಮತ್ತೊಬ್ಬರಿಗೆ ಸಲೀಸಾಗಿ ಉಪದೇಶ ಮಾಡಬಹುದು. ದೇಶದ ಸರ್ವತೋಮುಖ ಅಭಿವೃದ್ಧಿ ದಿಶೆಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ಮಹಾಯೋಜನೆಗಳಿಗೆ ನಾಡಿನ ನಾಗರಿಕರ ಸಹಕಾರ ಇರಬೇಕಾದುದು ನಿಜ; ಆದರೆ, ಅದೇ ವೇಳೆ, ಅಂಥ ಯೋಜನೆಗಳಿಗೆ ಸಂಬಂಧಿಸಿದ ಸರ್ವ ವಿಚಾರಗಳೂ, ವ್ಯವಹಾರಗಳೂ ನ್ಯಾಯಬದ್ಧವೂ, ಪಾರದರ್ಶಕವೂ ಆಗಿರಬೇಕಾದುದು ಅಷ್ಟೇ ಮುಖ್ಯ.

ಈಗ ದೇಶದ ಹಲವೆಡೆ ಹೆದ್ದಾರಿಗಳ ನಿರ್ಮಾಣ, ವಿಸ್ತರಣೆ ಕೆಲಸಗಳು ನಡೆಯುತ್ತಾ ಇವೆ. ಇದು ಅಗತ್ಯವಾದ ಕಾರ್ಯವೂ ಅಗಬಹುದು. ಪ್ರಕೃತ ರಾಷ್ಟ್ರೀಯ ಹೆದ್ದಾರಿ 17ರ ವಿಸ್ತರಣಾ ವಿಚಾರಕ್ಕೆ ಬರೋಣ.

ಈ ಹೆದ್ದಾರಿಯಲ್ಲಿನ ವಿಪರೀತ ವಾಹನ ದಟ್ಟಣೆ ಗಮನಿಸಿದರೆ ಇದು ಚತುಷ್ಪಥವಾಗಿ ವಿಸ್ತರಣೆಗೊಳ್ಳುವುದು ಅನಿವಾರ್ಯವೆಂದು ತೋರುವುದು ಸಹಜ. ಆದಷ್ಟೂ ಶೀಘ್ರದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಬೇಕಾದುದು ಅಗತ್ಯ. ಆದರೆ, ಆತಂಕವಿರುವುದು ಎಷ್ಟು ಜಾಗವನ್ನು ಈ ಯೋಜನೆ ಅಪೇಕ್ಷಿಸುತ್ತದೆ ಎಂಬ ವಿಚಾರದಲ್ಲಿ!

ವಿಚಿತ್ರವೇನೆಂದರೆ ಈ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ನಿಗದಿಪಡಿಸಿದ ಜಾಗದ ಅಳತೆ ಎಲ್ಲೆಡೆ ಒಂದೇ ತೆರನಾಗಿಲ್ಲ. ಕೇರಳ, ಗೋವಾ ರಾಜ್ಯಗಳಲ್ಲಿ 45 ಮೀಟರ್ ಜಾಗ ಸ್ವಾಧೀನ ಪಡಿಸುವುದಾಗಿ ನಿಗದಿಯಾಗಿದೆ. ಕರ್ನಾಟಕದಲ್ಲೂ ಮಂಗಳೂರಿನ ನಂತೂರುವರೆಗೆ 45 ಮೀಟರ್ ನಷ್ಟೇ ಸ್ವಾಧೀನವಾಗಲಿದೆ ಎಂದು ತಿಳಿಯುತ್ತದೆ. ಆದರೆ ನಂತೂರಿನಿಂದ ತಲಪಾಡಿವರೆಗೆ 60 ಮೀಟರ್ ಜಾಗ ಸ್ವಾಧೀನಕ್ಕೆ ನಿರ್ಧರಿಸಲಾಗಿದೆ. ಈ ತಾರತಮ್ಯಕ್ಕೇನು ಕಾರಣ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ. ನಿಜವಾಗಿ ಚತುಷ್ಪಥ ರಚನೆ, ಚರಂಡಿ ಹಾಗೂ ಕಾಲು ದಾರಿಗಳಿಗೆ ಒಟ್ಟು 45 ಮೀಟರ್ ಜಾಗ ಧಾರಾಳ ಸಾಕು! ಹಾಗಾದರೆ 60 ಮೀಟರ್ ಪ್ರಸ್ತಾಪವೇಕೇ?

ಒಳಗುಟ್ಟು ಬೇರೆಯೇ ಇದೆ! ಹೆದ್ದಾರಿ ವಿಸ್ತರಣೆ ಹೊಣೆಯೊಂದಿಗೆ ಕನಿಷ್ಠ 25 ವರ್ಷಗಳ ಹಿಂದೆ ಸರ್ವ ವಾಹನಗಳಿಂದ ಸುಂಕ ವಸೂಲಿ ಮಾಡುವ ಅಧಿಕಾರವನ್ನು ಹಿರಿಯ ಕಂಟ್ರಾಕ್ಟುದಾರ ಉದ್ಯಮಿಗಳಿಗೆ ವಹಿಸಿ ಕೊಡುವ ಒಪ್ಪಂದವಾಗಿದೆಯೆಂದು ತಿಳಿದು ಬರುತ್ತದೆ. ಅವರ ವ್ಯವಹಾರ ಇಷ್ಟಕ್ಕೆ ಸೀಮಿತವಲ್ಲ. ಹೆದ್ದಾರಿಯ ಇಕ್ಕೆಲಗಳಲ್ಲಿನ ಹೆಚ್ಚುವರಿ ಜಾಗವನ್ನು ಈ ಮಹಾಶಯರು ತಮ್ಮ ಉದ್ದೇಶಗಳಿಗೆ ಬಳಸುವವರಿದ್ದಾರೆ. ಜನರಿಂದ ಸಾಕಷ್ಟು ಕಡಿಮೆ ಮೌಲ್ಯಕ್ಕೆ ಪಡೆದ ಜಮೀನಿಗೆ ಈ ಗುತ್ತಿಗೆದಾರ ಸಂಸ್ಥೆಗಳು ಎತ್ತರದ ಆವರಣಕ್ಕೆ ಬೇಲಿ ಹಾಕಿ, ಅದರೊಳಗಿನ ಬಹು ಬೆಲೆಯುಳ್ಳ ಜಾಗದಲ್ಲಿ ಸ್ವಂತ ವ್ಯಾಪಾರ ವಹಿವಾಟುಗಳನ್ನು ತಮ್ಮ ಇಚ್ಛಾನುಸಾರ 25 ವರ್ಷಗಳವರೆಗೆ ಅಬಾಧಿತವಾಗಿ ನಡೆಸಬಹುದು!

 ಆ ಮೇಲೂ ಈ ಒಪ್ಪಂದ ವಿಸ್ತರಣೆಗೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಈ ಯೋಜನೆಯಿಂದ ಅಪಾರ ಪ್ರಮಾಣದ ಲಾಭವಾಗುವುದು ಬಹುಕೋಟಿ ಪ್ರಭುಗಳಾದ ಕೆಲವೇ ಗಟ್ಟಿ ಕುಳಗಳಿಗೆ! ಸರ್ಕಾರವಾಗಲೀ ಜನರಿಗಾಗಲೀ ಲಾಭವಿಲ್ಲ. ಸಾಮಾನ್ಯ ‘ಮಹಾಜನರು’ ಪ್ರಜಾಪ್ರಭುತ್ವದ ಆಭಾಸವನ್ನು ಅಸಹಾಯಕರಾಗಿ ನಿಂತು ನೋಡಬೇಕಷ್ಟೇ. ಸರ್ಕಾರಕ್ಕೂ ಈ ವ್ಯವಹಾರದಲ್ಲಿ ಯಾವುದೇ ಹತೋಟಿ ಇರುವಂತಿಲ್ಲ.

ಸ್ವಾಧೀನಪಡಿಸುವ ಜಾಗ 45 ಮೀಟರ್ ಆಗಲಿ. 60 ಮೀಟರ್ ಆಗಿ ಹೆದ್ದಾರಿ ಪಕ್ಕದಲ್ಲಿ ನೆಲೆಸಿ, ಪ್ರಕೃತ ಭೂಮಿ ಕಳಕೊಳ್ಳುವ ಹಲವರು ಸಮಸ್ಯೆಗಳಿಗೆ ಈಡಾಗುವುದು ನಿಜ. 60 ಮೀಟರ್ ಆದಲ್ಲಿ ಸಂತ್ರಸ್ತರ ಸಂಖ್ಯೆ ಹಾಗೂ ಸಮಸ್ಯೆಗಳ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಅನೇಕರು ಮನೆಮಾರುಗಳನ್ನು ಕಳಕೊಂಡು ಅಸಹಾಯಕರಾಗಬೇಕಾಗುತ್ತದೆ. ಇವರಲ್ಲಿ ಬಡವರ ಸಂಖ್ಯೆಯೂ ಸಾಕಷ್ಟಿದೆ. ಸಂತ್ರಸ್ತರಿಗೆ ಬೇರೆ ಕಡೆ ಜಮೀನು ಒದಗಿಸುವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ದೊಡ್ಡ ಅಣೆಕಟ್ಟೆ, ಬೃಹತ್ ಕೈಗಾರಿಕಾ ವಲಯ ನಿರ್ಮಾಣ, ಹೆದ್ದಾರಿ ವಿಸ್ತರಣೆ ಇತ್ಯಾದಿ ಮಹಾಯೋಜನೆಗಳಲ್ಲಿ ಸಾವಿರಾರು ಜನ ಈ ಮೊದಲು ನಿರ್ವಸಿತರಾಗಿದ್ದಾರೆ.

ಹೆದ್ದಾರಿ ಪ್ರಾಧಿಕಾರವು ಪತ್ರಿಕೆಗಳಲ್ಲಿ ಪ್ರಕಟಿಸಿದ ಭೂಸ್ವಾಧೀನ ಜಾಹೀರಾತಿನ ಅನ್ವಯ ಜಾಗ ಕಳಕೊಳ್ಳುವವರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಉತ್ತರವಾಗಿ ಪ್ರಾಧಿಕಾರದ ಪರವಾಗಿ ಮಂಗಳೂರಿನ ಸಹಾಯಕ ಆಯುಕ್ತರು ನೀಡಿದ ಸಮಜಾಯಿಷಿಯೂ ಸಮಾಧಾನಕರವಾಗಿಲ್ಲ. ಜನರಿಗೆ ತೊಂದರೆಯಾಗುವುದನ್ನು ಅವರು ಒಪ್ಪಿಕೊಂಡಿದ್ದರೂ, 60 ಮೀಟರನ್ನು 45 ಮೀಟರ್‌ಗೆ ನಿಗದಿಗೊಳಿಸಲು ಅಸಾಧ್ಯವೆಂದೇ ಹೇಳಿದ್ದಾರೆ. ಇದರಿಂದ ಈಗಾಗಲೇ ನಡೆದ ಗುತ್ತಿಗೆ ವ್ಯವಸ್ಥೆಗೆ ತೊಂದರೆಯಾಗುತ್ತದೆಂಬ ಸೂಚನೆಯನ್ನೂ ನೀಡಿದ್ದಾರೆ. ಕಳಕೊಳ್ಳುವ ಜಾಗಕ್ಕೆ ಸರ್ಕಾರದ ಧಾರಣೆಯಂತೆ ಪರಿಹಾರ ನೀಡಲಾಗುವುದು ಎಂದೂ ಘೋಷಿಸಿದ್ದಾರೆ. ಆದರೆ ಸರ್ಕಾರದ ಧಾರಣೆ ಎಷ್ಟು, ಯಾವ ಇಸವಿಯದು ಎಂದು ಅವರಾಗಲೀ, ಸರ್ಕಾರವಾಗಲೀ ಬಾಯಿ ಬಿಟ್ಟಿಲ್ಲ!

ಹೆದ್ದಾರಿಯ ಆಸುಪಾಸಿನಲ್ಲಿ ಜಾಗದ ಬೆಲೆ ಗಗನಕ್ಕೇರಿರುವಾಗ ಹೆದ್ದಾರಿ ಪ್ರಾಧಿಕಾರ ನೀಡುವ ಜುಜುಬಿ ಪರಿಹಾರಧನ ಖಂಡಿತವಾಗಿ ನಿರಾಶಾದಾಯಕವೆಂದೇ ಹೇಳಬೇಕು. ಹೆದ್ದಾರಿ ಪ್ರಾಧಿಕಾರವು ಅಲ್ಲಲ್ಲಿ ಸಭೆ ಜರುಗಿಸಿ ಸರ್ವ ವಿಚಾರಗಳೂ ಪಾರದರ್ಶಕವಾಗಿ ಚರ್ಚೆಗೊಳ್ಳುವಂತೆ ನೋಡಿಕೊಳ್ಳಬೇಕಾಗಿತ್ತು. ಪತ್ರಿಕೆಗಳ ಮೂಲಕ ಮನದಟ್ಟು ಪಡಿಸಬೇಕಾಗಿತ್ತು. ಆದರೆ ಅಂಥ ಕೆಲಸ ಆಗಿಲ್ಲ. ಸಾಮಾನ್ಯ ಜನ ಅನೇಕ ವಿಚಾರಗಳಲ್ಲಿ ಕತ್ತಲಲ್ಲೇ ಇದ್ದಾರೆ!

ಅದೇನೇ ಇರಲಿ, ಹೆದ್ದಾರಿಗಾಗಿ ಜಾಗವನ್ನೂ ಮನೆ ಮಾರುಗಳನ್ನೂ ಕಳಕೊಳ್ಳಲಿರುವ ಜನರು ಅತಂತ್ರ ಸ್ಥಿತಿಗೆ ನಿಲುಕದಂತೆ ನೋಡಿಕೊಂಡು ಅವರಿಗಾಗುವ ನಷ್ಟ- ಕಷ್ಟಗಳಿಗೆ ವರ್ತಮಾನ ಕಾಲಸ್ಥಿತಿಗೆ ಅನುಗುಣವಾದ ನ್ಯಾಯಯುತ ಪರಿಹಾರಗಳನ್ನು ಸಕಾಲದಲ್ಲಿ ಒದಗಿಸುವುದು ಹೆದ್ದಾರಿ ಪ್ರಾಧಿಕಾರದ ಅಥವಾ ಸಂಬಂಧಪಟ್ಟ ಸಂಸ್ಥೆಗಳ ಆದ್ಯ ಕರ್ತವ್ಯ. ಈ ಕುರಿತು ನ್ಯಾಯ ಒದಗಿಸುವಂತೆ ಹೋರಾಟಕ್ಕಿಳಿಯುವ ಸಂದರ್ಭವನ್ನು ವ್ಯವಸ್ಥೆಗಳು ಒದಗಿಸಬಾರದು. ಈ ವಿಚಾರದಲ್ಲಿ ಘನತೆ, ಗೌರವಗಳಿರುವ ವ್ಯವಹಾರ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT