ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಅಸ್ತ್ರ: ಪುರಾವೆ ಲಭ್ಯ

ಸಿರಿಯಾಕ್ಕೆ ತೆರಳಿದ್ದ ಸತ್ಯ ಶೋಧನಾ ತಂಡದ ವರದಿ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸ್ಸಾದ್‌ ಅವರು ತಮ್ಮ ವಿರುದ್ಧ ಬಂಡೆದ್ದ ಜನರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನುವುದಕ್ಕೆ ವಿಶ್ವಸಂಸ್ಥೆ ವೀಕ್ಷಕರ ಬಳಿ ಸಾಕಷ್ಟು ಪುರಾವೆಗಳು ಇವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಆಗಸ್ಟ್ 21ರಂದು ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರ ಬಳಕೆಯಾದ ಬಗ್ಗೆ ವಿಶ್ವಸಂಸ್ಥೆ ಸತ್ಯ ಶೋಧನಾ ತಂಡ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯ­ದರ್ಶಿ ಬಾನ್ ಕಿ ಮೂನ್‌ ಅವರಿಗೆ ಭಾನುವಾರ ವರದಿ ಸಲ್ಲಿಸಿದೆ.

ಈ ವರದಿಯನ್ನು ಮೂನ್ ಅವರು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸೋಮವಾರ ರಾತ್ರಿ ಮಂಡಿಸಿದರು.

ಸ್ವೀಡನ್‌ ವಿಜ್ಞಾನಿ ಅಕೆ ಸೆಲ್‌ ಸ್ಟ್ರಾಮ್ ನೇತೃತ್ವದ ವಿಶ್ವಸಂಸ್ಥೆ ತಂಡವು ಕಳೆದ ವಾರ ಡಮಾಸ್ಕಸ್‌ಗೆ ತೆರಳಿ ತನಿಖೆ ನಡೆಸಿತ್ತು.  ಮದ್ದುಗುಂಡು, ರಾಕೆಟ್‌ ಕವಚ, ಮೃತಪಟ್ಟವರ ರಕ್ತ ಹಾಗೂ ಮೂತ್ರದ ಮಾದರಿಯ ಪರೀಕ್ಷೆ...­ಇತ್ಯಾದಿ ಅಂಶಗಳು ಸಿರಿಯಾ­ದಲ್ಲಿ ರಾಸಾಯನಿಕ ಅಸ್ತ್ರ ಪ್ರಯೋಗಿ­ಸಲಾಗಿದೆ ಎನ್ನುವುದನ್ನು ಖಚಿತಪಡಿ­ಸುತ್ತವೆ ಎಂದು ತಂಡ ಅಭಿಪ್ರಾಯಪಟ್ಟಿದೆ.

ಆದರೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದು ಯಾರು ಎನ್ನುವುದನ್ನು ಮಾತ್ರ ತಂಡ ಬಹಿರಂಗಪಡಿಸಿಲ್ಲ.

‘ರಾಜಕೀಯ ಉದ್ದೇಶದ ಈ ವರದಿಯನ್ನು ಸಿರಿಯಾ ಸರ್ಕಾರ ಒಪ್ಪುವುದಿಲ್ಲ’ ಎಂದು ವಿಶ್ವಸಂಸ್ಥೆಯ­ಲ್ಲಿರುವ ಸಿರಿಯಾ ರಾಯಭಾರಿ ಬಷರ್‌ ಜಫಾರಿ ಹೇಳಿದ್ದಾರೆ.

‘ರಾಸಾಯನಿಕ  ಅಸ್ತ್ರ ಬಳಕೆಗೆ ಸಂಬಂಧಿಸಿ ಸಿರಿಯಾ ಸರ್ಕಾರದ ವಿರುದ್ಧ ಪ್ರಕರಣವನ್ನು ವಿಶ್ವಸಂಸ್ಥೆ ವರದಿಯು ಬಲಪಡಿಸುತ್ತದೆ’ ಎಂದು  ಪಶ್ಚಿಮ ದೇಶಗಳ ರಾಜತಾಂತ್ರಿಕರು ಹೇಳಿದ್ದಾರೆ.

ಸಿರಿಯಾ ಪಡೆಯು ರಾಸಾಯನಿಕ ಅಸ್ತ್ರ ಬಳಸಿ ಸುಮಾರು 1,400 ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.  ‘ಸಿರಿಯಾ ಸರ್ಕಾರ ಈ ದಾಳಿ ನಡೆಸಿಲ್ಲ, ಇದು ಬಂಡುಕೋರರ ಕೆಲಸ’ ಎಂದು ರಷ್ಯಾ ಹೇಳಿತ್ತು. 

ಭಾರತ ಸ್ವಾಗತ
ನವದೆಹಲಿ (ಪಿಟಿಐ):
ನಿರ್ದಿಷ್ಟ ಕಾಲ ಮಿತಿಯಲ್ಲಿ ಸಿರಿಯಾದಲ್ಲಿ ದಾಸ್ತಾನಿರುವ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶ­ಪಡಿ­ಸಲು ರಷ್ಯಾ ಮತ್ತು ಅಮೆರಿಕ ಒಂದು ಒಪ್ಪಂದಕ್ಕೆ ಬಂದಿರುವುದನ್ನು ಭಾರತ ಸ್ವಾಗತಿಸಿದೆ.

ಸಿರಿಯಾ ಸಮಸ್ಯೆಗೆ ರಾಜಕೀಯ ಪರಿಹಾರ ದೊರಕಬಹುದು ಎಂಬ ಆಶಾ­ಭಾವನೆ ಮೂಡಿದೆ ಎಂದು ವಿದೇಶಾಂಗ  ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT