ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ತ್ಯಾಜ್ಯ ಸ್ಫೋಟ: ತೀವ್ರ ಗಾಯ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಬದಿಯಲ್ಲಿ ಸುರಿಯಲಾಗಿದ್ದ ರಾಸಾಯನಿಕ ತ್ಯಾಜ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಗುಲಿ ಸ್ಫೋಟ ಸಂಭವಿಸಿದ ಪರಿಣಾಮ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಬನ್ನೇರುಘಟ್ಟ ರಸ್ತೆ ಸಮೀಪದ ಪುಕ್ಕರಾಜ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ವಿನ್ಸೆಂಟ್ ಗಾಯಗೊಂಡವರು. ಸ್ಫೋಟದ ತೀವ್ರತೆಗೆ ಅವರ ಎರಡು ಕಾಲುಗಳು ತುಂಡಾಗಿವೆ. ಅಲ್ಲದೇ ಸ್ಫೋಟ ಸಂಭವಿಸಿದ ಸ್ಥಳದ ಅಕ್ಕಪಕ್ಕದ ಮೂರ‌್ನಾಲ್ಕು ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ.

ಪುಕ್ಕರಾಜ ಲೇಔಟ್‌ನ ಎಂಟನೇ ಅಡ್ಡರಸ್ತೆಯಲ್ಲಿ `ಮಾರ್ಬಲ್ ಸೆಂಟರ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್~ ಹೆಸರಿನ ಮಾರ್ಬಲ್ ಮಾರಾಟ ಮಳಿಗೆ ಇದೆ. ವಿನ್ಸೆಂಟ್ ಅವರು ಆ ಮಳಿಗೆಯ ಉದ್ಯೋಗಿ. ಆ ಮಳಿಗೆಯಲ್ಲಿ ಮಾರ್ಬಲ್‌ಗೆ ಪಾಲಿಷ್ ಹಾಕಲು ಕೆಲ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಹೀಗೆ ಬಳಕೆ ಮಾಡಿದ ರಾಸಾಯನಿಕ ವಸ್ತುಗಳನ್ನು ಮಳಿಗೆ ಪಕ್ಕದ ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು.

ಕೆಲಸ ಮುಗಿದ ನಂತರ ರಾತ್ರಿ 10 ಗಂಟೆ ಸುಮಾರಿಗೆ ಮಳಿಗೆಯಿಂದ ಹೊರ ಬಂದ ವಿನ್ಸೆಂಟ್ ಅವರು ರಾಸಾಯನಿಕ ವಸ್ತುಗಳನ್ನು ಸುರಿದಿದ್ದ ಜಾಗದ ಪಕ್ಕದಲ್ಲಿ ನಿಂತು ಬೀಡಿ ಸೇದುತ್ತಿದ್ದರು. ಬೀಡಿ ತುಂಡನ್ನು ಅವರು, ರಾಸಾಯನಿಕ ವಸ್ತುಗಳನ್ನು ಸುರಿದಿದ್ದ ಜಾಗಕ್ಕೆ ಎಸೆಯುತ್ತಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಸಾಯನಿಕ ವಸ್ತುಗಳು ಸ್ಫೋಟಗೊಳ್ಳುತ್ತಿದ್ದಂತೆ ಬಾಂಬ್ ಸ್ಫೋಟ ಸಂಭವಿಸಿದಂತೆ ಭಾರಿ ಶಬ್ದ ಕೇಳಿ ಬಂದಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಸ್ಫೋಟಗೊಂಡಿದೆ ಎಂದು ಭಾವಿಸಿದ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳು ವಿನ್ಸೆಂಟ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಶ್ವಾನದಳ ಸಿಬ್ಬಂದಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT