ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸು, ಕುರಿಗಳ ಜತೆಗೆ ಮುತ್ತಿಗೆ

ರಾಷ್ಟ್ರೀಯ ಹೆದ್ದಾರಿ ಪರಿಹಾರ ಧನಕ್ಕೆ ರೈತರ ಒತ್ತಾಯ
Last Updated 3 ಡಿಸೆಂಬರ್ 2013, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ–7ರ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಎಕರೆಗೆ ₨20 ಲಕ್ಷದಂತೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ–7ರ ಭೂಸ್ವಾಧೀನ ರೈತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಡಳಿತ ಭವನಕ್ಕೆ ರಾಸು, ಕುರಿಗಳ ಸಮೇತ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ವಿವಿಧ ತಾಲ್ಲೂಕು ಮತ್ತು ಗ್ರಾಮಗಳಿಂದ ಬಂದಿದ್ದ ಹೋರಾಟ ಸಮಿತಿ ಸದಸ್ಯರು ಅಲ್ಲಿಯೇ ಜಾನು­ವಾರು­ಗಳಿಗೆ ಮೇವು ಹಾಕಿದರು. ಅಡುಗೆ ಸಿದ್ಧಪಡಿಸಿಕೊಂಡು ಊಟ ಕೂಡ ಮಾಡಿದರು.

ತಾಲ್ಲೂಕಿನ ಪೂಜನಹಳ್ಳಿ, ಪಟ್ರೇನ­ಹಳ್ಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾನಿರತರು ಜಾನು­ವಾರು ಸಮೇತ ಜಿಲ್ಲಾಡಳಿತ ಭವನದೊಳಗೆ ಪ್ರವೇಶಿಸಲು ಯತ್ನಿಸಿ­ದರು. ಪೊಲೀಸ್‌ ಬಂದೋಬಸ್ತ್‌ ಇದ್ದರೂ  ಮತ್ತು ಗೇಟ್ ಮುಚ್ಚಿದ್ದರೂ ಅದನ್ನು ದಾಟಿಕೊಂಡು ಒಳನುಗ್ಗಲು ಪ್ರಯತ್ನಿಸಿದ ಪ್ರತಿಭಟನಾನಿರತರನ್ನು ಪೊಲೀಸರು ತಡೆದರು. ಆದರೆ ಗೇಟ್ ಬಳಿಯೇ ಜಾನುವಾರು ನಿಲ್ಲಿಸಿಕೊಂಡ ಪ್ರತಿಭಟನಾನಿರತರು ಮೇವು ಹಾಕಿ­ದರು. ಬೇಡಿಕೆ ಈಡೇರಿಕೆಗೆ ಘೋಷಣೆ­ಗಳನ್ನು ಹಾಕಿದರು.

ಸಮಿತಿ ಕಾರ್ಯದರ್ಶಿ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ‘2006–07ರಲ್ಲಿ ರೈತರಿಂದ ಫಲವತ್ತಾದ ಕೃಷಿ ಜಮೀನು ವಶಪಡಿಸಿಕೊಂಡು ಇದು­ವರೆಗೆ ಸಮರ್ಪಕ ಪರಿಹಾರ ಧನ ನೀಡಿಲ್ಲ. 2007ರಲ್ಲಿ ಜಮೀನು ವಶಪಡಿ­ಸಿಕೊಂಡ ಸಂದರ್ಭದಲ್ಲಿ ಜಮೀ­ನಿನ ಬೆಲೆ ಕೋಟ್ಯಂತರ ರೂಪಾಯಿ ಇತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಮೀನಿನ ಬೆಲೆ ಎಕರೆಗೆ 60 ಸಾವಿರದಿಂದ 1.50 ಲಕ್ಷ ರೂಪಾಯಿ ನಿಗದಿಪಡಿಸಿದ್ದರಿಂದ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. ಆಗಿನ ಜಿಲ್ಲಾಧಿಕಾರಿಯಾಗಿದ್ದ ಅನ್ವರ್‌­ಪಾಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಂದು ಎಕರೆ ಜಮೀನಿಗೆ 20 ಲಕ್ಷ ರೂಪಾಯಿಯಂತೆ ಪರಿಹಾರ ಧನ ಕೊಡಲು ನಿರ್ಧರಿಸಲಾಯಿತು.

‘ಆದರೆ, ಪರಿಹಾರ ಧನವು ಕೆಲ ರೈತರಿಗೆ ಮಾತ್ರವೇ ದೊರೆಯಿತೇ ಹೊರತು ಎಲ್ಲರಿಗೂ ಸಿಗಲಿಲ್ಲ. ಕೆಲವೇ ದಿನಗಳಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಪ್ರಾಧಿಕಾರದವರು ₨20 ಲಕ್ಷ ಪರಿ­ಹಾರ ಧನ ನೀಡಲು ಆಗುವುದಿಲ್ಲ ಎಂದರು. ರೈತರು ಆಗಿನಿಂದ ಕೋರ್ಟ್‌­ಗೆ ಅಲೆ­ದಾಡುತ್ತಿದ್ದು, ಇದುವರೆಗೆ ಪರಿ­ಹಾರ ಧನ ನೀಡಿಲ್ಲ. ಇದೇ ಪರಿಸ್ಥಿತಿ ಮುಂದು­ವರಿದರೆ ರೈತರು ನೆಮ್ಮದಿ­ಯಿಂದ ಬದು­ಕುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ರೈತ­ರನ್ನು ಸಮಾಧಾನಪಡಿಸಲು ಯತ್ನಿ­ಸಿದ ಜಿಲ್ಲಾಧಿಕಾರಿ ಡಾ.ಆರ್‌.ವಿಶಾಲ್‌, 20 ಲಕ್ಷ ರೂಪಾಯಿ ಪರಿಹಾರ ಧನ ಕೊಡಿ­ಸುವ ಕುರಿತು ಎಲ್ಲಿಯೂ ಲಿಖಿತ ದಾಖಲೆ ಇಲ್ಲ. ನಿಯಮಾನುಸಾರ ಪರಿ­ಹಾರ ಧನ ನೀಡಲಾಗುವುದು ಎಂದರು.

ಅದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರಿಸಿದರು. ರೈತ ಮುಖಂಡ­ರಾದ ಮಳ್ಳೂರು ಹರೀಶ್‌, ಭಕ್ತರಹಳ್ಳಿ ಬೈರೇಗೌಡ, ಕೊತ್ತನೂರು ಕೃಷ್ಣಪ್ಪ, ಅಂದಾರ್ಲಹಳ್ಳಿ ಆನಂದಮೂರ್ತಿ, ಬೀಡ­ಗಾನಹಳ್ಳಿ ಸಂತೋಷ್‌ಕುಮಾರ್‌, ಮನೋಹರ್ ನಾಗರಾಜ್‌, ಯಲುವ­ಹಳ್ಳಿ ಹಿರೇಗೌಡ, ಮರಸನಹಳ್ಳಿ ನಾರಾ­ಯಣಸ್ವಾಮಿ, ವಾಪಸಂದ್ರ ರತ್ನಯ್ಯ ಮತ್ತಿತರರು ಭಾಗ­ವಹಿಸಿದ್ದರು. ರಾತ್ರಿ ಕೂಡ ಪ್ರತಿಭಟನೆ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT