ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳಿಂದ ಮನುಷ್ಯರಿಗೆ ರೋಗ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

`ಡಾಕ್ಟ್ರೇ ನನ್ನ ಸೀಮೆ ಹಸು ಈಯೋದಿಕ್ಕೆ ಇನ್ನೂ ಎರಡು ತಿಂಗಳಿದ್ದಂಗೆ ನಿನ್ನೆ ದಿವ್ಸ ಕಂದು ಹಾಕಿಬಿಡ್ತು. ಇನ್ನೂ ಮಾಸು ಬಿದ್ದಿಲ್ಲ~ ಎಂದು ಈರಣ್ಣ ನನ್ನೆದರು ಹಾಜರಾದಾಗ `ಬ್ರೂಸೆಲ್ಲೋಸಿಸ್~ ಇರಬಹುದೆಂದು ಮನಸ್ಸಿನಲ್ಲಿ ಸಂಶಯ ಇಣುಕಿತ್ತು.
 
ಹಸುವಿನ ಮಾಸು ಅಥವಾ ಸತ್ತೆ (Plancenta)  ತೆಗೆದು ಗರ್ಭಕೋಶಕ್ಕೆ ಔಷಧಿಯನ್ನು ಸೇರಿಸಬೇಕಾಗಿದ್ದರಿಂದ ಕೈಗವಸು, ಸೋಂಕು ನಿವಾರಕ ದ್ರಾವಣ, ಔಷಧಿ ಇತ್ಯಾದಿಗಳೊಂದಿಗೆ ಈರಣ್ಣನ ಮನೆ ಹಾದಿ ಹಿಡಿದೆ.

 

ಭಾರತದಲ್ಲಿ ಸಮೀಕ್ಷೆ

ಪ್ರಸಕ್ತ ವರ್ಷ ಹೈನು ರಾಸುಗಳಲ್ಲಿ ಬ್ರೂಸೆಲ್ಲಾ ಬ್ಯಾಕ್ಟೀರಿಯಾಗಳ ವಿರುದ್ಧದ ಪ್ರತಿದೇಹಿಗಳನ್ನು(Antibodies)  ಪತ್ತೆ ಹಚ್ಚುವ ಮೂಲಕ ರೋಗದ ಸರ್ವೆಕ್ಷಣೆ ಕಾರ್ಯವನ್ನು ರಾಷ್ಟ್ರವ್ಯಾಪಿಯಾಗಿ ಹಮ್ಮಿಕೊಳ್ಳಲಾಗಿದೆ.

ಹಾಲು ಕೊಡುವ ಹಸುಗಳ ಹಾಲಿನ ಮಾದರಿಗಳನ್ನು ಪರೀಕ್ಷಿಸಿ ಆ ಪ್ರದೇಶದಲ್ಲಿ ರೋಗದ ಇರುವಿಕೆಯನ್ನು ತಿಳಿಯಲಾಗುತ್ತದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿ ವರ್ಷ ಹೈನು ರಾಸುಗಳನ್ನು ಪರೀಕ್ಷಿಸಲಾಗುತ್ತದೆ. ಬ್ರೂಸೆಲ್ಲಾ ಸೋಂಕಿರುವ ರಾಸುಗಳನ್ನು ಕೊಂದು ನಾಶಪಡಿಸಲಾಗುತ್ತದೆ.
 
ಆದರೆ ಭಾರತದಂಥ ದೇಶಗಳಲ್ಲಿ ಆರ್ಥಿಕ ದೃಷ್ಟಿಯಿಂದ ಇದು ಕಷ್ಟ. ಆದ್ದರಿಂದ ಮಾಂಸಕ್ಕಾಗಿ ವಧಿಸುವ ಎಲ್ಲಾ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಸಂತೆ ಮತ್ತು ಇತರೆ ಜಾನುವಾರು ಮಾರುಕಟ್ಟೆಗಳಿಗೆ ಬರುವ ಜಾನುವಾರುಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು.

ಪ್ರಾಣಿಗಳು ಮತ್ತು ಅವುಗಳ ಉತ್ಪನ್ನಗಳ ಆಯಾತ ನಿರ್ಯಾತದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಿದರೆ ರೋಗವನ್ನು ನಿರ್ಮೂಲನೆ ಮಾಡಬಹುದು.

ನೂರು ವರ್ಷದ ಹಿಂದೆಯೇ ರೋಗವನ್ನು ಪತ್ತೆ ಮಾಡಲಾಗಿದ್ದರೂ ಬ್ರೂಸೆಲ್ಲೋಸಿಸ್ ಜಾಗತಿಕ ಸಮಸ್ಯೆಯಾಗಿ ಉಳಿದುಕೊಂಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ  ಸಮಸ್ಯೆಯಾಗಿದೆ.

ಆದ್ದರಿಂದ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವತ್ತ ಗಮನ ಹರಿಸಬೇಕು. ವೈದ್ಯರು ಮತ್ತು ಪಶು ವೈದ್ಯರು ರೋಗ ನಿರ್ಮೂಲನೆಗೆ ಒಟ್ಟಾಗಿ ದುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಬ್ರೂಸೆಲ್ಲೋಸಿಸ್ ಸೋಂಕು ಗಬ್ಬದ ದನಗಳಲ್ಲಿ 7 ರಿಂದ 9 ತಿಂಗಳ ಅವಧಿಯಲ್ಲಿ ಗರ್ಭಪಾತಕ್ಕೆ ಕಾರಣವಾಗುವ ಮುಖ್ಯ ಕಾಯಿಲೆ. ಪಿಂಡ, ಮಾಸು ಚೀಲ ಮತ್ತು ಮಾಸುದ್ರವಗಳಲ್ಲಿ ಬ್ರೂಸೆಲ್ಲಾ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಚರ್ಮ, ಕಣ್ಣಿನ ಪೊರೆ, ಬಾಯಿ ಮತ್ತು ಮೂಗಿನ ಮೂಲಕ ಮನುಷ್ಯ ದೇಹವನ್ನು ಪ್ರವೇಶಿಸುತ್ತವೆ. ಕಲುಷಿತ ನೀರು ಮತ್ತು ಆಹಾರದ ಮೂಲಕವೂ ಈ ಸೋಂಕು ಹರಡುತ್ತದೆ. ಆದ್ದರಿಂದ ಬರಿಗೈಯಲ್ಲಿ ಸತ್ತೆಯನ್ನು ತೆಗೆಯಬಾರದು.

ಬ್ರೂಸೆಲ್ಲೋಸಿಸ್ ವಿಶ್ವದಾದ್ಯಂತ ಕಂಡು ಬರುವ ಮಿಗಮಾನವ ಸೋಂಕು ರೋಗ. ರೋಗಪೀಡಿತ ಸಾಕು ಪ್ರಾಣಿಗಳಿಂದ ಅವುಗಳ ಸಂಪರ್ಕದಲ್ಲಿರುವ ಜನರಿಗೆ ಹರಡುತ್ತದೆ. ಸೋಂಕಿರುವ ಪ್ರಾಣಿಗಳ ಹಾಲನ್ನು ಪಾಶ್ಚೀಕರಿಸದೆ ತಯಾರಿಸಿದ ಪದಾರ್ಥಗಳು (ಚೀಸ್, ಐಸ್‌ಕ್ರೀಂ, ಮೊಸರು ಇತ್ಯಾದಿ) ಅಥವಾ ಚೆನ್ನಾಗಿ ಬೇಯಿಸದೆ ಸೇವಿಸಿದ ಮಾಂಸದ ಮೂಲಕ ರೋಗಾಣುಗಳು ಮನುಷ್ಯರ ದೇಹವನ್ನು ಸೇರಿಕೊಳ್ಳುತ್ತವೆ.

ಹೈನುಗಾರರು, ಕುರಿ ಅಥವಾ ಆಡು ಸಾಕಣೆದಾರರು, ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರು, ಪಶು ವೈದ್ಯರು ಮತ್ತು ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವವರು ಈ ಸೋಂಕಿಗೆ ಒಳಗಾಗುವ ಸಾಧ್ಯತೆಗಳು. ಅದರಲ್ಲೂ ಪುರುಷರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಾರೆ.

ರೋಗ ಲಕ್ಷಣ: ಬ್ರೂಸೆಲ್ಲಾ ಬ್ಯಾಕ್ಟೀರಿಯಗಳನ್ನು ಪತ್ತೆ ಮಾಡಿದ್ದು 1887ರಲ್ಲಿ ಡಾ. ಡೇವಿಡ್ ಬ್ರೂಸ್. ಇವು ಜೀವಕೋಶಗಳ ಒಳಗೆ ಆಶ್ರಯ ಪಡೆದು ಮನುಷ್ಯರಲ್ಲಿ ದೀರ್ಘಕಾಲ, ಕೆಲವೊಮ್ಮೆ ಜೀವಿತಾವಧಿಯವರೆಗೆ ಬಾಧಿಸುತ್ತವೆ.  ಸೋಂಕು ಪೀಡಿತ ಜನರಲ್ಲಿ ಅತಿಯಾದ ಬೆವರುವಿಕೆ, ಆಯಾಸ, ರಕ್ತ ಹೀನತೆ, ದೇಹದ ತೂಕದಲ್ಲಿ ಇಳಿಕೆ, ಏರಿಳಿತವಾಗುವ ಜ್ವರ, ತಲೆನೋವು, ಮಾಂಸಖಂಡಗಳು ಮತ್ತು ಕೀಲುಗಳಲ್ಲಿ ನೋವು ಕಂಡು ಬರುತ್ತವೆ.

ಮೆದುಳು ಮತ್ತು ಶ್ವಾಸಕಾಂಗಗಳ ಸೋಂಕು ಸಹ ಉಂಟಾಗಬಹುದು.
ಸಾಮಾನ್ಯವಾಗಿ ಸೋಂಕುಪೀಡಿತ ಜನರಿಂದ ಇತರರಿಗೆ ಹರಡುವ ಸಾಧ್ಯತೆಗಳು ಕಡಿಮೆ. ಆದರೆ ಲೈಂಗಿಕ ಸಂಪರ್ಕದಿಂದ ಅಥವಾ ಸೋಂಕಿಗೆ ಒಳಗಾದ ಗರ್ಭಿಣಿಯಿಂದ ಮಗುವಿಗೆ ಸೋಂಕು ಹರಡಬಹುದಾಗಿದೆ.
 
ರೋಗಪೀಡಿತರು ಕನಿಷ್ಠ 6 ವಾರಗಳ ಚಿಕಿತ್ಸೆ ಪಡೆಯಬೇಕಾಗುತ್ತದೆ.  ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಆ್ಯಂಟಿಬಯೊಟಿಕ್ಸ್‌ಗಳಾದ ಟೆಟ್ರಾಸೈಕ್ಲಿನ್, ಸ್ಟ್ರೆಪ್ಟೊಮೈಸಿನ್, ರಿಫಾಂಪಿಸಿನ್, ಜೆಂಟಾಮೈಸಿನ್ ಇವುಗಳನ್ನು ಜೊತೆಯಾಗಿ ನೀಡಲಾಗುತ್ತದೆ.

ಸಾಕು ಪ್ರಾಣಿಗಳಲ್ಲಿ ಬೇರೆ ಬೇರೆ ವಿಧದ ಬ್ರೂಸೆಲ್ಲಾ ಬ್ಯಾಕ್ಟೀರಿಯಾಗಳು ಸೋಂಕು ಉಂಟು ಮಾಡುತ್ತವೆ. ದನ, ಕುರಿ, ಆಡು, ಹಂದಿ ಮತ್ತು ನಾಯಿಗಳ್ಲ್ಲಲಿ ಕ್ರಮವಾಗಿ ಬ್ರೂಸೆಲ್ಲಾ ಅಬಾರ್ಟಸ್, ಬ್ರೂಸೆಲ್ಲಾ ಓವಿಸ್, ಬ್ರೂಸೆಲ್ಲಾ ಮೆಲಿಟೆನ್ಸಿಸ್, ಬ್ರೂಸೆಲ್ಲಾ ಸೂಯಿಸ್ ಮತ್ತು ಬ್ರೂಸೆಲ್ಲಾ ಕೇನಿಸ್ ರೋಗ ಉತ್ಪತ್ತಿಗೆ ಕಾರಣವಾಗಿವೆ.
 
ಇವುಗಳಲ್ಲಿ ಮೆಲಿಟೆನ್ಸಿಸ್‌ಮತ್ತು ಅಬಾರ್ಟಸ್ ಸೋಂಕು ಮನುಷ್ಯರಿಗೆ ಹರಡುವುದು ಜಾಸ್ತಿ.
ಕೆನಡಾ, ಐರ್ಲೆಂಡ್, ಆಸ್ಟ್ರೇಲಿಯ ದೇಶಗಳು ಈ ರೋಗದಿಂದ ಮುಕ್ತವಾಗಿವೆ. ನ್ಯೂಜಿಲೆಂಡ್‌ನಲ್ಲಿ ಕುರಿಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ನಮ್ಮ ದೇಶದಲ್ಲೂ ಅಲ್ಲಲ್ಲಿ ರೋಗ ಬಾಧೆಯಿದೆ.
 
ಹೋರಿಗಳನ್ನೂ ಸಹ ಈ  ಸೋಂಕು ಬಾಧಿಸುತ್ತದೆ. ವೃಷಣಗಳು, ವೀರ್ಯನಾಳ, ವೀರ್ಯಾಣು ಸಂಗ್ರಾಹಕಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆಯೂರಿರುತ್ತವೆ. ಸಂತಾನೋತ್ಪತ್ತಿಗೆ ಸೋಂಕುಪೀಡಿತ ಹೋರಿಗಳನ್ನು ಬಳಸಿದರೆ ಹಸುಗಳಲ್ಲಿ ಸೋಂಕು ಸುಲಭವಾಗಿ ಹರಡುತ್ತದೆ.


ಜಾನುವಾರುಗಳ ವ್ಯಾಪಾರ ವಹಿವಾಟು, ದೂರದ ಪ್ರದೇಶಗಳಿಗೆ ಸಾಗಣೆ, ಜಾನುವಾರುಗಳ ಮಿಶ್ರ ಪಾಲನೆ, ಒಟ್ಟಾಗಿ ಮೇಯಿಸುವ ಪದ್ಧತಿಗಳಿಂದಾಗಿ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ.


(ಲೇಖಕರು ಪಶು ವೈದ್ಯ ಇಲಾಖೆ ಉಪ ನಿರ್ದೇಶಕರು. ಮೊಬೈಲ್ 94486 61566)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT