ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹತ್ ಬಿಡುಗಡೆ; ದೇಶ ಬಿಡದಂತೆ ನಿರ್ಬಂಧ

Last Updated 14 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್):  ಕಸ್ಟಮ್ಸ್ ಇಲಾಖೆಯ ಗಮನಕ್ಕೆ ತಾರದೆ 1.24 ಲಕ್ಷ ಡಾಲರ್ (ಸುಮಾರು 60 ಲಕ್ಷ ರೂಪಾಯಿ) ಹಣವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಕ್ಕಾಗಿ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭಾನುವಾರ ಬಂಧಿತರಾದ ಪಾಕಿಸ್ತಾನದ ಖ್ಯಾತ ಗಾಯಕ ರಾಹತ್ ಫತೆ ಅಲಿ ಖಾನ್ ಅವರನ್ನು  ಸೋಮವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.

ರಾಹತ್ ಮತ್ತು ಅವರ ಇಬ್ಬರು ಸಹವರ್ತಿಗಳಾದ ಮರೂಫ್ ಮತ್ತು ಚಿತ್ರೇಶ್ ಶ್ರೀವಾಸ್ತವ ಅವರನ್ನು ಸೋಮವಾರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಫೆ.17ರಂದು ಮತ್ತೆ ತನ್ನ ಮುಂದೆ ಹಾಜರಾಗಬೇಕು ಎಂದು ಡಿಆರ್‌ಐ ಸೂಚಿಸಿ ಅವರನ್ನು ಬಿಡುಗಡೆಗೊಳಿಸಿತು. ಜತೆಗೆ ರಾಹತ್ ಅವರ ಪಾಸ್‌ಪೋರ್ಟ್ ಅನ್ನು ಅದು ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಅವರು ದೇಶ ಬಿಟ್ಟು ಹೋಗುವುದಕ್ಕೆ ನಿರ್ಬಂಧ ಹೇರಿದಂತಾಗಿದೆ. ಆದರೆ ಅವರ ವಿರುದ್ಧ ಯಾವುದೇ ಪ್ರಕರಣವನ್ನೂ ದಾಖಲಿಸಲಾಗಿಲ್ಲ.

ಇದಕ್ಕೆ ಮೊದಲು ಡಿಆರ್‌ಐ ಪ್ರಾದೇಶಿಕ ಕಚೇರಿಗೆ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿಗಳು ಭೇಟಿ ನೀಡಿ ತನಿಖೆಗೆ ರಾಹತ್ ಸಹಕಾರ ನೀಡಲಿದ್ದಾರೆ ಎಂಬ ಭರವಸೆ ನೀಡಿದ್ದರು.

ಭಾರತದಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಪಾಲ್ಗೊಂಡ ಬಳಿಕ ಖಾನ್ ಅವರು ತಮ್ಮ 15 ಮಂದಿಯ ತಂಡದ ಜತೆಯಲ್ಲಿ ಭಾನುವಾರ ಸಂಜೆ ಎಮಿರೇಟ್ಸ್ ವಿಮಾನದಲ್ಲಿ ದುಬೈ ಮೂಲಕ ಲಾಹೋರ್‌ಗೆ ತೆರಳಲು ಸಜ್ಜಾಗಿದ್ದಾಗ ಡಿಆರ್‌ಐ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರ ಬಳಿ 1.24 ಲಕ್ಷ ಡಾಲರ್ ಹಣವಿತ್ತು. ನಿಯಮದ ಪ್ರಕಾರ 5 ಸಾವಿರ ಡಾಲರ್ ನಗದು  ಮತ್ತು 5 ಡಾಲರ್ ಮೊತ್ತದ ಸಾಮಗ್ರಿಗಳಿಗಿಂತ ಅಧಿಕ ಮೊತ್ತದ ಹಣ, ವಸ್ತುಗಳನ್ನು ಸಾಗಿಸುವುದಾದರೆ ಕಸ್ಟಮ್ಸ್ ಇಲಾಖೆಯ ಗಮನಕ್ಕೆ ತರಬೇಕಾಗುತ್ತದೆ.

ರಾಹತ್ ಅವರನ್ನು ಶೀಘ್ರ ಬಿಡಿಸಿಕೊಳ್ಳಲು ಪಾಕಿಸ್ತಾನ ಭಾರಿ ಪ್ರಯತ್ನ ನಡೆಸಿತ್ತು. ಭಾನುವಾರ ಮಧ್ಯರಾತ್ರಿಯೇ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರು ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಶರತ್ ಸಬರ್‌ವಾಲ್ ಅವರನ್ನು ಸಂಪರ್ಕಿಸಿ ಚರ್ಚಿಸಿದ್ದರು.  ಯಾವ ಅಧಿಕಾರಿಯೂ ರಾಹತ್ ಜತೆಯಲ್ಲಿ ಅನುಚಿತವಾಗಿ ವರ್ತಿಸದಂತೆ ನೊಡಿಕೊಳ್ಳಬೇಕು ಎಂದು ಅವರು ಕೇಳಿಕೊಂಡಿದ್ದರು.

‘ರಾಹತ್ ಅವರನ್ನು ಭಾನುವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು ಭಾನುವಾರ ರಾತ್ರಿ ಬಹು ಹೊತ್ತು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇಂದು ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ’ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಯೊಬ್ಬರು ಸೋಮವಾರ ಇಲ್ಲಿ ವಾರ್ತಾಸಂಸ್ಥೆಗೆ ತಿಳಿಸಿದ್ದರು.

‘ಗಾಯಕ ಖಾನ್ ಅವರು ಅಬಕಾರಿ ಕಾನೂನುಗಳನ್ನು ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ. ಸದ್ಯ ಅವರ ವಿಚಾರಣೆ ನಡೆಯುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಅದೆಷ್ಟೋ ಪಟ್ಟು ಅಧಿಕ ಮೊತ್ತದ ಹಣವನ್ನು ಅವರು ಸಾಗಿಸುತ್ತಿದ್ದರು’ ಎಂದು ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಇಸಿ) ಅಧ್ಯಕ್ಷ ಎಸ್. ದತ್ ಮಜುಂದಾರ್ ತಿಳಿಸಿದ್ದಾರೆ.
ಖ್ಯಾತ ಗಾಯಕರಾದ  ನಸ್ರತ್ ಫತೆ ಅಲಿ ಖಾನ್ ಅವರ ಸೋದರ ಸಂಬಂಧಿಯಾದ ರಾಹತ್ ಅವರು ಭಾರತ ಮತ್ತು ಪಾಕಿಸ್ತಾನಗಳಲ್ಲಿ ಬಹಳ ಖ್ಯಾತಿ ಗಳಿಸಿರುವ ಗಾಯಕ. ಭಾರತೀಯ ಸಿನಿಮಾಗಳಿಗೆ ಅವರು ಹಾಡಿರುವ ಹಾಡುಗಳು ಈಗಾಗಲೇ ಬಹಳ ಜನಪ್ರಿಯವಾಗಿವೆ. ‘ದಿಲ್ ತೋ ಬಚಾ ಹೈ ಜೀ’ ಹಾಡಿಗೆ ಅವರಿಗೆ ಈಚೆಗೆ ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿದೆ. ಭಾರತೀಯ ಸಂಗೀತ ರಿಯಾಲಿಟಿ ಷೋ ‘ಛೋಟಾ ಉಸ್ತಾದ್’ನ ತೀರ್ಪುಗಾರರಲ್ಲಿ ಅವರೂ ಒಬ್ಬರು.

ಪಾಕ್‌ನಲ್ಲಿ ಆಘಾತ: ಗಾಯಕ ರಾಹತ್ ಅವರ ಬಂಧನ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಭಾರಿ ದೊಡ್ಡ ಸುದ್ದಿಯಾಗಿದ್ದು, ಅವರನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ ಪಾಕಿಸ್ತಾನದ ಜಾನಪದ ಗಾಯಕ ರಫಾಕತ್ ಅಲಿ ಖಾನ್ ಅವರು ಕಲಾವಿದರ ನಿರ್ಲಕ್ಷ್ಯವನ್ನು ಬೆಟ್ಟುಮಾಡಿ ತೋರಿಸಿದ್ದು, ‘ಕಾನೂನು ವಿಚಾರಗಳಲ್ಲಿ ಕಲಾವಿದರು ನಿರ್ಲಕ್ಷ್ಯ ತಳೆದರೆ ಇಂತಹ ತೊಂದರೆ ಎದುರಾಗುತ್ತದೆ, ಆದರೂ ಅವರಿಗೆ ಇನ್ನಷ್ಟು ತೊಂದರೆ ಕೊಡದೆ ಶೀಘ್ರ ಬಿಡುಗಡೆ ಮಾಡಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಹೇಳಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT