ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಆಟದ ರೀತಿ ಬೌಲರ್‌ಗಳಿಗೆ ಭೀತಿ

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

`ದ್ರಾವಿಡ್ ಹೆಚ್ಚು ಅಪಾಯಕಾರಿ~ ಎಂದು ಭಾರತ ಪ್ರವಾಸಕ್ಕೆ ಬಂದ ತಕ್ಷಣವೇ ವಿಂಡೀಸ್ ತಂಡದ ನಾಯಕ ಡರೆನ್ ಸಾಮಿ ಹೇಳಿದ್ದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ದೋನಿ, ಗೌತಮ್ ಗಂಭೀರ್ ಹೆಸರನ್ನಂತೂ ನೆನಪಿಸಿಕೊಂಡಿರಲಿಲ್ಲ ಕೆರಿಬಿಯನ್ನರ ನಾಡಿನ ಕ್ರಿಕೆಟ್ ಪಡೆಯ ಮುಂದಾಳು.

ಸಾಮಿ ಮಟ್ಟಿಗೆ ದೋನಿ ಪಡೆಯಲ್ಲಿರುವ ಕಷ್ಟವೆನ್ನಿಸುವ ಬ್ಯಾಟ್ಸ್‌ಮನ್‌ಗಳೆಂದರೆ ರಾಹುಲ್ ದ್ರಾವಿಡ್. ಇವರು ಕ್ರೀಸ್‌ನಲ್ಲಿ ಇರುವವರೆಗೆ ಭಾರತದ ಇನಿಂಗ್ಸ್ ಸುಲಭವಾಗಿ ಕೊನೆಗೊಳ್ಳುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಇಂಥ ಅನಿಸಿಕೆಯನ್ನು ಎದುರಾಳಿ ತಂಡಗಳ ನಾಯಕರು ವ್ಯಕ್ತಪಡಿಸಿದ್ದು ಇದು ಮೊದಲೇನು ಅಲ್ಲ. ಹಲವಾರು ಬಾರಿ ಮೆಚ್ಚುಗೆಯ ಹೂಮಳೆ ಸುರಿದಿದೆ. ಅದೇ ಕರ್ನಾಟಕದ ಬ್ಯಾಟ್ಸ್‌ಮನ್ ಹಿರಿಮೆ.

ರಾಹುಲ್ ತಂತ್ರಗಾರಿಕೆಯ ಆಟವನ್ನು ಕ್ರಿಕೆಟ್ ಪಂಡಿತರೂ ಮೆಚ್ಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಗುಣಗಾನ ಮಾಡಿದರೂ ಶೈಲಿಯ ಬಗ್ಗೆ ಚರ್ಚೆ ನಡೆದಾಗ ದ್ರಾವಿಡ್‌ಗೆ ಎತ್ತರದ ಸ್ಥಾನ ಸಿಗುತ್ತದೆ. ಯುವ ಆಟಗಾರರು ನೋಡಿ ಕಲಿಯುವಂಥ ಪಾಠವಾಗಿ ನಿಲ್ಲುತ್ತಾರೆ `ಗೋಡೆ~ ಖ್ಯಾತಿಯ ಬ್ಯಾಟ್ಸ್‌ಮನ್. ಪ್ರತಿಯೊಂದು ಬಾರಿಯೂ ಚೆಂಡನ್ನು ಎದುರಿಸಿದಾಗ ಅವರದ್ದು ಬ್ಯಾಟಿಂಗ್ ತಂತ್ರದ ಪುಸ್ತಕ ತೆರೆದುಕೊಂಡಂಥ ಅನುಭವ.

ತಂಡದ ಬಾಕಿ ಪರಿಣತ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವೆನಿಸಿದ ಅಂಗಳದಲ್ಲಿಯೂ ವಿಶಿಷ್ಟ ಆಟ.
ತೆಂಡೂಲ್ಕರ್ ಅವರಂತೆ ಪ್ರಕಾಶಮಾನವಾಗಿ ಹೊಳೆಯದಿದ್ದರೂ ಚಂದಿರನಂತೆ ತಣ್ಣಗಿದ್ದೂ ಹಿತವೆನಿಸುವ ಬೆಳದಿಂಗಳಾಗುತ್ತಾರೆ ಈ ಬಲಗೈ ಬ್ಯಾಟ್ಸ್‌ಮನ್. ನಿಧಾನವಾಗಿಯಾದರೂ ಅವರು ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಹದಿಮೂರು ಸಹಸ್ರ ರನ್‌ಗಳ ಸಾಧನೆ ಮಾಡಿದ್ದಾರೆ.

ಅವರು ಎಷ್ಟು ರನ್ ಗಳಿಸಿದರು ಎನ್ನುವ ಅಂಕಿ-ಅಂಶಕ್ಕಿಂತ ಆಡಿದ ಬೆಲೆಯುಳ್ಳ ಆಟಗಳೇ ಹೆಚ್ಚು ಗಮನ ಸೆಳೆಯುತ್ತವೆ. ತಂಡವನ್ನು ಸಂಕಷ್ಟದಿಂದ ಪಾರು ಮಾಡುವಂಥ ಇನಿಂಗ್ಸ್ ಅನ್ನು ಅನೇಕ ಬಾರಿ ಕಟ್ಟಿದ್ದು ಕೂಡ ವಿಶೇಷ.

ಹೀಗೆ ವಿಶಿಷ್ಟವಾದ ರೀತಿಯಲ್ಲಿ ದ್ರಾವಿಡ್ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದು ಅಚ್ಚರಿಯೇ ಸರಿ. ಕರಾರುವಾಕ್ಕಾಗಿ ಬ್ಯಾಟ್ ಬೀಸುತ್ತಾ ಇಷ್ಟೊಂದು ದೀರ್ಘ ಕಾಲ ತಂಡವೊಂದರಲ್ಲಿ ಗಟ್ಟಿಯಾಗಿ ನಿಲ್ಲುವುದು ಕಷ್ಟ.

ಆದರೆ ಅಂಥದೊಂದು ಅಸಾಧ್ಯವನ್ನು ಸಾಧಿಸಿ ತೋರಿಸಿದ್ದಾರೆ ಮೂವತ್ತೆಂಟು ವರ್ಷ ವಯಸ್ಸಿನ ಕ್ರಿಕೆಟಿಗ. ತಮ್ಮ ಆಟದ ಬಗ್ಗೆ ಮೆಚ್ಚುಗೆಯ ಮಾತು ಕೇಳಿದಾಗ ಹಿಗ್ಗದ ಹಾಗೂ ಟೀಕೆಗಳಿಗೆ ಕುಗ್ಗದ ಸ್ಥಿತಪ್ರಜ್ಞ ರಾಹುಲ್ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ವಿರಳ. ಹದಿನೈದು ವರ್ಷಗಳಲ್ಲಿ ಅವರು ಆಡುತ್ತಿರುವ ರೀತಿಯಲ್ಲಿ ವ್ಯತ್ಯಾಸ ಕಾಣಿಸಿದ್ದು ಅಪರೂಪ. ಅಷ್ಟೊಂದು ವಿಶ್ವಾಸದೊಂದಿಗೆ ತಾವು ಆರಂಭದಲ್ಲಿ ಕಲಿತ ಬ್ಯಾಟಿಂಗ್ ಶಾಸ್ತ್ರಕ್ಕೆ ಗಟ್ಟಿಯಾಗಿ ಅಂಟಿಕೊಂಡು ನಿಂತಿದ್ದಾರೆ.

ಮಂದಗತಿಯ ಅಂಗಳವಿರಲಿ; ವೇಗದ ಪಿಚ್ ಆಗಿರಲಿ ಅದಕ್ಕೆ ತಕ್ಕ ಹೊಡೆತಗಳ ಆಯ್ಕೆ. ಹಿಂದೆ ಸರಿದು ನಿಂತು ಬ್ಯಾಟ್ ಮುಖವನ್ನು ತೆರೆದು ನೇರವಾಗಿ ಚೆಂಡನ್ನು ತಡೆಯುವ ಇವರು ಎದುರಾಳಿ ಬೌಲರ್‌ಗಳು ಕೆಣಕುವಂತೆ ಚೆಂಡನ್ನು ಪುಟಿದೆಬ್ಬಿಸಿದಾಗಲೂ ಸಹನೆ ಕಳೆದುಕೊಳ್ಳುವುದಿಲ್ಲ.

ಆಡುವುದಾದರೆ ಆಡು; ಇಲ್ಲದಿದ್ದರೆ ಹಿಂದೆ ಹೋಗಲು ಬಿಟ್ಟುಬಿಡು ಎನ್ನುವ ತತ್ವವನ್ನು ಸೂಕ್ತವಾದ ರೀತಿಯಲ್ಲಿ ಪಾಲಿಸುತ್ತಾರೆ. ಕ್ರಿಕೆಟ್ ಜೀವನದ ಆರಂಭದಲ್ಲಿಯೇ ರಕ್ಷಣೆಯ ಆಟದಿಂದ ಗಮನ ಸೆಳೆದ ರಾಹುಲ್ ಕೆಲವರಿಗೆ ಇಷ್ಟವಾಗುವುದಿಲ್ಲ.

ಸಚಿನ್ ಹಾಗೂ ಸೆಹ್ವಾಗ್ ರೀತಿಯಲ್ಲಿ ರಂಜಿಸುವುದಿಲ್ಲ ಎನ್ನುವುದೂ ಇದಕ್ಕೆ ಕಾರಣ. ಆದರೆ ದ್ರಾವಿಡ್ ಹೊರಮುಖವಾಗಿ ತಿರುವು ಪಡೆದ ಚೆಂಡನ್ನು ಸ್ಕ್ವೇರ್ ಕಟ್ ಮಾಡುವ ಚಿತ್ರವಂತೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾ ಗಟ್ಟಿಯಾಗಿ ಉಳಿದಿದೆ. ಆಫ್‌ಸೈಡ್‌ನಲ್ಲಿ ಚೆಂಡನ್ನು ಅಟ್ಟುವ ಶಕ್ತಿಯಿಂದಲೂ ಗಳಿಸಿರುವ ಮೆಚ್ಚುಗೆ ಅಪಾರ. ತೆಂಡೂಲ್ಕರ್, ದೋನಿ, ಸೆಹ್ವಾಗ್ ಹಾಗೂ ಗಂಭೀರ್ ಅವರಂಥ ಆಕ್ರಮಣಕಾರಿ ಆಟಗಾರರೂ ಎದುರಿಸಲು ಕಷ್ಟಪಡುವಂಥ ಎಸೆತವನ್ನು ಇಷ್ಟವಾಗುವ ರೀತಿಯಲ್ಲಿ ಆಡುವುದು ಕೂಡ ಕನ್ನಡ ನಾಡಿನ ಕ್ರಿಕೆಟಿಗನ ಹಿರಿಮೆ.

ಇಂಗ್ಲೆಂಡ್ ವಿರುದ್ಧ 1996ರಲ್ಲಿ ಆಡಿದ್ದ ಪ್ರಥಮ ಟೆಸ್ಟ್‌ನಲ್ಲಿಯೇ ರಾಹುಲ್ ತಮ್ಮ ಸಹನೆಯ ಮಟ್ಟ ಎಂಥದೆಂದು ಸಾರಿದ್ದರು. ಮೊದಲ ಇನಿಂಗ್ಸ್‌ನಲ್ಲಿಯೇ ಆರು ತಾಸಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದ ಅವರು ಕೇವಲ ಐದು ರನ್‌ಗಳಿಂದ ಆಗ ಶತಕ ವಂಚಿತರಾಗಿದ್ದರು. ಆದರೂ ಆ ಪಂದ್ಯದಲ್ಲಿಯೇ ಕ್ರಿಕೆಟ್ ಲೋಕದ ಗಮನ ತಮ್ಮತ್ತ ತಿರುಗುವಂತೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರ ಸಹನೆಯ ಆಟ ತಂಡಕ್ಕೆ ಪ್ರಯೋಜನಕಾರಿ!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT