ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ `ಕಳಂಕ' ತೊಳೆಯಬೇಕು

ಮುಖಂಡರ ತಲೆಗೆ 1 ಸಾವಿರ ಜನ ಕಡ್ಡಾಯ
Last Updated 24 ಏಪ್ರಿಲ್ 2013, 9:09 IST
ಅಕ್ಷರ ಗಾತ್ರ

ತುಮಕೂರು: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯರಾಗಿ ಪ್ರಚಾರ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯದೆ ರಾಹುಲ್ ಗಾಂಧಿಗೆ ಕಳಂಕ ತಟ್ಟಿತು.  ರಾಹುಲ್‌ಗಾಂಧಿಗೆ ಅಂಟಿರುವ ಕಳಂಕವನ್ನು  ಕರ್ನಾಟಕದಲ್ಲಿ ತೊಳೆಯಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಷಫಿ ಅಹ್ಮದ್ ಹೇಳಿದರು.

ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕ್ರೀಡಾಂಗಣ ತುಂಬಿ ತುಳುಕುವಷ್ಟು ಜನರನ್ನು ಸೇರಿಸಲು ಯತ್ನಿಸಬೇಕು ಎಂದು ಮುಖಂಡರಿಗೆ ಮನವಿ ಮಾಡಿದರು.

ಕ್ರೀಡಾಂಗಣದಲ್ಲಿ ಒಟ್ಟು 25 ಸಾವಿರ ಕುರ್ಚಿ ಹಾಕಲಾಗುವುದು. ದೂರದ ಊರುಗಳಿಂದ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗುವುದು. ನಗರದ ಎಲ್ಲ 35 ವಾರ್ಡ್‌ಗಳ ಗೆದ್ದ-ಸೋತ ಸದಸ್ಯರು ತಲಾ 1 ಸಾವಿರ ಮಂದಿಯನ್ನು ಕಡ್ಡಾಯವಾಗಿ ಕರೆ ತರಬೇಕು ಎಂದು ಸೂಚಿಸಿದರು.

ಎಐಸಿಸಿ ಕಾರ್ಯದರ್ಶಿ ಆಶಾ ಕುಮಾರಿ ಮಾತನಾಡಿ, ರಾಹುಲ್ ಕಾರ್ಯಕ್ರಮಕ್ಕೆ ಕನಿಷ್ಠ 50 ಸಾವಿರ ಜನರನ್ನು ಸೇರಿಸಲು ಯೋಜನೆ ರೂಪಿಸಬೇಕು. ಜಿಲ್ಲೆಯ 11 ಕ್ಷೇತ್ರದಿಂದ ನಿರ್ದಿಷ್ಟವಾಗಿ ಕರೆ ತರಬೇಕಾದ ಜನರ ಸಂಖ್ಯೆಯನ್ನು ಯೋಜಿಸಬೇಕು. ಸಭಿಕರಲ್ಲಿ ಶೇ 50ರಷ್ಟು ಮಹಿಳೆಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಎಲ್ಲ ವರ್ಗಗಳ ಜನರೂ ಇರುವಂತೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮಧುಗಿರಿ ಕ್ಷೇತ್ರದ ಅಭ್ಯರ್ಥಿ ಕೆ.ಎನ್.ರಾಜಣ್ಣ ಮಾತನಾಡಿ, ಚುನಾವಣೆ ಸಂದರ್ಭ ದೂರದ ಊರುಗಳಿಂದ ಜನರನ್ನು ಕರೆ ತರುವುದು ಕಷ್ಟವಾಗುತ್ತದೆ. ತುಮಕೂರು ನಗರ, ಗ್ರಾಮಾಂತರ, ಕೊರಟಗೆರೆ ಮತ್ತು ಗುಬ್ಬಿ ಕ್ಷೇತ್ರಗಳಿಂದ ಹೆಚ್ಚು ಜನರನ್ನು ಕರೆಸಲು ಆಲೋಚಿಸುವುದು ಒಳಿತು ಎಂದರು.

ನಗರಸಭೆ ಸದಸ್ಯ ಎಂ.ಪಿ.ಮಹೇಶ್ ನಗರಸಭೆಯ ಎಲ್ಲ ವಾರ್ಡ್‌ಗಳಿಂದ 20 ಸಾವಿರ ಜನರನ್ನು ಸೇರಿಸುವ ಭರವಸೆ ನೀಡಿದರು. ನಗರ ಕ್ಷೇತ್ರದ ಅಭ್ಯರ್ಥಿ ಡಾ.ರಫೀಕ್ ಅಹ್ಮದ್, ಎಐಸಿಸಿ ಸದಸ್ಯರಾದ ಅಶೋಕ್ ತನ್ವರ್, ಡಾ.ವಿಜಯಲಕ್ಷ್ಮಿ, ಡಾ.ಸಂದೀಪ್, ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂ ಪಾಷ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಎಲ್ಲ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT