ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಯಶಸ್ಸಿಗೆ ಸಂತಸಪಡದ ಆಟಗಾರರು

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಾಹುಲ್ ದ್ರಾವಿಡ್ ತಮ್ಮ ತಂಡದ ಯಶಸ್ಸಿಗಾಗಿ ಅನೇಕ ಬಾರಿ ಉತ್ತಮ ಇನಿಂಗ್ಸ್ ಆಡಿದ್ದರೂ ಆ ಯಶಸ್ಸಿಗೆ ಸಹ ಆಟಗಾರರೇ ಸಂತಸಪಡಲಿಲ್ಲ. ಅಷ್ಟೇ ಅಲ್ಲ ಈ ಬ್ಯಾಟ್ಸ್‌ಮನ್ ತನ್ನ ನಾಯಕರಿಗೆ ನೀಡಿದಂಥ ಬೆಂಬಲ ಇವರು ನಾಯಕರಾಗಿದ್ದಾಗ ಬೇರೆಯವರಿಂದ ಸಿಗಲಿಲ್ಲ...

-ಹೀಗೆಂದು ತಮ್ಮ ಹೊಸ ಪುಸ್ತಕ `ರಾಹುಲ್ ದ್ರಾವಿಡ್-ಟೈಮ್‌ಲೆಸ್ ಸ್ಟೀಲ್~ ಪುಸ್ತಕದಲ್ಲಿ ಬರೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಹೊಸ ವಿವಾದದ ಬಿರುಗಾಳಿ ಏಳುವಂತೆ ಮಾಡಿದ್ದಾರೆ.
ದೇಶ ಹಾಗೂ ವಿದೇಶದಲ್ಲಿ ತಂಡದ ಯಶಸ್ಸಿಗಾಗಿ ಆಡಿದ ಹಾಗೂ ಹೋರಾಡಿದ ಬ್ಯಾಟ್ಸ್‌ಮನ್ ಸಾಧನೆಯನ್ನು ತಂಡದೊಳಗೆ ಇದ್ದವರೇ ಮುಕ್ತ ಮನಸ್ಸಿನಿಂದ ಮೆಚ್ಚಿಕೊಳ್ಳಲಿಲ್ಲ ಎನ್ನುವ ಗುಟ್ಟನ್ನು ಚಾಪೆಲ್ ತಮ್ಮ ಪುಸ್ತಕದಲ್ಲಿ ಬಹಿರಂಗವಾಗಿ ತೆರೆದಿಟ್ಟಿದ್ದಾರೆ.

`ತಂಡದೊಳಗೇ ಇದ್ದ ಕೆಲವು ವ್ಯಕ್ತಿಗಳು ಆತಂಕಗೊಂಡಿದ್ದರು. ಅಂಥವರು ರೂಪಿಸಿಕೊಂಡ ಗುಂಪು ರಾಹುಲ್ ವಿರುದ್ಧ ಕೆಲಸ ಮಾಡಿದವು~ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ ಮಾಜಿ ಕೋಚ್ ಗ್ರೇಗ್.

`ಗೋಡೆ~ ಎನ್ನುವ ಖ್ಯಾತಿ ಪಡೆದಿರುವ ಬ್ಯಾಟ್ಸ್‌ಮನ್ ತನ್ನ ನಾಯಕರಿಗೆ ಎಲ್ಲ ಸಂದರ್ಭದಲ್ಲಿಯೂ ಬೆಂಬಲ ನೀಡಿದ್ದರು. ಆದರೆ ಅದೇ ರೀತಿಯ ಸಹಕಾರವು ಅವರೇ ನಾಯಕತ್ವ ವಹಿಸಿಕೊಂಡಾಗ ಯಾರೊಬ್ಬರಿಂದಲೂ ಸಿಗಲಿಲ್ಲ ಎನ್ನುವುದು ಚಾಪೆಲ್ ಅಸಮಾಧಾನಕ್ಕೆ ಕಾರಣ.

ಒಂದು ವೇಳೆ ಈ ಶಿಸ್ತಿನ ನಾಯಕನಿಗೆ ಸಂಪೂರ್ಣ ಬೆಂಬಲ ಸಿಕ್ಕಿದ್ದರೆ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎನ್ನುವ ಗೌರವ ಕೂಡ ಸಲ್ಲುವ ಸಾಧ್ಯತೆಯಿತ್ತು ಎಂದು ಕೂಡ ಬರೆದಿದ್ದಾರೆ.

`ರಾಹುಲ್‌ಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿ ಗೆಲ್ಲುವುದರಲ್ಲಿ ವಿಶ್ವಾಸ ಇತ್ತು. ಆದ್ದರಿಂದಲೇ ತಾವು ಟಾಸ್ ಗೆದ್ದಾಗ ಕೂಡ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸುತ್ತಿದ್ದರು. 

ಅವರ ನಾಯಕತ್ವದಲ್ಲಿಯೇ ಭಾರತ ಸತತವಾಗಿ ಒಂಬತ್ತು ಏಕದಿನ ಪಂದ್ಯಗಳನ್ನು ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದು. ಇನ್ನೂ ಒಂದು ವಿಶೇಷವೂ ಇದೆ. ಗುರಿಯನ್ನು ಬೆನ್ನಟ್ಟಿ ಸತತ ಹದಿನೇಳು ಪಂದ್ಯಗಳನ್ನು ಗೆದ್ದ ದಾಖಲೆ ಸಾಧ್ಯವಾಗಿದ್ದು ಕೂಡ ಇದೇ ಆಟಗಾರ ಭಾರತ ತಂಡದ ನಾಯಕ ಆಗಿದ್ದಾಗ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2006ರಲ್ಲಿ ಕೆರಿಬಿಯನ್ ನಾಡಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0ಯಲ್ಲಿ ವಿಜಯ ಸಾಧಿಸಿದ್ದನ್ನು ಹಾಗೂ 2006-07ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪ್ರಥಮ ಟೆಸ್ಟ್ ಅನ್ನು ಚಾಪೆಲ್ ಉಲ್ಲೇಖಿಸಿದ್ದಾರೆ.

`ರಾಹುಲ್ ದ್ರಾವಿಡ್-ಟೈಮ್‌ಲೆಸ್ ಸ್ಟೀಲ್~ ಪುಸ್ತಕದಲ್ಲಿ...

- ತಂಡದ ಯಶಸ್ಸಿಗಾಗಿ ಹೋರಾಡಿದ ಬ್ಯಾಟ್ಸ್‌ಮನ್ ಸಾಧನೆಯನ್ನು ತಂಡದೊಳಗೆ ಇದ್ದವರೇ ಮೆಚ್ಚಿಕೊಳ್ಳಲಿಲ್ಲ

- ರಾಹುಲ್ ತನ್ನ ನಾಯಕರಿಗೆ ನೀಡಿದ ರೀತಿಯ ಬೆಂಬಲ ಅವರೇ ನಾಯಕತ್ವ ವಹಿಸಿಕೊಂಡಾಗ ಯಾರೊಬ್ಬರಿಂದಲೂ ಸಿಗಲಿಲ್ಲ.

- ದ್ರಾವಿಡ್ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎನ್ನುವ ಗೌರವ ಹೊಂದುವ ಸಾಧ್ಯತೆಯಿತ್ತು.

- ಪಿಚ್ ಗುಣ ಹಾಗೂ ವಾತಾವರಣದ ಬಗ್ಗೆ ಅವರೆಂದೂ ಯೋಚನೆ ಮಾಡಲಿಲ್ಲ.

- ಈ ಕ್ರಿಕೆಟಿಗನನ್ನು ಮೆಚ್ಚಿಕೊಂಡಿದ್ದೇನೆ. ಆತ್ಮೀಯತೆಯೂ ಇದೆ. ಆದ್ದರಿಂದ ಅವರ ಕುರಿತು ಬೇರೆಯವರು ಹೇಳದ ಸತ್ಯಗಳನ್ನು ತೆರೆದಿಟ್ಟಿದ್ದೇನೆ.

- ಭಾರತ ತಂಡದ ಮೂರನೇ ಕ್ರಮಾಂಕದ ಮಾಜಿ ಆಟಗಾರ ಎಂದೂ ಆತುರದಲ್ಲಿ ನಿರ್ಧಾರ ಕೈಗೊಳ್ಳಲಿಲ್ಲ.

- ಮುತ್ತಯ್ಯ ಮುರಳೀಧರನ್ ಎದುರು ಪ್ರಥಮ ಇನಿಂಗ್ಸ್‌ನಲ್ಲಿ ನಿರಾತಂಕವಾಗಿ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ಕೂಡ ಒಬ್ಬರು.

- ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಪ್ರತಿಯೊಂದು ಎಸೆತದಲ್ಲಿ ರನ್ ಗಳಿಸಬೇಕು ಎನ್ನುವ ತುಡಿತ ಈ ಆಟಗಾರನಿಗಿತ್ತು.

- ಎದುರಾಳಿ ಬೌಲರ್‌ನ ಉತ್ತಮ ಎಸೆತದಲ್ಲಿ ರಕ್ಷಿಸಿಕೊಳ್ಳುವ ಕಲೆ ಇವರಷ್ಟು ಚೆನ್ನಾಗಿ ಮೈಗೂಡಿಸಿಕೊಂಡವರು ವಿರಳ.

- ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಆಡಬೇಕಾದ ಸಂದರ್ಭದಲ್ಲಿ ರಾಹುಲ್‌ಗೆ ಭಾರಿ ಆಸಕ್ತಿ. ಆ ಇನಿಂಗ್ಸ್‌ಗೆ ಮುನ್ನವೇ ಅಂಗಳದ ತುದಿಯಲ್ಲಿ ನಿಂತು ತೀರ ಹತ್ತಿರದಲ್ಲಿ ಚೆಂಡನ್ನು ಎಸೆಯುವಂತೆ ಹೇಳಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು.

- ಧೈರ್ಯ ಇದ್ದ ಕಾರಣದಿಂದಲೇ ಅವರು ವಿಶ್ವ ಮೆಚ್ಚುವಂಥ ತಂತ್ರಗಾರಿಕೆಯ ಬ್ಯಾಟ್ಸ್‌ಮನ್ ಆಗಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT