ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಕ್ಷಾ ಮೇಲೆ ಕಾಡಾನೆ ದಾಳಿ: ಮಹಿಳೆಗೆ ಗಾಯ

Last Updated 4 ಆಗಸ್ಟ್ 2011, 10:50 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ದಿಂದ ಆಹಾರ ಅರಸಿ ಸುಂಟಿಕೊಪ್ಪ ವ್ಯಾಪ್ತಿಯ ಕಾಫಿ ತೋಟಗಳಿಗೆ ನುಸುಳಿ ಬೀಡುಬಿಟ್ಟಿರುವ ಕಾಡಾನೆಗಳ ದಾಳಿ ಯಿಂದ ತೋಟದ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ಬುಧವಾರ ತೀವ್ರ ಭೀತಿಗೆ ಒಳಗಾಗಿದ್ದಾರೆ.

ಬೆಳಿಗ್ಗೆ 8.30 ಗಂಟೆ ವೇಳೆಗೆ ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಗ್ರಾಮದ ಕಡೆಯಿಂದ ಸುಂಟಿಕೊಪ್ಪದ ಕಡೆಗೆ ಕೂಲಿ ಕಾರ್ಮಿಕರು ಬರುತ್ತಿದ್ದ ಆಟೋರಿಕ್ಷಾದ ಮೇಲೆ ಸುಂಟಿಕೊಪ್ಪ ಪಟ್ಟಣದ ಸರಹದ್ದಿನ ಮಾದಾಪುರ ರಸ್ತೆ ಬಳಿ ಪಶುವೈದ್ಯಕೀಯ ಆಸ್ಪತ್ರೆ ಬಳಿ ಕಾಫಿ ತೋಟದಿಂದ ನುಸುಳಿ  ಬಂದ ಎರಡು ಆನೆಗಳು ರಿಕ್ಷಾದ ಮೇಲೆ ದಾಳಿ ನಡೆಸಿದೆ.

ಈ ಘಟನೆಯಿಂದ ರಿಕ್ಷಾ ಪಲ್ಟಿ ಹೊಡೆದಾಗ ಚಾಲಕ ಸೇರಿದಂತೆ ನಾಲ್ಕು ಮಂದಿ ಅಪಾಯದಿಂದ ಪಾರಾಗಿದ್ದಾರೆ. ರಿಕ್ಷಾದಿಂದ ಕೆಳಗೆ ಬಿದ್ದ ಮಹಿಳೆ ಲಕ್ಷ್ಮಿ ಮೇಲೆ ಎರಗಿದ ಕಾಡಾನೆಗಳು ತಕ್ಷಣ ಗಾಬರಿಗೊಂಡು ಅಲ್ಲಿಂದ ಕಾಲ್ಕಿತ್ತಿವೆ. ಇದೇ ವೇಳೆ ಒಂಟಿ ಸಲಗವೊಂದು ಮಾದಾಪುರ ರಸ್ತೆಯಲ್ಲಿನ ದೇವಪ್ಪ ಎಂಬುವರ ಕೊಟ್ಟಿಗೆ ಮತ್ತು ಡಿಶ್ ಆ್ಯಂಟೆನಾದ ಮೇಲೆ ದಾಳಿ ಮಾಡಿ ಹಾನಿ ಮಾಡಿದೆ.

ವಿಷಯದ ತಿಳಿದ ಕೂಡಲೇ ಸ್ಥಳೀಯರು ಗಾಯಗೊಂಡಿದ್ದ ಲಕ್ಷ್ಮಿ ಎಂಬುವರನ್ನು ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ತಕ್ಷಣ 108 ಸಂಖ್ಯೆಯ ಆಂಬುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿ ಅಪಾಯದಿಂದ ಪಾರಾಗಿದ್ದಾರೆ.

ಮೀಸಲು ಅರಣ್ಯದಿಂದ ಕಳೆದ 20 ದಿನಗಳ ಹಿಂದೆಯೇ ಆಹಾರ ಅರಸಿ ಕಾಫಿ ತೋಟಗಳತ್ತ ನುಸುಳಿ ನಾಲ್ಕೈದು ಕಾಡಾನೆಗಳನ್ನೊಳಗೊಂಡ  2-3 ತಂಡಗಳಲ್ಲಿ ಧಾವಿಸಿರುವ ಕಾಡಾನೆಗಳು ಬುಧವಾರ ಬೆಟ್ಟಗೇರಿ, ಪನ್ಯ, ಕೆಂಚಟ್ಟಿ ಎಂಬ ದಟ್ಟವಾದ ಕಾಫಿ ತೋಟದಲ್ಲಿ ಬೀಡುಬಿಟ್ಟ ಪರಿಣಾಮ ಈ ಭಾಗದ ಜನತೆ ಭೀತಿಯಿಂದ ಮನೆ ಯಿಂದ ಹೊರಗೆ ಬರಲು ತೊಂದರೆಯಾಯಿತು.

ಸುಂಟಿಕೊಪ್ಪ-ಮಾದಾಪುರ ರಸ್ತೆ ಯಂಚಿನ ಎರಡು ಬದಿಯಲ್ಲೂ ಕಾಡಾನೆ ಗಳು ಸುತ್ತಾಡುತ್ತಿದ್ದುದರಿಂದ ಶಾಲೆ ಮಕ್ಕಳು ಸೇರಿದಂತೆ ಕೂಲಿ ಕಾರ್ಮಿಕರು, ಗ್ರಾಮಸ್ಥರು ತೀವ್ರ ಭೀತಿಗೊಂಡರು.

ಸುಂಟಿಕೊಪ್ಪ ಸುತ್ತಮುತ್ತಲಿನ ಹತ್ತಾರು ಕಿ.ಮೀ.ವ್ಯಾಪ್ತಿಯಲ್ಲಿ 2-3 ತಂಡಗಳಲ್ಲಿ 3-4 ಕಾಡಾನೆಗಳ ಹಿಂಡು ಬೆಟ್ಟಗೇರಿ, ಪನ್ಯ, ಭೂತನಕಾಡು, ಮತ್ತಿ ಕಾಡು, ಕೆದಕಲ್, ಬೊಯಿಕೇರಿ ಬಳಿಯ ಸಿಂಕೋನ, ಅಂದಗೋವೆ ಸುತ್ತಮುತ್ತ ಲಿನ ಕಾಫಿ ತೋಟಗಳಲ್ಲಿ ಸಂಚರಿಸುತ್ತಿವೆ.

ಬೆಳಿಗ್ಗೆ ನಡೆದ ಕಾಡಾನೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಬೆಟ್ಟಗೇರಿ, ಪನ್ಯ, ಭೂತನಕಾಡು, ಮತ್ತಿಕಾಡು ಮತ್ತಿತರ ಕಡೆಗಳಿಂದ  ಸುಂಟಿಕೊಪ್ಪ, ಮಾದಾಪುರ ಶಾಲಾ - ಕಾಲೇಜಿಗೆ ತೆರಳ ಬೇಕಾದ 130 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕಾಡಾನೆಗಳಿಗೆ ಹೆದರಿ ಮನೆಯಿಂದ ಶಾಲೆಗೆ ತೆರಳಲು ಸಾಧ್ಯವಾಗಲಿಲ್ಲ. ಕೆಲವು ಮಕ್ಕಳು ದಾರಿಯಿಂದಲೇ ಮರಳಿ ಮನೆ ಸೇರಿದರು.

ಕಾಡಾನೆಗಳ ದಾಳಿ ವಿಷಯ ಕುರಿತು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸ ಲಾಯಿತು. ತಕ್ಷಣ ಅರಣ್ಯ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಕಾಡಾನೆಗಳು ತೋಟ ದೊಳಗೆ ಅಡಗಿರುವುದನ್ನು ಪತ್ತೆ ಹಚ್ಚಿದರು.

ಹಗಲು ವೇಳೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಪ್ರಯತ್ನಿಸಿದರೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ದಾರಿಯಲ್ಲಿ ತೆರಳುತ್ತಿರುವವರ ಮೇಲೆ ದಾಳಿ ಮಾಡಬಹುದು ಎಂಬ ಕಾರಣದಿಂದ ಸಂಜೆ ನಂತರ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು  ಪ್ರಯತ್ನಿಸಿದರು. ಆದರೆ ಕಾಡಾನೆಗಳು ಒಂದು ತೋಟ ದಿಂದ ಮತ್ತೊಂದು ತೋಟಕ್ಕೆ ನುಸುಳಿ ಹೋಗುತ್ತಿದ್ದುದು ಕಂಡುಬಂತು ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು.

ಸುಂಟಿಕೊಪ್ಪ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ 15-20 ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ತುರ್ತು ಗಮನಹರಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಾಡಾನೆಗಳ ದಾಳಿಯಿಂದ ಸುಂಟಿ ಕೊಪ್ಪ ಸುತ್ತಮುತ್ತಲಿನ ಕಾಫಿ ಬೆಳೆ ಗಾರರು ಮತ್ತು ಕೂಲಿ ಕಾರ್ಮಿಕರು ಭೀತಿಗೊಂಡಿದ್ದಾರೆ.

ಕಳೆದ ಎರಡು ವಾರದ ಹಿಂದೆ ಕಾಡಿನಿಂದ ದಿಕ್ಕೆಟ್ಟು ಆಹಾರ ಅರಸಿ ಕಾಫಿ ತೋಟದೊಳಗೆ ನುಸುಳಿ ಬೀಡು ಬಿಟ್ಟಿರುವ ಕಾಡಾನೆಗಳು ಸುಂಟಿಕೊಪ್ಪ ಬಳಿಯ ಉಲುಗುಲಿ, ಭೂತನಕಾಡು, ಮತ್ತಿಕಾಡು, ಹೋರೂರು, ಕೆದಕಲ್, ಸಿಂಕೋನ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಸಂಚರಿಸುತ್ತಿವೆ ಎಂದು ಬೆಳೆಗಾರರು ದೂರಿದ್ದಾರೆ.

ಕಾಡಿನಿಂದ ಆಕಸ್ಮಿಕವಾಗಿ ಕಾಫಿ ತೋಟದೊಳಗೆ ಬಂದಿರುವ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟಬೇಕು. ಕಾಡಾನೆ ದಾಳಿಯಿಂದ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕಾಡಾನೆಗಳ ದಾಳಿಯಿಂದ ಸುಂಟಿ ಕೊಪ್ಪ ಸುತ್ತಮುತ್ತಲಿನ ಗ್ರಾಮದ ಜನತೆ ಮತ್ತು ಶಾಲಾ ಮಕ್ಕಳು ಮನೆಯಿಂದ ಹೊರಬರಲು ಗಾಬರಿ ಗೊಂಡಿದ್ದಾರೆ. ಶನಿವಾರ ಮನೆಯಿಂದ ಶಾಲೆಗೆ ಬಂದ ಮಕ್ಕಳು ಮರಳಿ ಮನೆಗೆ ತೆರಳಲು ಗಾಬರಿಗೊಂಡ ಸಂದರ್ಭ ತೋಟದ ಮಾಲೀಕರು  ತಮ್ಮ ವಾಹನ ಗಳ ಮೂಲಕ ಮಕ್ಕಳನ್ನು ಜೋಪಾನ ವಾಗಿ ಮನೆಗೆ ಕರೆದೊಯ್ದ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT