ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿದಂ ಪ್ಯಾಡ್ ಲಯ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಿದಂಪ್ಯಾಡ್ ಲಯವಾದ್ಯಗಳ ಗುಂಪಿಗೆ ಸೇರುವ ವಿಶಿಷ್ಟ ವಾದ್ಯ ಪ್ರಕಾರ. ಸಂಗೀತ ಪರಿಕರಗಳನ್ನು ತಯಾರಿಸುವ ರೋಲೆಂಡ್ ಕಂಪೆನಿ ಮೊದಲ ಬಾರಿಗೆ ಈ ವಾದ್ಯವನ್ನು ಕಂಡುಹಿಡಿಯಿತು ಎನ್ನುತ್ತದೆ ಒಂದು ಮೂಲ. ಮೊದಲು ಇದಕ್ಕೆ ಆಕ್ಟೋಪ್ಯಾಡ್ ಎಂದು ಹೆಸರಿತ್ತು. ಮೊದಲ ಮಾಡೆಲ್ ಅನ್ನು 1985ರಲ್ಲಿ ಕಂಪೆನಿ ಹೊರತಂದಿತು. ಡ್ರಮ್ಸ ತಿಳಿದಿರುವ ಎಲ್ಲ ಕಲಾವಿದರು ಇದನ್ನು ಸುಲಭವಾಗಿ ನುಡಿಸಬಹುದು.

ರಿದಂಪ್ಯಾಡ್‌ನಲ್ಲಿ ಮೊದಲು ಇದ್ದದ್ದು ಒಂದೇ ಮಾಡೆಲ್. ಎಸ್‌ಪಿಡಿ 11 ಮಾಡೆಲ್‌ನ ವಾದ್ಯದಲ್ಲಿ ಒಂದೇ ನಾದ ಬರುತ್ತಿತ್ತು. ಹೀಗಾಗಿ ಲಯವಾದ್ಯ ಕಲಾವಿದರು ಸಂಗೀತ ಕಛೇರಿ ಮತ್ತು ಧ್ವನಿ ಮುದ್ರಣಕ್ಕಾಗಿ ಬೇರೆ ಬೇರೆ ರೀತಿಯ ಲಯವಾದ್ಯ ಕೊಂಡೊಯ್ಯಬೇಕಾಗುತ್ತಿತ್ತು. ಯಾವಾಗ ಸುಧಾರಿತ ಮತ್ತು ಅತ್ಯಾಧುನಿಕ ಮಾದರಿಯ ಎಸ್‌ಪಿಡಿ 20 ಮಾದರಿಯ ರಿದಂಪ್ಯಾಡ್ ಬಂತೋ, ಒಂದೇ ವಾದ್ಯದಲ್ಲಿ ಹಲವಾರು ವಾದ್ಯಗಳ ನಾದ ಹೊರಹೊಮ್ಮಲು ಶುರುವಾಯಿತು. ಒಂದೇ ವಾದ್ಯದಲ್ಲಿ ತಬಲಾ, ಡೋಲಕ್, ಟ್ಯಾಂಬುರೇನ್, ಘಟಗಳಲ್ಲದೆ ತಂತಿ ವಾದ್ಯಗಳಾದ ಸಂತೂರ್, ಸಿತಾರ್‌ಗಳ ನಾದವನ್ನು ಹೋಲುವ ವಿಶಿಷ್ಟ ನಾದ ಬರಿಸಲು ಸಾಧ್ಯವಾಯಿತು. ರಿದಂಪ್ಯಾಡ್ ಸಂಗೀತ ಕಛೇರಿಗಳಲ್ಲಿ, ಅದರಲ್ಲೂ ಆರ್ಕೆಸ್ಟ್ರಾಗಳಲ್ಲಿ ಮಿಂಚಲಾರಂಭಿಸಿತು. ಲಯವಾದ್ಯ ಕಲಾವಿದರು ಹೆಚ್ಚು ಹೆಚ್ಚು ಬಳಸಲಾರಂಭಿಸಿದರು. ಇದು `ಸಂಗೀತಗಾರ ಸ್ನೇಹಿ~ ವಾದ್ಯವಾಗಿ ಮಾರ್ಪಟ್ಟಿತು. ಅದಾಗಿ `ಯಮಹ~ ಕಂಪೆನಿ ಕೂಡ ಇದೇ ತರದ ರಿದಂಪ್ಯಾಡ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದೀಗ ರಿದಂಪ್ಯಾಡ್ ಬಹು ಮುಖ್ಯ ಲಯವಾದ್ಯವಾಗಿ ಸಂಗೀತಗಾರರ ಮತ್ತು ಕೇಳುಗರ ಮನಗೆದ್ದಿದೆ.

`ಈ ವಾದ್ಯವನ್ನು ಕೋಲುಗಳ ಸಹಾಯದಿಂದ ನುಡಿಸಬೇಕು. ನುಡಿಸಾಣಿಕೆ ಕ್ರಮ ಹೆಚ್ಚು ಕಡಿಮೆ ಡ್ರಮ್ಸ ತರಹವೇ ಇರುತ್ತದೆ. ಹೀಗಾಗಿ ಡ್ರಮ್ಸ ನುಡಿಸುವ ಕಲಾವಿದರಿಗೆ ರಿದಂಪ್ಯಾಡ್ ನುಡಿಸುವುದು ಸುಲಭ ಸಾಧ್ಯ~ ಎಂದು ವಿವರಿಸುತ್ತಾರೆ ಖ್ಯಾತ ಡ್ರಮ್ಸ ವಾದಕ ಬಿ.ಎಸ್. ಅರುಣ್‌ಕುಮಾರ್.

`ಇದಕ್ಕೆ ಬಹು ಲಯ ವಾದ್ಯ (ಮಲ್ಟಿ ಪರ್ಕಷನ್ ಇನ್‌ಸ್ಟ್ರುಮೆಂಟ್) ಎಂದು ಹೆಸರು. ಬೇರೆ ಬೇರೆ ಲಯವಾದ್ಯ ನುಡಿಸಲು ಬಲ್ಲವರು ಮಾತ್ರ ಇದರಲ್ಲಿ ಪ್ರಯೋಗ ಮಾಡುತ್ತಲೇ ಕಲಿಯುತ್ತಾರೆ. ಹೀಗಾಗಿ ಬೇರೆ ಯಾವುದಾದರೂ ಲಯವಾದ್ಯ ಬಲ್ಲವರು ಇದನ್ನು ಸುಲಭದಲ್ಲಿ ನುಡಿಸಬಹುದು. ನುಡಿಸುವ ತಂತ್ರಗಾರಿಕೆ ತಿಳಿದುಕೊಂಡರೆ ಸಾಕು~ ಎನ್ನುತ್ತಾರೆ ಅರುಣ್.

ರಿದಂಪ್ಯಾಡ್ ಅನ್ನು ಫೈಬರ್‌ನಿಂದ ತಯಾರಿಸುತ್ತಾರೆ. ನುಡಿಸುವ ಭಾಗವನ್ನು ವಿಶೇಷವಾದ ರಬ್ಬರ್‌ನಿಂದ ರೂಪಿಸಲಾಗುತ್ತದೆ. ಇತ್ತೀಚೆಗೆ ಈ ವಾದ್ಯ ಹೆಚ್ಚು ಹೆಚ್ಚು ಜನಪ್ರಿಯವೂ ಆಗುತ್ತಿದೆ. ಹಲವಾರು ಕಲಾವಿದರು ರಿದಂಪ್ಯಾಡ್ ಅನ್ನು ಜನಪ್ರಿಯಗೊಳಿಸಿದ್ದಾರೆ. ಶ್ಯಾಮ್, ಜಗದೀಶ್, ಗೆರಾಲ್ಡ್ ರಿದಂಪ್ಯಾಡ್‌ನಲ್ಲಿ ನುರಿತ ವಾದಕರು.

ಬಹೂಪಯೋಗಿ ವಾದ್ಯ
`ಸಿನಿಮಾ ಸಂಗೀತಗಳಲ್ಲಿ ಫ್ಯೂಷನ್ ಸಂಗೀತ, ಲಯವಾದ್ಯ ಕಛೇರಿಗಳಲ್ಲಿ ರಿದಂಪ್ಯಾಡ್ ಈಗೀಗ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಇದೀಗ ಭರತನಾಟ್ಯಗಳಲ್ಲಿ, ಅರಂಗೇಟ್ರಂಗಳಲ್ಲಿ, ನೃತ್ಯ ಸಂಗೀತ ರೆಕಾರ್ಡಿಂಗ್‌ಗಳಲ್ಲಿ ರಿದಂಪ್ಯಾಡ್ ಪ್ರಮುಖ ಪಾತ್ರ ವಹಿಸುತ್ತಿದೆ~ ಎಂಬುದು ಅರುಣ್ ಕುಮಾರ್ ಅನುಭವದ ಮಾತು.

ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಮೊದಲ ಬಾರಿಗೆ ರಿದಂಪ್ಯಾಡ್ ನುಡಿಸಿದ ಹೆಗ್ಗಳಿಕೆ ಅರುಣ್ ಅವರದ್ದು. ಚೆನ್ನೈಯಲ್ಲಿ ಕಳೆದ ಡಿಸೆಂಬರ್‌ನಲ್ಲಿ `ಚೆನ್ನೈ ಸಂಗೀತ ಅಕಾಡೆಮಿ~ ನಡೆಸಿದ ಸಂಗೀತೋತ್ಸವದಲ್ಲಿಯೂ ಅವರು ಕಛೇರಿ ನೀಡಿದ್ದರು. ಮೃದಂಗ, ಪಿಟೀಲು, ಗಿಟಾರ್, ಕೀಬೋರ್ಡ್ ಜತೆಗೆ ರಿದಂಪ್ಯಾಡ್ ಅನ್ನೂ ನುಡಿಸುವ ಬಹುವಾದ್ಯ ಸಂಗೀತ ಕಛೇರಿ ವಿಶಿಷ್ಟವಾಗಿಯೂ ಇರುತ್ತದೆ.

ಸದ್ಯ ಬೆಂಗಳೂರಿನಲ್ಲಿ ಅರುಣ್ ಕುಮಾರ್ ಅವರ ಶಿಷ್ಯರಾದ ಪ್ರಮತ್ ಕಿರಣ್ ರಿದಂಪ್ಯಾಡ್‌ನಲ್ಲಿ ಪಳಗಿರುವ ಕಲಾವಿದರು. ಇವರ ಜತೆಗೆ ಗುರುರಾಜ್, ಪ್ರದ್ಯುಮ್ನ, ಕೃಷ್ಣ ಮುಂತಾದವರು ಕೂಡ ರಿದಂಪ್ಯಾಡ್‌ನಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ.

ಸಂಗೀತ ವಾದ್ಯಗಳು ಸಿಗುವ ಎಲ್ಲ ಅಂಗಡಿಗಳಲ್ಲೂ ರಿದಂಪ್ಯಾಡ್ ಸಿಗುತ್ತದೆ. ಬೆಲೆ ಅಂದಾಜು 40 ಸಾವಿರ ರೂಪಾಯಿ. ವಾದ್ಯದ ಮಾದರಿ ಮತ್ತು ಗುಣಮಟ್ಟವನ್ನು ಆಧರಿಸಿ ಬೆಲೆಯಲ್ಲೂ ವ್ಯತ್ಯಾಸವಾಗಬಹುದು. ವಾದ್ಯ, ವಾದನ ಕ್ರಮ, ಕಲಿಕೆ ಮತ್ತಿತರ ಮಾಹಿತಿಗಾಗಿ ಡ್ರಮ್ಸ ಮತ್ತು ರಿದಂಪ್ಯಾಡ್ ವಾದಕ ಬಿ.ಎಸ್. ಅರುಣ್‌ಕುಮಾರ್ ಅವರನ್ನು 9845401566ನಲ್ಲಿ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT