ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿನೈಸನ್ಸ್‌ನಲ್ಲಿ ಚಿತ್ರ ಲೋಕ

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ರಿನೈಸನ್ಸ್ ಗ್ಯಾಲರಿಯಲ್ಲಿ ಈ ವಾರ ಚಿತ್ರ ಹಾಗೂ ಚಿತ್ತಾರಗಳ ಲೋಕವೇ ಮೈತಳೆಯಲಿದೆ. ವಿವಿಧ ಪ್ರದೇಶದ ಮೂವರು ಕಲಾವಿದರು ಹಾಗೂ ಛಾಯಾಚಿತ್ರಕಾರ ಹರ್ಷ ಎಸ್. ಜೊತೆಗೂಡಿ ಸಮೂಹ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಮನುಷ್ಯರ ಭಾವಾಭಿವ್ಯಕ್ತಿಗಳಂತೆಯೇ ನಿಸರ್ಗವೂ ಇವರಲ್ಲಿ ಸೋಜಿಗವನ್ನು ಉಂಟು ಮಾಡುತ್ತದೆಯಂತೆ. ನಿಸರ್ಗದ ಪ್ರತಿ ಬಣ್ಣವನ್ನೂ ಬೆಳಕಿನೊಂದಿಗೆ ಆಟವಾಡುತ್ತ ಸೆರೆಹಿಡಿಯುವ ಹೆಬ್ಬಯಕೆ ಹರ್ಷ ಎಸ್. ಅವರಿಗೆ ಇದೆಯಂತೆ.

ಬದುಕಿನಲ್ಲಿ ಒಮ್ಮೆ ಇಂಥ ಚಿತ್ರಗಳೆಡೆ ಇಣುಕಿದರೆ ಬದುಕಿನ ಬಂಡಿಯೇ ಹಿಂದಕ್ಕೋಡುತ್ತದೆ. ಸಮಯದೊಂದಿಗೆ ಆಟವಾಡುವ ಸಾಮರ್ಥ್ಯ ಇರುವ ಚಿತ್ರಗಳನ್ನು ಹಿಡಿಯುವುದು ಇವರಿಗಿಷ್ಟದ ಕೆಲಸ ಎಂದು ಹೇಳುತ್ತಾರೆ ಅರ್ಚನಾ ಮೆಹ್ರೋತ್ರ.

15 ವರ್ಷ ವಯಸ್ಸಿನಿಂದಲೇ ಬಣ್ಣಗಳತ್ತ ಆಕರ್ಷಿತಳಾಗಿದ್ದೆ. ಬಣ್ಣದ ಲೋಕದಲ್ಲಿ ಕುಂಚ ಮತ್ತು ಪೆನ್ಸಿಲ್ ಸಿಕ್ಕರೆ ಏನೆಲ್ಲ ಬಿಡಿಸಬಹುದು ಎನಿಸುತ್ತಿತ್ತು. ಈ ಅಭಿರುಚಿ ಬೆಳೆಯಲು ನನ್ನಮ್ಮನೂ ಕಾರಣ ಎನ್ನಬಹುದು. ಆದರೆ 30ರ ಹರೆಯ ತಲುಪುವವರೆಗೂ ನಾನು ಸ್ವಯಂ ಕಲಿತ ಕಲೆಯನ್ನೇ ಪೋಷಿಸಿಕೊಂಡು ಬರುತ್ತಿದೆ. 30ರ ನಂತರ ಶಾಸ್ತ್ರೀಯವಾಗಿ ಕ್ಯಾಲಿಫೋರ್ನಿಯಾದ ಕಮ್ಯುನಿಟಿ ಕಾಲೇಜಿನಲ್ಲಿ ಕಲಿತೆ. ಇದೀಗ ಸೃಜನಶೀಲ ಮನಸಿನ ಚಿತ್ರಗಳಿಗೆ ಗೆರೆ ಬರೆಯಲು ಜ್ಞಾನವೂ ದೊರೆತಂತೆ ಆಗಿದೆ ಎನ್ನುವುದು ಅವರ ಅಭಿಪ್ರಾಯ.

ಇನ್ನೊಬ್ಬರು ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಕಲಾವಿದೆ. ಪೇಂಟಿಂಗ್ ನನ್ನ ಮೊದಲ ಪ್ರೀತಿ ಎಂದು ಹೇಳಿಕೊಳ್ಳುವ ಅಪರಾಜಿತಾ ಲಾಲ್‌ಗೆ ಚಿತ್ರಕಲೆಯನ್ನು ಪೂರ್ಣಮಟ್ಟದ ವೃತ್ತಿಯಾಗಿ ಕೈಗೊಳ್ಳಲಾಗದೇ ಇರುವ ಕಾರಣಕ್ಕೆ ವಿಶಾದವೂ ಇದೆ. ವೃತ್ತಿಯಲ್ಲಿಯೂ ಬದುಕಿನಲ್ಲಿಯೂ ನೆಮ್ಮದಿ ನೀಡುವ ಕಲೆ ಇದು ಎನ್ನುವುದು ಅಪರಾಜಿತಾ ಕಂಡುಕೊಂಡ ಸತ್ಯವಂತೆ.

ಜಲವರ್ಣ ಇಷ್ಟಪಡುವ ಅಪರಾಜಿತಾಗೆ ತಾವು ಬಳಸುವ ಮಾಧ್ಯಮಗಳಲ್ಲಿ ಪ್ರಯೋಗ ಮಾಡುವುದು ಅಚ್ಚುಮೆಚ್ಚು. `ಎರಡು ಪುಟ್ಟ ಮಕ್ಕಳ ಅಮ್ಮನಾಗಿರುವುದರಿಂದ ಕುಂಚಗಳೊಡನೆ ಸಮಯ ಕಳೆಯಲು ಆಗುತ್ತಿಲ್ಲ, ಆದರೂ ಕೆಲ ಹೊಸ ಕಲಾಕೃತಿಗಳನ್ನು ಇಷ್ಟರಲ್ಲಿಯೇ ಪ್ರದರ್ಶನಕ್ಕೆ ಸಿದ್ಧಪಡಿಸುತ್ತಿದ್ದೇನೆ~ ಎಂದು ಹೇಳಲೂ ಅವರು ಮರೆಯುವುದಿಲ್ಲ.

ದೇವರ ನಾಡು ಕೇರಳಕ್ಕೆ ಸೇರಿದ ಸುಧೀರ್ ಪಿ.ಆರ್. ಸದ್ಯಕ್ಕೆ ಬೆಂಗಳೂರಿನ ನಿವಾಸಿ. ತ್ರಿಚೂರ್ ಮೂಲದ ಈ ಕಲಾವಿದ ಜಾಹೀರಾತು ಪ್ರಪಂಚದಲ್ಲಿ ಸ್ವಂತದ ಸಂಸ್ಥೆ -ಚೀರ್ಸ್‌ ಕಮ್ಯುನಿಕೇಷನ್ಸ್- ಸ್ಥಾಪಿಸಿಕೊಂಡಿದ್ದಾರೆ. ಬಣ್ಣ ಇವರಿಗೂ ಬಾಲ್ಯದಿಂದಲೇ ಸೆಳೆದಿರುವ ಮಾಧ್ಯಮ.

ಆದರೆ ಯಾವ ಬಣ್ಣಗಳನ್ನು ಹೇಗೆ ಬಳಸಬೇಕು ಎಂಬುದನ್ನೂ ಕಲಿಯದ ಈ ಕಲಾವಿದ ತಮ್ಮ ಸೃಷ್ಟಿಗೆ ತಾವೇ ಗುರು ಎನ್ನುತ್ತಾರೆ. ಕಲಾತ್ಮಕ ದೃಷ್ಟಿಯಿಂದಲೇ ಸೃಜನಶೀಲತೆಯ ಸೃಷ್ಟಿಯಾಗುತ್ತದೆ ಎನ್ನುವುದು ಇವರ ನಂಬಿಕೆಯಾಗಿದೆ. ಚಾರ್ಕೋಲ್, ಪೋಸ್ಟರ್, ಡ್ರೈ ಪೇಸ್ಟಲ್ಸ್, ತೈಲವರ್ಣ ಇವರ ಮಾಧ್ಯಮಗಳು.


ಈ ಎಲ್ಲ ಕಲಾವಿದರ ಕಲಾಕೃತಿಗಳೂ ಮೇ 23ರಿಂದ 27ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7ರ ವರೆಗೂ ರಿನೈಸನ್ಸ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇವೆ.
ಈ ಕಲಾಗ್ಯಾಲರಿ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT