ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ದಂಧೆಯತ್ತ ರೌಡಿಗಳು

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಲವಂತವಾಗಿ ಹಣ (ರೋಲ್‌ಕಾಲ್) ವಸೂಲಿ, ಬೀದಿ ಹೊಡೆದಾಟವನ್ನು ಬಿಟ್ಟಿರುವ ರಾಜಧಾನಿಯ ರೌಡಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿಗಳ ಮನೆ ಮೇಲೆ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಪ್ರತಿಯೊಬ್ಬ ರೌಡಿಯ ಮನೆಯಲ್ಲೂ ನಿವೇಶನ, ಜಮೀನು, ಮನೆಗಳ ದಾಖಲೆ ಪತ್ರಗಳ ಬಂಡಲ್‌ಗಳು ಸಿಕ್ಕಿವೆ. ಬೆರಳೆಣಿಕೆಯಷ್ಟು ಮಾರಕಾಸ್ತ್ರ ರೌಡಿಗಳ ಮನೆಯಲ್ಲಿ ಸಿಕ್ಕಿರುವುದು ಪೊಲೀಸರಿಗೇ ಆಶ್ಚರ್ಯ ಉಂಟು ಮಾಡಿದೆ.

ನಗರದಲ್ಲಿ ಒಟ್ಟು 7 ಪೊಲೀಸ್ ವಿಭಾಗಗಳಿವೆ. ರೌಡಿ ಚಟುವಟಿಕೆ ಮೇಲೆ ನಿಗಾ ಇಡಲು ಮತ್ತು ಭಯ ಮೂಡಿಸುವ ಸಲುವಾಗಿ ಅವರ ಮನೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಯಿತು. ವಿಭಾಗವಾರು ಒಟ್ಟು 2 ಬಾರಿ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ.

ರೌಡಿಗಳು ಅಪರಾಧ ಚಟುವಟಿಕೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ದಾಳಿಯ ಇನ್ನೊಂದು ಉದ್ದೇಶವಾಗಿತ್ತು. ಮನೆಯಲ್ಲಿ ಮಚ್ಚು, ಲಾಂಗ್, ಡ್ರಾಗರ್, ಚಾಕು, ಚೂರಿ, ಪಿಸ್ತೂಲ್, ರಿವಾಲ್ವರ್ ಮುಂತಾದ ಮಾರಕಾಸ್ತ್ರಗಳು ಸಿಗುತ್ತವೆ ಎಂಬುದು ಪೊಲೀಸರ ನಿರೀಕ್ಷೆಯಾಗಿತ್ತು. ಆದರೆ ಆಗಿದ್ದೇ ಬೇರೆ. ಕೆಲವರನ್ನು ಬಿಟ್ಟರೆ ಯಾವೊಬ್ಬ ರೌಡಿಯೂ ಮನೆಯಲ್ಲಿ ಒಂದೇ ಒಂದೂ ಮಾರಕಾಸ್ತ್ರ ಇರಲಿಲ್ಲ. ಬದಲಿಗೆ ಪ್ರತಿ ಮನೆಯಲ್ಲೂ ಮಣಗಟ್ಟಲೆ ದಾಖಲೆ ಪತ್ರಗಳು ಸಿಕ್ಕಿದ್ದವು.

`ನಗರದಲ್ಲಿರುವ ಬಹುತೇಕ ರೌಡಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಬೀದಿಯಲ್ಲಿ ಹೊಡೆದಾಡುವುದು, ಹಣಕ್ಕಾಗಿ ಪೀಡಿಸುವುದು ಇಂತಹ ಕೆಲಸವನ್ನು ಅವರು ಬಿಟ್ಟಿದ್ದಾರೆ. ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರವನ್ನು ಕುದುರಿಸಿ ಒಮ್ಮೆಲೆ ಹೆಚ್ಚು ಹಣ ಗಳಿಸುವುದು ಅವರ ಉದ್ದೇಶ ಇರಬಹುದು~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ. ದಯಾನಂದ `ಪ್ರಜಾವಾಣಿ~ಗೆ ತಿಳಿಸಿದರು.

`ವಶಪಡಿಸಿಕೊಂಡ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಕೆಲವು ದಾಖಲೆಗಳನ್ನು ರೌಡಿಗಳು ಆಸ್ತಿ ಮಾಲೀಕನಿಂದ ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇನ್ನೂ ಕೆಲವು ಆಸ್ತಿ ಮಾಲೀಕರು ವಿವಾದ ಬಗೆಹರಿಸುವಂತೆ ಅಥವಾ ವ್ಯವಹಾರ ಕುದುರಿಸುವಂತೆ ಸ್ವತಃ ರೌಡಿಗಳಿಗೆ ನೀಡಿದ್ದಾರೆ. ಆಸ್ತಿ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದಾಗ ಅವರೇ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ರೌಡಿಯೊಬ್ಬ ಬಲವಂತವಾಗಿ  ವಶಪಡಿಸಿಕೊಂಡ ಆಸ್ತಿ ಪತ್ರವನ್ನು ಅದರ ಮಾಲೀಕರಿಗೆ ಹಿಂತಿರುಗಿಸಲಾಗುತ್ತಿದೆ. ಹೀಗೆ ದಾಖಲೆ ಕಿತ್ತುಕೊಂಡ ರೌಡಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ರೌಡಿಗಳನ್ನು ಬಳಸಿಕೊಂಡು ವ್ಯವಹಾರ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ~ ಎಂದು ಅವರು ಮಾಹಿತಿ ನೀಡಿದರು.

ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಮಚ್ಚು, ಲಾಂಗು, ಮಾರಕಾಸ್ತ್ರ ಸಿಗುವುದು ಸಾಮಾನ್ಯ. ಆದರೆ ಎರಡು ಬಾರಿ ದಾಳಿ ನಡೆಸಿದಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಕಾಸ್ತ್ರ ಸಿಕ್ಕಿಲ್ಲ. ಪೊಲೀಸರು ದಾಳಿ ನಡೆಸಿದಾಗ ಮಾರಕಾಸ್ತ್ರಗಳು ಸಿಕ್ಕರೆ ಪ್ರಕರಣ ದಾಖಲಿಸುತ್ತಾರೆ ಎಂಬ ಭಯದಿಂದ ಅವರು ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳುತ್ತಿಲ್ಲ. ಅಗತ್ಯ ಸಂದರ್ಭಗಳಲ್ಲಿ ಮಾರಕಾಸ್ತ್ರ ಖರೀದಿಸುವ ಅವರು ಅದರ ಕೆಲಸ ಮುಗಿದೊಡನೆ ಎಸೆದುಬಿಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ವಿಸ್ತೃತ ತನಿಖೆ ನಡೆಸಲಾಗುತ್ತದೆ ಎಂದು ದಯಾನಂದ ಹೇಳಿದರು.

ನಗರದಲ್ಲಿ ಒಟ್ಟು 2221 ಮಂದಿ ರೌಡಿಗಳಿದ್ದರು. ಈಗ 1422 ಮಂದಿ ರೌಡಿಗಳಿದ್ದಾರೆ. ಇವರಲ್ಲಿ 465 ಮಂದಿ ಕಣ್ಮರೆಯಾಗಿದ್ದರೆ, 314 ಮಂದಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಲ್ಲಿದ್ದಾರೆ. ಪೊಲೀಸರು ಆಗಾಗ್ಗೆ ರೌಡಿ ಪೆರೇಡ್‌ಗಳನ್ನೂ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT