ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಕನ್ನಡಿಗ!

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಿಯಾಲಿಟಿ ಶೋಗಳ ಸರದಾರ ಎಂದು ಖ್ಯಾತಿ ಪಡೆದಿರುವ ಅಕುಲ್ ಬಾಲಾಜಿ ಯಾರಿಗೆ ಗೊತ್ತಿಲ್ಲ ಹೇಳಿ? ಕಿರುತೆರೆಯಲ್ಲಿ ರಿಯಾಲಿಟಿ ಶೋ ಎಂದರೆ ನೆನಪಾಗುವ ಮೊದಲ ಹೆಸರು ಅಕುಲ್. ಚಿಕ್ಕಂದಿನಿಂದ ಬೆಳ್ಳಿಪರದೆ ಮೇಲೆ ಅನೇಕ ನಾಯಕ ನಟರ ಅಭಿನಯವನ್ನು ನೋಡುತ್ತಲೇ ಬೆಳೆದ ಇವರು, ಮುಂದೊಂದು ದಿನ ಇದೇ ಬೆಳ್ಳಿಪರದೆ ಮೇಲೆ ತಾನೂ ಕಾಣಿಸಿಕೊಳ್ಳುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ.

ಮೂಲತಃ ಆಂಧ್ರಪ್ರದೇಶದ ಕಡಪ ಬಳಿ ಇರುವ ರೈಲ್ವೆ ಕೋಡೂರಿನಲ್ಲಿ ಜನಿಸಿದ ಅಕುಲ್ ಅವರ ಮಾತೃಭಾಷೆ ತೆಲುಗು. ಲಕ್ಷ್ಮೀ ಪ್ಯಾರಡೈಸ್ ಚಿತ್ರಮಂದಿರದ ಮಾಲೀಕರ ಮಗನಾಗಿದ್ದ ಅಕುಲ್, ಬುದ್ಧಿ ಬಂದಾಗಿನಿಂದ ಶಾಲೆಗಿಂತ ಹೆಚ್ಚು ಚಿತ್ರಮಂದಿರದಲ್ಲೇ ಕಾಲ ಕಳೆಯುತ್ತಿದ್ದರು. ಕಾರಣಾಂತರದಿಂದ ಕೆಲವೇ ತಿಂಗಳುಗಳ ವಾಸಕ್ಕೆಂದು ಬೆಂಗಳೂರಿಗೆ ಬಂದ ಅಕುಲ್ ಹಾಗೂ ಅವರ ಕುಟುಂಬ ಇಲ್ಲೇ ಶಾಶ್ವತವಾಗಿ ನೆಲೆ ನಿಲ್ಲುವಂತಾಯಿತು. ಹೀಗೆ ನೆಲೆನಿಂತ ಮೇಲೆ ಇಲ್ಲಿನ ಭಾಷೆ, ರೀತಿ, ನೀತಿ ಹಾಗೂ ಜೀವನ ಶೈಲಿಯನ್ನು ಕಲಿತು, ಇಲ್ಲೇ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡರು ಅಕುಲ್.

ಇತ್ತೀಚೆಗೆ ರಾಜಸ್ತಾನದ ಜೈಸಲ್ಮೇರ್‌ನಲ್ಲಿ ‘ಇಂಡಿಯನ್‌’ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅಲ್ಲಿಗೆ ಭೇಟಿ ನೀಡಿದ ‘ಸಿನಿಮಾ ರಂಜನೆ’ ಪ್ರತಿನಿಧಿಯೊಂದಿಗೆ
ಅಕುಲ್‌ ಮಾತನಾಡಿದರು. ಅವರೊಂದಿಗಿನ
ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ.

ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಖುಷಿ ಕೊಡುವ ಕೆಲಸ?
ರಿಯಾಲಿಟಿ ಶೋಗಳು ನೀಡುವ ಖುಷಿ ಸಿನಿಮಾಗಳ ಯಶಸ್ಸಿನಿಂದ ಸಿಗುವುದಿಲ್ಲ. ಹೀಗಾಗಿ ನನ್ನ ಮೊದಲ ಆದ್ಯತೆ ಕಿರುತೆರೆಗೆ. ಹಾಗೆಂದು ಸಿನಿಮಾ ರಂಗವನ್ನು ಬಿಡಲಾಗದು.

ನಾಯಕ ನಟನಾಗುವ ಆಸೆ ಇಲ್ಲವೆ?
ನಾನು ನಾಯಕ ನಟನಾಗುವ ಮೊದಲು ಒಬ್ಬ ಕಲಾವಿದ. ಪ್ರೇಕ್ಷರನ್ನು ರಂಜಿಸುವುದು ನನ್ನ ಮೊದಲ ಕೆಲಸ. ಒಳ್ಳೆಯ ಪಾತ್ರ ಸಿಕ್ಕರೆ ಅದು ಸಣ್ಣಪಾತ್ರವಾದರೂ ನಿರ್ವಹಿಸುತ್ತೇನೆ. ಆದರೆ ಸದ್ಯಕ್ಕೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿರುವ ಕಾರಣ ಸಿನಿಮಾ ಕತೆ ಕೇಳಲು ಸಮಯ ಇಲ್ಲ. 

ನಟನಾಗುವ ಆಸೆ ಚಿಗುರಿದ್ದು?
ಬೆಂಗಳೂರಿಗೆ ಬಂದ ನಂತರ. ಅದಕ್ಕಾಗಿ ಭರತನಾಟ್ಯ ಹಾಗೂ ಕಥಕ್ ಕಲಿತೆ. ನಂತರ ಸ್ನೇಹಿತ ಪವನ್ ಜೊತೆಗೆ ಇಂಗ್ಲಿಷ್ ನಾಟಕಗಳನ್ನು ಮಾಡಿದೆ. ಇದರೊಂದಿಗೆ ಮಲ್ಟಿಮೀಡಿಯಾ ಕೋರ್ಸ್ ಮಾಡಿ, ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದೆ. ನಂತರ ಕಿರುತೆರೆಯಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸಲು ಪ್ರಾರಂಭಿಸಿದೆ. ಆಗ ಸಿಕ್ಕ ಅವಕಾಶವೇ ‘ಆಘಾತ’ ಧಾರಾವಾಹಿಯಲ್ಲಿನ
ಮೊದಲ ಪಾತ್ರ.

ಕನ್ನಡ ಕಲಿಯಲು ಕಾರಣ?
ಕನ್ನಡ ಸರಿಯಾಗಿ ಬರುತ್ತಿರಲಿಲ್ಲ ಎಂದು ಎಷ್ಟೋ ಅವಕಾಶ ಕಳೆದುಕೊಂಡಿದ್ದರೂ ಭಾಷೆಯನ್ನು ಕಲಿಯುವ ಪ್ರಯತ್ನ ಬಿಡಲಿಲ್ಲ. ‘ಆಘಾತ’ಕ್ಕಾಗಿ ಹತ್ತು ದಿನಗಳಲ್ಲಿ ಕನ್ನಡವನ್ನು ಕಲಿತೆ. ಅಲ್ಲಿಂದ ನನ್ನ ಪಯಣ ಪ್ರಾರಂಭವಾಯಿತು. ಇದಾದ ನಂತರ ಜಗಳಗಂಟಿಯರು, ಗುಪ್ತ ಗಾಮಿನಿ ಹಾಗೂ ಯಾವ ಜನ್ಮದ ಮೈತ್ರಿ ಧಾರಾವಾಹಿಗಳಲ್ಲಿ ಅವಕಾಶ ಲಭಿಸಿತು.

ಕನ್ನಡ ಕಲಿಯಲು ಕಷ್ಟವೇ?
ಕಷ್ಟ ಇಲ್ಲ. ಆದರೆ ಕಲಿಯುವಾಗ ಬಹಳಷ್ಟು ಮುಜುಗರಕ್ಕೆ ಒಳಗಾಗಿದ್ದೇನೆ. ಚಿತ್ರೀಕರಣದ ವೇಳೆ ನನ್ನ ಕನ್ನಡವನ್ನು ಕೇಳುತ್ತಿದ್ದವರು ಹಾಸ್ಯ ಮಾಡುತ್ತಿದ್ದರು. ಬೇಸರವಾದರೂ ಇಷ್ಟಪಟ್ಟು ಕಲಿತೆ.

ಸ್ಯಾಂಡಲ್‌ವುಡ್‌ಗೆ ಪ್ರವೇಶ ಹೇಗೆ?
ಥ್ರಿಲ್ಲರ್ ಮಂಜು ಅವರ ‘ಭಗತ್’ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ದೊರೆಯಿತು. ನಂತರ ನನ್ನ ಮಗ ಹುಟ್ಟಿದ ಎರಡನೇ ದಿನಕ್ಕೆ ‘ಬನ್ನಿ’ ಹಾಗೂ ‘ಆತ್ಮೀಯ’ ಸಿನಿಮಾಗಳಿಗೆ ಒಂದೇ ದಿನ ಸಹಿ ಮಾಡಿದೆ. ಅಲ್ಲಿಗೆ ಧಾರಾವಾಹಿಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ.

ರಿಯಾಲಿಟಿ ಶೋಗೆ ಅವಕಾಶ ಸಿಕ್ಕಿದ್ದು?
‘ಕುಣಿಯೋಣು ಬಾರಾ’ ರಿಯಾಲಿಟಿ ಶೋನಲ್ಲಿ ನಿರೂಪಕನಾಗಿ ಅವಕಾಶ ಲಭಿಸಿತು. ಇದರಲ್ಲಿ ಸಿಕ್ಕ ಯಶಸ್ಸಿನಿಂದ ಸಾಲಾಗಿ ಒಂದರ ಮೇಲೆ ಒಂದರಂತೆ ಅವಕಾಶಗಳು ಅರಸಿ ಬಂದವು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’, ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಹಾಗೂ ‘ಪ್ಯಾಟೆ ಮಂದಿ ಕಾಡಿಗೆ ಬಂದರು’. ಇದರಿಂದ ನನ್ನ ಕೆಲಸವನ್ನು ಪ್ರತಿಯೊಬ್ಬರೂ ಗುರುತಿಸಿ ಇಷ್ಟಪಡಲು ಪ್ರಾರಂಭಿಸಿದರು. 

ತೆಲುಗು ಸಿನಿಮಾದಲ್ಲಿ ಅವಕಾಶ ಸಿಕ್ಕರೆ?
ಇಷ್ಟಪಟ್ಟು ಮಾಡುತ್ತೇನೆ. ಈಗಾಗಲೇ ‘ನೇರಮು ಶಿಕ್ಷಾ’ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ಜೊತೆಗೆ ‘ಪೆಳ್ಳಿನಾಟಿ ಪ್ರಮಾಣಾಲು’ ಎಂಬ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದೇನೆ. ಕಲಾವಿದನಿಗೆ ಭಾಷೆಯ ಬೇಲಿ ಇರಬಾರದು.

ಮುಂದಿನ ಯೋಜನೆಗಳು?
ಕನ್ನಡದಲ್ಲಿ ‘ಗಗನಚುಕ್ಕಿ’ ಚಿತ್ರ ಬಿಡುಗಡೆಗೆ ತಯಾರಾಗಿದೆ. ‘ಶುಭಮಂಗಳ’ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ.
ಕನ್ನಡದಲ್ಲಿ ‘ಮಗಧೀರ’ ಹಾಗೂ ತೆಲುಗಿನಲ್ಲಿ ‘ರಣಧೀರ’
ಎಂಬ ಚಿತ್ರಗಳಿಗೆ ಸಹಿ ಹಾಕಿದ್ದೇನೆ.

ಬಿಡುವಿನ ವೇಳೆಯಲ್ಲಿ ಏನು ಮಾಡುವಿರಿ?
ಸಿನಿಮಾ ನೋಡುತ್ತೇನೆ. ಚಿಕ್ಕಂದಿನಿಂದ ಶಾಲೆಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ಅಂದರೆ ಬಹಳ ಇಷ್ಟ. ಈ ವಿಷಯ ತಂದೆಗೂ ತಿಳಿದಿತ್ತು. ಅಮ್ಮನ ಕೈಗೆ ಸಿಕ್ಕಿ ಬಿದ್ದಾಗಲೆಲ್ಲಾ ಅಪ್ಪನೇ ನನ್ನನ್ನು ಉಳಿಸುತ್ತಿದ್ದರು.
 
ಕೆಲಸದ ಒತ್ತಡದಲ್ಲಿ ಕುಟುಂಬವನ್ನು ಮಿಸ್‌ ಮಾಡಿಕೊಳ್ಳುವುದಿಲ್ಲವಾ?
ರಿಯಾಲಿಟಿ ಶೋಗಳ ಚಿತ್ರೀಕರಣದಿಂದಾಗಿ ಮನೆಯಿಂದ ತುಂಬಾ ಸಮಯ ದೂರ ಉಳಿಯುತ್ತೇನೆ. ಇದರಿಂದ ಮೂರು ವರ್ಷದ ಮಗ ಕೃಷಾನ್ ನನ್ನನ್ನು ಎಲ್ಲಿ ಮರೆತು ಬಿಡುತ್ತಾನೋ ಎಂದು ಭಯವಾಗುತ್ತದೆ. ಆದರೂ ಟೀವಿಯಲ್ಲಿ ನಿತ್ಯ ನನ್ನನ್ನು ನೋಡುತ್ತಾ ಮನೆಗೆ ಬಂದಾಗ ನನ್ನನ್ನು ಅಪ್ಪಿಕೊಳ್ಳುತ್ತಾನೆ. ಅದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿರುತ್ತದೆ.

ಈ ವೃತ್ತಿಗೆ ಬರದಿದ್ದರೆ?
ಬೆಂಗಳೂರಿಗೆ ಬರದೆ ಕಡಪದಲ್ಲೇ ಇದ್ದಿದ್ದರೆ, ನನ್ನ ತಂದೆ ನಡೆಸುತ್ತಿದ್ದ ಚಿತ್ರಮಂದಿರ ಹಾಗೂ ಸೀರೆ ಉದ್ಯಮವನ್ನು ನೋಡಿಕೊಂಡಿರುತ್ತಿದ್ದೆ. ಇಲ್ಲವಾದರೆ ಸುತ್ತಲಿನ ವಾತಾವರಣದಿಂದ ದೊಡ್ಡ ರೌಡಿ ಆಗಿರುತ್ತಿದ್ದೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT