ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯಿತಿ ಪಾಸ್‌ನಿಂದ ನಷ್ಟ

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಪಾದನೆ
Last Updated 12 ಸೆಪ್ಟೆಂಬರ್ 2013, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಾಸ್ತವದಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿ ಇರುವುದಿಲ್ಲ. ಆದರೆ, ವಿವಿಧ ರೀತಿಯ ರಿಯಾಯಿತಿ ದರದ ಬಸ್‌ಪಾಸ್‌ ಸೌಲಭ್ಯದಂತಹ ಜನ­ಪ್ರಿಯ ಕಾರ್ಯಕ್ರಮಗಳಿಗೆ ಸಂಸ್ಥೆ ಕೋಟ್ಯಂತರ ರೂಪಾಯಿ ಖರ್ಚು ಮಾಡು­­ವುದರಿಂದ ನಷ್ಟ ಕಂಡು ಬರು­ತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.

ನಗರ ಬಂಡಿವಾಡ ಅಗಸಿಯಲ್ಲಿ ಬುಧ­ವಾರ ನಗರ ಸಾರಿಗೆ ಬಸ್‌ ನಿಲ್ದಾಣದ (ಸಿಬಿಟಿ) ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಬಸ್‌ಪಾಸ್‌ಗಳನ್ನು ನೀಡಲಾಗುತ್ತದೆ. ಇದರಿಂದ ಇಲಾಖೆಗೆ ವಾರ್ಷಿಕ ಅಂದಾಜು `700 ಕೋಟಿ ಹೊರೆ ಬೀಳುತ್ತದೆ. ಒಂದು ವೇಳೆ ಈ ಹೊರೆ ಇರದಿದ್ದರೆ ಎಲ್ಲ ಸಾರಿಗೆ ಸಂಸ್ಥೆಗಳು ಲಾಭದಲ್ಲಿಯೇ ಕಾರ್ಯನಿರ್ವ­ಹಿಸು­ತ್ತವೆ’ ಎಂದು ಹೇಳಿದರು.

‘ಈ ವರ್ಷ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 750 ಹೊಸ ಬಸ್‌ಗಳನ್ನು ಒದಗಿಸಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಬೆಂಗ­ಳೂರಿ­ನಲ್ಲಿ ಬಳಕೆ ಮಾಡಿ, ಹಳೆಯದಾಗಿ­ರುವ ಬಸ್‌ಗಳನ್ನು ಒದಗಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 543 ತಾಂತ್ರಿಕ ಹುದ್ದೆ ಸೇರಿದಂತೆ ಒಟ್ಟು 782 ಹುದ್ದೆಗಳು ಖಾಲಿ ಇವೆ. ಇದೇ ವರ್ಷದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದೂ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ‘ನಷ್ಟದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆಗೆ `50 ಕೋಟಿ ವಿಶೇಷ ಅನುದಾನ ನೀಡಲು ನಾನು ಮುಖ್ಯ­ಮಂತ್ರಿಯಾಗಿದ್ದಾಗ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈಗಿರುವ ಸರ್ಕಾರ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಿಯಾಯಿತಿ ಬಸ್‌ಪಾಸ್‌ಗಳನ್ನು ವಿತರಣೆ ಮಾಡಿರುವುದಕ್ಕೆ ಸಂಬಂಧಿಸಿ­ದಂತೆ ವಾಯವ್ಯ ಸಾರಿಗೆಗೆ ಅಂದಾಜು `150 ಕೋಟಿ ಮರುಪಾವತಿ­ಯಾಗ­ಬೇಕಿದೆ. ಹಣಕಾಸು ಇಲಾಖೆ ಮೇಲೆ ಒತ್ತಡ ಹೇರಿ ಈ ಹಣವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಮನ್ವಯದ ಕೊರತೆಯಿಂದಾಗಿ ಬಿಆರ್‌ಟಿಎಸ್‌ ಯೋಜನೆ ಸಮರ್ಪಕ­ವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಮನವಿ ಮಾಡಿದರು.

‘ಸಿಬಿಟಿ ನೂತನ ಕಟ್ಟಡಕ್ಕೆ ಇದು ಎರಡನೇ ಬಾರಿ ಶಂಕುಸ್ಥಾಪನೆ ನೆರವೇರಿ­ಸಲಾಗುತ್ತಿದೆ. ಪರಿಷ್ಕೃತ ಯೋಜನೆ ಎನ್ನಲಾಗುತ್ತಿದೆ. ಹೀಗಾಗಿ ಕಾಮಗಾರಿ ಶೀಘ್ರವೇ ಪ್ರಾರಂಭಗೊಂಡು ಕಾಲಮಿತಿ­ಯಲ್ಲಿ ಪೂರ್ಣಗೊಳ್ಳಬೇಕು’ ಎಂದೂ ಹೇಳಿದರು.
‘ಬಿಆರ್‌ಟಿಎಸ್‌ ಕುರಿತಂತೆ ಚರ್ಚಿ­ಸಲು ವಿಶೇಷ ಸಭೆಯನ್ನು ಕರೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಮನವಿ ಮಾಡಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಎಚ್‌.ಎಚ್‌.ಕೋನರಡ್ಡಿ ಮಾತನಾಡಿ­ದರು. ಹುಬ್ಬಳ್ಳಿ–ಧಾರವಾಡ ಮಹಾ­ನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇ­ಶಕಿ ಖುಷ್ಬು ಗೋಯಲ್‌ ಚೌಧರಿ, ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಮತ್ತಿತರರು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT