ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೀವ್‌ರ ಕನ್ನಡ- ಇಂಗ್ಲಿಷ್ ನಿಘಂಟು

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಲಿಯಂ ರೀವ್ ಅವರ A Dictionary, Carnataka And English ಎಂಬ `ಕನ್ನಡ-ಇಂಗ್ಲಿಷ್ ನಿಘಂಟು~ ಜುಲೈ 14, 1832ರಲ್ಲಿ ಮದರಾಸಿನ ದಿ ಗವರ‌್ನಮೆಂಟ್ ಗೆಜೆಟ್ ಪ್ರೆಸ್‌ನಲ್ಲಿ ಮೊದಲ ಬಾರಿಗೆ ಮುದ್ರಣಗೊಂಡಿದೆ.
 
ಈ ಕೃತಿಯನ್ನು Respectfully Inscribed, By their most obedient and most humble Servent ಆದ ವಿಲಿಯಂ ರೀವ್ `ಅವರು ಅಂದಿನ ಮದ್ರಾಸ್ ಗವರ್ನರ್ ಆಗಿದ್ದ Right Honourable S.R.Lushington ಅವರಿಗೆ, ಯುನೈಟೆಡ್ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕ ಮಂಡಳಿಗೆ ಹಾಗೂ ತಮ್ಮ ಸಹೋದ್ಯೋಗಿಗಳು ಮತ್ತು ಕೆಲಸಗಾರರಿಗೆ `ಅರ್ಪಣೆ~ ಮಾಡಿರುತ್ತಾರೆ.

ಇದೇ ವಿಲಿಯಂ ರೀವ್ ಅವರ A Dictionary, ENGLISH AND CARNATACA ಎಂಬ ಇಂಗ್ಲಿಷ್-ಕನ್ನಡ ನಿಘಂಟು 1824ರಲ್ಲಿ ಮದರಾಸಿನಲ್ಲಿನ ಈಸ್ಟ್ ಇಂಡಿಯ ಕಂಪನಿಯ ಫೋರ್ಟ್ ಸೆಂಟ್ ಜಾರ್ಜ್‌ನ ಕಾಲೇಜ್ ಪ್ರೆಸ್ಸಿನಲ್ಲಿ ಮುದ್ರಣವಾಯಿತು ಎಂದು ಶ್ರೀನಿವಾಸ ಹಾವನೂರರು ಹೇಳಿದರೆ,
 
(`ಹೊಸಗನ್ನಡದ ಅರುಣೋದಯ~), ಈ ಕೋಶವು ಪ್ರಪ್ರಥಮವಾಗಿ ನಿಘಂಟು ವಿಜ್ಞಾನದ ವಿಧಾನಶಾಸ್ತ್ರವನ್ನು ಅಳವಡಿಸಿ ರಚಿಸಲಾಗಿರುವ ಕನ್ನಡದ ಮೊದಲ ನಿಘಂಟು ಎಂದು ಐ.ಮಾ.ಮುತ್ತಣ್ಣನವರು (`19ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ~, 1992) ಅಭಿಪ್ರಾಯಪಡುತ್ತಾರೆ.

1466 ಫೋಲಿಯೋ (folio)  ಪುಟಗಳ ಈ ನಿಘಂಟು ಎರಡು ಸಂಪುಟಗಳಲ್ಲಿದೆ. ರೆವರೆಂಡ್ ಎಫ್.ಕಿಟ್ಟೆಲ್ ಅವರು ಆಧುನಿಕ ಕನ್ನಡ ನಿಘಂಟುಕಾರರ ಮುಕುಟಮಣಿಯಾದರೆ, ವಿಲಿಯಂ ರೀವ್ ಅವರು ಆಧುನಿಕ ಕನ್ನಡ ನಿಘಂಟುಗಳ ಜನಕ. ಈ ಅಂಶವನ್ನು ಮುಂದಿನ ನಿದರ್ಶನಗಳಿಂದ ಪುಷ್ಟೀಕರಿಸಬಹುದು:

1844ರಲ್ಲಿ ಜಾನ್ ಗ್ಯಾರೆಟ್ ರಚಿಸಿದ English and canarese vocabulary of familiar words with easy sentences, 1858ರಲ್ಲಿ ಬಂದ ಡೇನಿಯಲ್ ಸ್ಯಾಂಡರ‌್ಸನ್‌ನ A Dictionary, Canarese and English,1861ರಲ್ಲಿ ಎತಿಯೇನ್ ಲೂಯಿ ಶಾರ್ಬೊನೊ ಅವರು ಸಿದ್ಧಪಡಿಸಿದ ಲ್ಯಾಟಿನ್ ಕನ್ನಡ ಕೋಶವಾದ DICTIONARY LATINO CANARESE(ಲತೀನ್ ಕನ್ನಡ ನಿಘಂಟು),

1867ರಲ್ಲಿ ದೇಶೀಯ ಪಂಡಿತರಾದ ಎಸ್. ರಾಮಸ್ವಾಮಿಯವರು ಸಿದ್ಧಪಡಿಸಿ ಪ್ರಕಟಿಸಿದGrammatical Vocabulary in English and Canarese, Classified under the various parts of speech, 1876ರಲ್ಲಿ ಎಫ್.ಜೀಗ್ಲರ್ ಪ್ರಕಟಿಸಿದ English-Kannada dictionary, 

1894ರಲ್ಲಿ F.Kittel, 1899ರಲ್ಲಿ ರೆವರೆಂಡ್ ಜೆ.ಬೂಕರ್ ರಚಿಸಿದ Kannada-English Dictionary ಹಾಗೂ 1899ರಲ್ಲಿ ಕ್ರಿಸ್ತಾನುಜ ವಾತ್ಸ ರಚಿಸಿದ The English-Kannada Pocket Dictionary  ಈ ಮುಂತಾದ ಆಧುನಿಕ ನಿಘಂಟುಗಳಿಗೆ ರೀವ್ ಅವರ ನಿಘಂಟೇ ಮೂಲ ಆಕರವಾಗಿದೆ ಮತ್ತು ಅವರೆಲ್ಲರೂ ಅದನ್ನು ಸ್ಮರಿಸಿದ್ದಾರೆ.

ಆಶ್ಚರ್ಯವೆಂದರೆ, 1869ರಲ್ಲಿ ಪ್ರಕಟಗೊಂಡ ಗಂಗಾಧರ ಮಡಿವಾಳೇಶ್ವರ ತುರಮರಿಯವರ `ಶಬ್ದಮಂಜರಿ~ ಯಾವುದೇ ರೀತಿಯಿಂದಲೂ ರೀವ್ ಅವರ ನಿಘಂಟಿನಿಂದ ಪ್ರಭಾವಗೊಳ್ಳದೇ ಇದ್ದದ್ದು. ಬಹುಶಃ ಇದಕ್ಕೆ `ಶಬ್ದಮಂಜರಿ~ ಕೋಶವು ಏಕಭಾಷಿಕವಾದದ್ದು (ಕನ್ನಡ-ಕನ್ನಡ) ಇರಬಹುದು.

ಈ ನಿಘಂಟಿನ ಮುದ್ರಣವನ್ನು ಕುರಿತು ಕೆಲವು ಅಂಶಗಳನ್ನು ಗಮನಿಸಬಹುದು. ದಾಮೋದರ ಬಾಳಿಗರು ತಮ್ಮ ಲೇಖನವೊಂದರಲ್ಲಿ (ತೆಂಕನಾಡು 1947)- `ಈಸ್ಟ್ ಇಂಡಿಯ ಕಂಪನಿ ತನ್ನ ಅಧಿಕಾರವನ್ನು ಉಪಯೋಗಿಸಿ ರೋಮನ್ ಲಿಪಿಯನ್ನು ದೇಶ ಭಾಷೆಗಳಿಗೆಲ್ಲ ರೂಢಿಯಲ್ಲಿ ತರಬೇಕೆಂಬವರೂ ಇದ್ದರು.

ಆದರೆ ಆಗಿನ ಕಂಪನಿ ಸರಕಾರವು ಅಷ್ಟು ಉದ್ದಕ್ಕೆ ಹೋಗಲಿಲ್ಲ, ತಮ್ಮ ಆಡಳಿತ ಸೌಕರ್ಯಕ್ಕಾಗಿ ಅವರು ಕನ್ನಡ, ತೆಲುಗು, ತಮಿಳು ಕೋಶಗಳನ್ನು ತಜ್ಞರಾದ ಮಿಶೆನರಿಗಳಿಗೆ ಯೋಗ್ಯ ಧನಸಹಾಯ ಕೊಟ್ಟು ಸಂಗ್ರಹಿಸಿ ಅಚ್ಚು ಹಾಕಿಸಿದ್ದಾರೆ.

1824ರಲ್ಲಿ ಮದ್ರಾಸಿನ `ಕೊಲೆಜ್ ಪ್ರೆಸ್~ `ಕಂಪನಿ ಸರಕಾರದ ಅಚ್ಚುಕೂಟ~ದಲ್ಲಿ ರೆವರೆಂಡ ಡಬ್ಲ್ಯೂ.ರೀವ್ ಇವರಿಂದ ನಿರ್ಮಿಸಲ್ಪಟ್ಟ ಇಂಗ್ಲಿಷ್ ಮತ್ತು ಕನ್ನಡ ಡಿಕ್ಶೆನೆರಿಯು ಮುದ್ರಿತವಾಯಿತು.
 
ಇದರಲ್ಲಿ ಡೆಮ್ಮಿ 1/4 ಆಕಾರದ 1204 ಪುಟಗಳಿವೆ. ಅದರಲ್ಲಿರುವ ಕನ್ನಡ ಅಕ್ಷರಗಳನ್ನು ಪರಿಶೀಲಿಸಿ. ಪ್ರಾಯಶಃ ತೆಲುಗು ಕನ್ನಡಗಳಿಗೆ ಒಂದೇ ಬಗೆಯ ಅಚ್ಚು ಮೊಳೆಗಳನ್ನು ಕೊಲಜ್ ಪ್ರೆಸ್ಸಿನವರು ಕೆತ್ತಿಸಿ ಉಪಯೋಗಿಸುತ್ತಿದ್ದಿರಬೇಕು. ಇದೇ ಪ್ರೆಸ್ಸಿನಲ್ಲಿ 1832ರಲ್ಲಿ ರೀವ್‌ರ ಕರ್ನಾಟಕ ಮತ್ತು ಇಂಗ್ಲಿಷ್ ಕೋಶವು ಮುದ್ರಿತವಾಯಿತು.

ಚಿಕ್ಕ ಅಕ್ಷರಗಳ ಮೊಳೆಗಳು ನಿರ್ಮಿತವಾಗದ ಕಾರಣ ಈ ಕೋಶವು ಎರಡು ಭಯಂಕರ ದೊಡ್ಡ ಭಾಗಗಳಾಗಿ ಪ್ರಕಟವಾಯಿತು~ ಎಂದು ಈ ಕೃತಿಯ ಮುದ್ರಣ ಹಾಗೂ ಅಕ್ಷರದ ಮೊಳೆಗಳ ಬಗ್ಗೆ ಅಪೂರ್ವ ಮಾಹಿತಿ ನೀಡಿರುತ್ತಾರೆ. ಆದರೆ ಇಲ್ಲಿ ಈ ನಿಘಂಟು ಕೊಲೆಜ್ ಪ್ರೆಸ್ಸಿನಲ್ಲಿ ಮುದ್ರಿತವಾಗಿದೆ ಎಂಬುದು ತಪ್ಪು ಮಾಹಿತಿ. ಇದು ಮುದ್ರಣಗೊಂಡಿರುವುದು ಮದರಾಸಿನ ಪ್ರೆಸ್ಸಿನಲ್ಲಿ.

ಬಹುಭಾಷಾ ಕೋವಿದರಾದ ರೀವ್ ಅವರು ಈ ನಿಘಂಟುಗಳನ್ನಷ್ಟೇ ಅಲ್ಲದೆ ಕನ್ನಡದಲ್ಲಿ `ಮೋಸೆಯ ಮೊದಲನೇ ಕಾಂಡವು~ ಎಂಬ ಹೊತ್ತಗೆಯನ್ನೂ, ಒರಿಯಾ-ಇಂಗ್ಲಿಷ್ ನಿಘಂಟನ್ನೂ, ಕನ್ನಡ-ತಮಿಳು-ಒರಿಯಾ ಮತ್ತು ಬಂಗಾಲಿ ಭಾಷೆಗಳಲ್ಲಿ ಬೈಬಲ್ ಕೃತಿಗಳನ್ನೂ, ಯೇಸುಕ್ರಿಸ್ತನ ಅವತಾರ ಎಂಬ ಕೃತಿಯನ್ನೂ ರಚಿಸಿರುತ್ತಾರೆ.

`ಹೊಸಗನ್ನಡದ ನಸುಕಿನ ಕಾಲದಲ್ಲಿ (1810-1840) ದೇಶೀಯರಾದ ಕೃಷ್ಣಮಾಚಾರಿಯ ಜೊತೆಗೆ ಕೋಶಕಾರನಾದ ರೀವ್ಹನ ಕಾರ್ಯವಷ್ಟೆ ಎದ್ದು ಕಾಣುವಂತಿದ್ದಿತು~ ಎಂದು ಈ ಇಬ್ಬರ ಬಗ್ಗೆ ಹಾವನೂರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
1810ರಲ್ಲಿ `ಧಾತುಮಂಜರಿ~ಯನ್ನು, 1838ರಲ್ಲಿ `ಹೊಸಗನ್ನಡ ನುಡಿಗನ್ನಡಿ~ಯನ್ನು ಪ್ರಕಟಿಸಿದ ಕೃಷ್ಣಮಾಚಾರ‌್ಯರು ರೀವ್‌ಗೆ ಈ ನಿಘಂಟುರಚನೆಯಲ್ಲಿ ನೆರವು ನೀಡಿದ್ದಾರೆ. ಇದೇ ಕೃಷ್ಣಮಾಚಾರ‌್ಯರಿಗೆ ಅವರು ವ್ಯಾಕರಣ ಬರೆಯುವಾಗ ವಿಲಿಯಂ ರೀವ್ ಮತ್ತು ಜಾನ್ ಮೆಕೆರೆಲ್ ಉತ್ತೇಜನ ಮತ್ತು ನೆರವು ನೀಡಿದ್ದರು.

ಈ ನಿಘಂಟು ರಚನೆಗೆ ರೀವ್ ಅವರು `ಚತುರಾಸ್ಯ ನಿಘಂಟು~, `ಕಬ್ಬಿಗರ ಕೈಪಿಡಿ~, `ಶಬ್ದಮಣಿದರ್ಪಣ~, `ಕರ್ನಾಟಕ ವ್ಯಾಕರಣ~, `ಶಬ್ದಮಂಜರಿ~, `ಅಮರಕೋಶ~ ಮುಂತಾದ ಪ್ರಾಚೀನ ಸಂಸ್ಕೃತ ಹಾಗೂ ಕನ್ನಡ ಕೃತಿಗಳನ್ನು ಬಳಸಿಕೊಂಡಿದ್ದೇನೆಂದು ಸ್ಮರಿಸಿಕೊಳ್ಳುತ್ತಾರೆ. ಆಗಿನ ಕಾಲಕ್ಕೆ ಮದ್ರಾಸು ಸರಕಾರವು ಈ ನಿಘಂಟಿನ ಪ್ರತಿಯೊಂದಕ್ಕೆ 12 ರೂಪಾಯಿ ಬೆಲೆ ನಿಗದಿಪಡಿಸಿತ್ತು.

ಗುಣ ಮತ್ತು ಗಾತ್ರಗಳೆರಡರಲ್ಲಿಯೂ ಮಹತ್ವ ಹೊಂದಿರುವ ಈ ನಿಘಂಟು ಕನ್ನಡ ಪುಸ್ತಕಲೋಕದಲ್ಲಿ ಒಂದು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಕನ್ನಡ ನಿಘಂಟು ಕ್ಷೇತ್ರಕ್ಕೆ ಒಂದು ಅಪಾರವಾದ ಕೊಡುಗೆಯಾಗಿದೆ ಎನ್ನಲು ಅಡ್ಡಿಯೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT