ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿ ಹದ್ದುಬಸ್ತಿಗೆ ಶವ ಇಟ್ಟು ಪ್ರತಿಭಟನೆ

Last Updated 5 ಜನವರಿ 2012, 9:45 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಗ್ರಾಮಸ್ಥರು ಬುಧವಾರ ತಾಲ್ಲೂಕಿನ ಭಾಸ್ಕರ್‌ರಾವ್ ಕ್ಯಾಂಪ್‌ನಲ್ಲಿ ಒತ್ತುವರಿಯಾದ ರುದ್ರಭೂಮಿಯನ್ನು ಹದ್ದುಬಸ್ತು ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.

ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ ಮಾತನಾಡಿ, ಒಂದು ದಶಕದಿಂದ ಭಾಸ್ಕರ್‌ರಾವ್ ಕ್ಯಾಂಪ್‌ನಲ್ಲಿ ರುದ್ರಭೂಮಿಯ ಸಮಸ್ಯೆ ಕಾಡುತ್ತಿದೆ. ಕ್ಯಾಂಪ್‌ನಲ್ಲಿರುವ 18 ಎಕರೆ ಗೋಮಾಳದಲ್ಲಿ 4 ಎಕರೆ ಜಮೀನನ್ನು ರುದ್ರಭೂಮಿಗೆ ಕಾದಿಟ್ಟು ಉಳಿದ 14 ಎಕರೆ ಜಮೀನನ್ನು ರೀಗ್ರಾಂಟ್‌ನಲ್ಲಿ ಸ್ಥಳೀಯ ಉಳಿಮೆದಾರರಿಗೆ ಹಂಚಿಕೆ ಮಾಡಲಾಗಿತ್ತು.

ಹೀಗೆ ಸರ್ಕಾರದಿಂದ ಜಮೀನು ಪಡೆದ ಕೆಲವರು ರುದ್ರಭೂಮಿಯ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ರುದ್ರಭೂಮಿ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಕಳೆದ 2 ವರ್ಷಗಳಿಂದ ತಹಶೀಲ್ದಾರ್‌ಗೆ ಈ ಬಗ್ಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಂಪ್‌ನ ಎಂ.ಬಿ. ಮಂಜಪ್ಪ ಮೃತಪಟ್ಟಿದ್ದಾರೆ. ಅವರ ಶವಸಂಸ್ಕಾರ ಮಾಡಲು ಜಾಗ ಇಲ್ಲ. ಬೋವಿ ಮಂಜಪ್ಪ, ಬೋವಿ ಮೈಲಪ್ಪ, ಬೋವಿ ನಾಗಪ್ಪ, ಈರಪ್ಪ ಸಲ್ಲಹಳ್ಳಿ ಮೊದಲಾದವರು ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಗ್ರಾಮಸ್ಥರು ಪ್ರಶ್ನಿಸಿದರೆ ಗಲಾಟೆ ಮಾಡುತ್ತಾರೆ. ಅದಕ್ಕೂ ಮೀರಿ ಗ್ರಾಮದವರು ಶವಸಂಸ್ಕಾರ ಮಾಡಿದರೆ, ಅದೇ ಸ್ಥಳದಲ್ಲಿ ಪುನಃ ಉಳುಮೆ ಆರಂಭಿಸುತ್ತಾರೆ. ಅಧಿಕಾರಿಗಳ ಇಂಥ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ನಜ್ಮಾ ಮಾತನಾಡಿ, ಈ ವಿಷಯ ನನ್ನ ಗಮನಕ್ಕೆ ಬಂದು ಎಂಟು ತಿಂಗಳಾಯಿತು. ಅಂದಿನಿಂದ ಇಂದಿನವರೆಗೂ ಮೇಲಧಿಕಾರಿಗಳಿಗೆ ಸುಮಾರು ಮೂರು ಬಾರಿ ಪತ್ರ ಬರೆದಿದ್ದೇನೆ. ಸ್ಥಳದ ನಿಖರತೆ ಹಾಗೂ ಪೋಡು ಮಾಡಲು ಬೇಕಾದ ನಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳಿವೆ.
 
ಈ ಬಗ್ಗೆ ಸರ್ವೇ ಇಲಾಖೆಗೆ ಸೂಚನೆ ನೀಡಿದ್ದೇನೆ. ಈ ದಿನ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಕ್ಯಾಂಪ್ ನಾವು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ ನೀವುಗಳು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೀರಿ. ರುದ್ರಭೂಮಿ ಸಮಸ್ಯೆ ಪರಿಹಾರವಾಗಿದೆ. ಸ್ಥಳೀಯ ಗ್ರಾ.ಪಂ.ಗೆ ತಂತಿ ಬೇಲಿ ಹಾಗೂ ನಾಮಫಲಕ ಹಾಕಿಸಲು ಸೂಚನೆ ನೀಡಿದ್ದೇನೆ ಎಂದರು.

ಪ್ರತಿಭಟನಾಕಾರರೊಂದಿಗೆ ಅವರೂ ಕ್ಯಾಂಪ್‌ಗೆ ಹೋಗಿ ಶವಸಂಸ್ಕಾರ ಆಗುವವರೆಗೂ ಇದ್ದುದು ವಿಶೇಷವಾಗಿತ್ತು. ನಂತರ, ಗ್ರಾಮಸ್ಥರ ಎದುರೇ ಪಿಡಿಒ ಅವರಿಗೆ ಶೀಘ್ರದಲ್ಲಿ ತಂತಿ ಬೇಲಿ ಹಾಕಿಸಲು ಸೂಚನೆ ನೀಡಿದರು.

ಪ್ರತಿಭಟನೆಯಲ್ಲಿ ಮೆಣಸಿನಹಾಳು ರುದ್ರಗೌಡ, ಬಾವಿಮನಿ ಪುಟ್ಟವೀರಪ್ಪ, ಶ್ರೀನಿವಾಸ, ಶೇಷಯ್ಯ, ಕೃಷ್ಣಮೂರ್ತಿ, ಎಂ.ಡಿ. ಮಂಜುನಾಥ, ಗಂಗಮ್ಮ, ನೀಲಮ್ಮ, ಸಾಕಮ್ಮ, ಹನುಮಮ್ಮ, ಶಿವಕ್ಕ, ಚಂದ್ರಮ್ಮ, ಬಸಪ್ಪ, ಐರಣಿ ಹನುಮಂತಪ್ಪ, ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT