ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಾಕ್ಷಿ ಮಾಲೆ ಮಾಡುವುದೇ ಇವರಿಗೆ ಶಿವರಾತ್ರಿ...

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವರು ನಿತ್ಯ ರುದ್ರಾಕ್ಷಿಗಳನ್ನು ಪೋಣಿಸುವುದರಲ್ಲೇ ಶಿವನ ಧ್ಯಾನ ಮಾಡುತ್ತಾರೆ. ಹಾಗೆ ರುದ್ರಾಕ್ಷಿ ಮಾಲೆ ಮಾಡಿದ ಮೇಲೆ ರಥಗಳಿಗೆ ಹಾಕಿ ಕೈ ಮುಗಿದ ದಿನವೇ ಅವರಿಗೆ ಶಿವರಾತ್ರಿ. ಇದುವರೆಗೆ 117 ರಥಗಳಿಗೆ ರುದ್ರಾಕ್ಷಿ ಮಾಲೆ ಕಾಣಿಕೆಯಾಗಿ ನೀಡಿದ ಹೆಗ್ಗಳಿಕೆ ನಗರದ ಅಕ್ಕಿಹೊಂಡದ ಹಿರೇಪೇಟೆಯ ಬಸವರಾಜ ಶಿರಗುಪ್ಪಿ ಅವರದು.

73 ವರ್ಷದ ಅವರು 12 ವರ್ಷಗಳಿಂದ ರುದ್ರಾಕ್ಷಿ ಮಾಲೆಗಳನ್ನು  ತಮ್ಮ ಸಹಾಯಕರಾದ ದೇವದಾಸ ಖೈರಮೋಡೆ ಹಾಗೂ ಗುರುಸಿದ್ಧಪ್ಪ ಹುರಕಡ್ಲಿ ಅವರ ನೆರವಿನಿಂದ ಸಿದ್ಧಗೊಳಿಸುತ್ತಿದ್ದಾರೆ.

ದೇವಸ್ಥಾನದ ಟ್ರಸ್ಟಿಗಳನ್ನು ಕಂಡು ರಥಕ್ಕೆ ರುದ್ರಾಕ್ಷಿ ಮಾಲೆ ಕಾಣಿಕೆಯಾಗಿ ಕೊಡುವ ಕುರಿತು ತಿಳಿಸುತ್ತಾರೆ. ಅವರು ಒಪ್ಪಿದ ಮೇಲೆ ರಥದ ಎತ್ತರದ ಅಳತೆಯನ್ನು ಪಡೆದುಕೊಂಡು ಬಂದು ಅಷ್ಟೇ ಎತ್ತರದ ರುದ್ರಾಕ್ಷಿ ಮಾಲೆ ತಯಾರಿಸುತ್ತಾರೆ. ಹಾಗೆ ತಯಾರಿಸಿದ ನಂತರ ತಮ್ಮ ಇಬ್ಬರು ಸಹಾಯಕರೊಂದಿಗೆ ರಥೋತ್ಸವ ದಿನ ರಥಕ್ಕೆ ಹಾಕಿ ಬರುತ್ತಾರೆ.

 ಇದಕ್ಕಾಗಿ ಅವರು ದೇವಸ್ಥಾನಗಳ ಟ್ರಸ್ಟಿಗಳಿಂದ ಸಹಾಯಧನ ಪಡೆಯುವುದಿಲ್ಲ. ತಮಗೆ ಬರುವ ರೂ 4 ಸಾವಿರ ಪಿಂಚಣಿ ಜೊತೆಗೆ ತಮ್ಮ ಪುತ್ರರಾದ, ಟ್ರಾನ್ಸ್‌ಪೋರ್ಟ್ ನಡೆಸುವ ಈರಣ್ಣ, ವೈದ್ಯಾಧಿಕಾರಿಯಾಗಿರುವ ಮಲ್ಲಿಕಾರ್ಜುನ ಹಾಗೂ ಎಂಜಿನಿಯರ್ ಆಗಿರುವ ಸಿದ್ಧರಾಮ ಅವರಿಂದ ದುಡ್ಡು ಪಡೆದು ಮಾಲೆಯನ್ನು ಸಜ್ಜುಗೊಳಿಸುತ್ತಾರೆ.
 
8 ಅಡಿಯಿಂದ 26 ಅಡಿಯವರೆಗೆ ಅವರು ರುದ್ರಾಕ್ಷಿ ಮಾಲೆ ಸಿದ್ಧಪಡಿಸಿದ್ದು ದಾಖಲೆ. ಕಳೆದ ವರ್ಷ ಶಿವರಾತ್ರಿಯಂದು ಆಂಧ್ರಪ್ರದೇಶದ ಶ್ರೀಶೈಲಕ್ಕೆ ಸಲ್ಲಿಸಿದ 26 ಅಡಿ ಎತ್ತರದ ಮಾಲೆಗೆ 1,12,001 ರುದ್ರಾಕ್ಷಿಗಳನ್ನು ಬಳಸಿದ್ದಾರೆ. ಇದೇ 24ರಂದು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ತೆರಳಿ 16 ಅಡಿ ಎತ್ತರದ ರುದ್ರಾಕ್ಷಿ ಮಾಲೆಯನ್ನು ಅರ್ಪಿಸಲಿದ್ದಾರೆ.
 
ಇದಕ್ಕಾಗಿ ಅವರು ಇದೇ 20ರಂದು ನಗರದಿಂದ ರಾಚೋಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗೆ ಇದುವರೆಗೆ ರಾಜ್ಯದಾದ್ಯಂತ ಅಲ್ಲದೇ ಮಹಾರಾಷ್ಟ್ರ, ರಾಜಸ್ತಾನ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೂ ರುದ್ರಾಕ್ಷಿ ಮಾಲೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿದ್ದ ಅವರು ನಿವೃತ್ತಿಯಾದ ನಂತರ ಸುಮ್ಮನೆ ಕಾಲ ಕಳೆಯಲಿಲ್ಲ. `ಎರಡು ದಾರಿಗಳಿದ್ದವು. ಕೆಟ್ಟ ದಾರಿ. ಇನ್ನೊಂದು ಒಳ್ಳೆಯದು. ಭಕ್ತಿಯ ದಾರಿ ಒಳ್ಳೆಯದೆಂದು ರುದ್ರಾಕ್ಷಿ ಮಾಲೆ ಮಾಡುವುದನ್ನು ರೂಢಿಸಿಕೊಂಡೆ. ನಮ್ಮದು ಪುರವಂತಿಕೆ ಮನೆತನ.

ಹಾವೇರಿ ಜಿಲ್ಲೆಯ ಸವಣೂರಿನ ಕಾರಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೂವಿನ ಮಾಲೆ ಕೊಡುವ ಸಂಪ್ರದಾಯವಿತ್ತು. ಆದರೆ ಬಿಸಿಲಿಗೆ ಮಾಲೆ ಬಾಡುತ್ತಿತ್ತು. ಇದಕ್ಕಾಗಿ 100 ರುದ್ರಾಕ್ಷಿಗಳಿಂದ ಮಾಲೆ ಮಾಡಿ ಅರ್ಪಿಸಿದೆ. ಇದನ್ನು ವಿಸ್ತರಿಸಿ ರಥಗಳಿಗೆ ಕೊಡ್ತೀನ್ರಿ~ ಎಂದು ಬಸವರಾಜ ಖುಷಿಯಾಗಿ ಹೇಳಿದರು.

ಈ ವರ್ಷ ಧಾರವಾಡದ ಮುರುಘಾಮಠದ ರಥಕ್ಕೆ 15 ಅಡಿ, ಬೆಳಗಾವಿ ಜಿಲ್ಲೆಯ ಗೊಡಚಿ ರಥಕ್ಕೆ 15 ಅಡಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹತ್ತಿರದ ಯಡೂರು ಈರಣ್ಣ ರಥಕ್ಕೆ 16 ಅಡಿ, ಉತ್ತರ ಕನ್ನಡ ಜಿಲ್ಲೆಯ ಉಳವಿ ಚನ್ನಬಸವೇಶ್ವರ ರಥಕ್ಕೆ 16 ಅಡಿ ಎತ್ತರದ ಮಾಲೆಗಳನ್ನು ಅವರು ನೀಡಿದ್ದಾರೆ.

ಕೇವಲ ಮಾಲೆಯಲ್ಲ, ಭಕ್ತರಿಗೆ ರುದ್ರಾಕ್ಷಿಗಳನ್ನು ಕಾಣಿಕೆಯಾಗಿ ಕೊಡಲು 1001 ಬಿಡಿಯಾಗಿ ನೀಡುತ್ತಾರೆ. ಬರುವ ದಿನಗಳಲ್ಲಿ ಬನವಾಸಿ ಮಧುಕೇಶ್ವರ ರಥಕ್ಕೆ ಮಾಲೆ ಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT