ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಬೆಲ್ಲಾ ಸೋಂಕು

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ರುಬೆಲ್ಲಾ ಅಥವಾ ಜರ್ಮನ್ ದಡಾರ ಎನ್ನುವ ವೈರಾಣು ರೋಗ ಸಾಂಕ್ರಾಮಿಕವಾಗಿದ್ದು ಹನಿಗಳಿಂದ(ಕೆಮ್ಮು ಅಥವಾ ಸೀನು)ಹರಡುತ್ತದೆ. ಮಗುವನ್ನು ಹೆರುವ ವಯೋಮಾನದ ಶೇ 45ರಷ್ಟು ಸ್ತ್ರೀಯರು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂದರೆ ಈ ತಮ್ಮ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ  ಸ್ತ್ರೀಯರು ರುಬೆಲ್ಲಾದ ಸೋಂಕಿಗೆ ಒಳಗಾದರೆ ಜನ್ಮಜಾತ ದಡಾರ ಲಕ್ಷಣದಿಂದಲೇ ಶಿಶು ಜನಿಸುತ್ತವೆ. ಇಂತಹ ಸಮಸ್ಯೆಯಿಂದ  ನರಳುವ ಮಕ್ಕಳು ಪ್ರತಿ ವರ್ಷ ಭಾರತದಲ್ಲಿ 2 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಜನ್ಮಜಾತ ದಡಾರದ ಲಕ್ಷಣಗಳೆಂದರೆ ಮಂದಬುದ್ಧಿ, ಕಿವುಡು, ಕೆಟರಾಕ್ಟ್, ಜನ್ಮಜಾತ ಹೃದಯ ರೋಗಗಳಾದ ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಸ್, ವ್ಯಾಲ್ವುಲರ್ ಸ್ಟೆನೋಸಿಸ್, ಏಟ್ರಿಯಲ್ ಮತ್ತು ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್, ರೆಸಿಡ್ಯುಲ್ ನ್ಯೂರಾಲಾಜಿಕಲ್ ಡಿಫಿಸಿಟ್ ಮತ್ತು ಮಧುಮೇಹ ಕೂಡಾ ಸಂಭವಿಸಬಹುದು.

ಮಗುವಿನ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಗಳು ಗರ್ಭಾವಸ್ಥೆಯ ಹಂತ ಮತ್ತು ಸೋಂಕು ತಗುಲಿದ ಸಂದರ್ಭದಲ್ಲಿ ಬೆಳೆಯುತ್ತಿರುವ ಅಂಗಗಳ ಮೇಲೆ ಆಧಾರವಾಗಿರುತ್ತದೆ.

ಮೊದಲ ಮೂರು ತಿಂಗಳಲ್ಲಿ ತಾಯಿಗೆ ಸೋಂಕು ತಗುಲಿದರೆ ಶೇ 100ರಷ್ಟು ಸೋಂಕು ಭ್ರೂಣಕ್ಕೂ ವಿಸ್ತರಿಸುತ್ತದೆ. ಈ ತೊಂದರೆ ಗರ್ಭಧಾರಣೆಯ ವಾರಗಳ ನಂತರ ಕಡಿಮೆಯಾಗುತ್ತಾ ಬರುತ್ತದೆ.

ವಿಷಾದವೆಂದರೆ ಈ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಲಸಿಕೆ ಮೂಲಕ ನಿಯಂತ್ರಣವೇ ಅತ್ಯುತ್ತಮ ವಿಧಾನ. ಗರ್ಭಧಾರಣೆಯ ವಯಸ್ಸಿನಲ್ಲಿರುವ ಸ್ತ್ರೀಯರು ತಮ್ಮ ಗರ್ಭಧಾರಣೆಯನ್ನು ಯೋಜಿಸುವ ಮುನ್ನ ರುಬೆಲ್ಲಾಗೆ ಎಷ್ಟು ಸುಲಭವಾಗಿ ಈಡಾಗಬಲ್ಲರೆಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಇದು ಅತ್ಯಂತ ಸರಳ ರಕ್ತದ ಪರೀಕ್ಷೆಯಾಗಿದ್ದು ರುಬೆಲ್ಲಾ ಎಲ್‌ಜಿಬಿ ಆಂಟಿಬಾಡಿ ಮಟ್ಟ ಪರೀಕ್ಷಿಸುತ್ತದೆ. ರೋಗಾಣುವಿಗೆ ಈಡಾಗಬಹುದಾದ ಸ್ತ್ರೀಯರು ರುಬೆಲ್ಲಾ ಲಸಿಕೆಯನ್ನು ಮೂರು ತಿಂಗಳು ಪಡೆದುಕೊಳ್ಳಬೇಕು.
 
ಇದರಲ್ಲಿ  ಜೀವಂತ ಅಸಾಂದ್ರೀಕೃತ ವೈರಸ್ ಇರುತ್ತದೆ. ಆದ್ದರಿಂದ ಅದನ್ನು ಈಗಾಗಲೇ ಗರ್ಭಧಾರಣೆ ಮಾಡಿರುವ ಸ್ತ್ರೀಯರಿಗೆ ನೀಡುವಂತಿಲ್ಲ. ರುಬೆಲ್ಲಾ ವಿರುದ್ಧ ಪುರುಷರೂ ಔಷಧ ಪಡೆಯಬಹುದು. ಏಕೆಂದರೆ ಸೋಂಕು ತಗುಲಿದ ಪುರುಷರೂ ತಮ್ಮ ಕುಟುಂಬಕ್ಕೆ ಸೋಂಕನ್ನು ಹರಡುವ ಸಾಧ್ಯತೆ ಇರುತ್ತದೆ. ಲಸಿಕೆ ಪಡೆದುಕೊಂಡರೆ ಅದು ದೀರ್ಘಾವಧಿ ರಕ್ಷಣೆ ನೀಡುತ್ತದೆ.
ಜನ್ಮಜಾತ ಅಂಧತ್ವ
ರುಬೆಲ್ಲಾ ಸೋಂಕಿನ ಸೂಚನೆಗಳು ಗೊತ್ತಾಗದೆ ಹೋಗಬಹುದು ಅಥವಾ ಫ್ಲೂ ರೀತಿಯ ಸೂಚನೆಗಳು ಕಾಣಿಸಿಕೊಳ್ಳಬಹುದು. ಇದರ ಪ್ರಾಥಮಿಕ ಸೂಚನೆಗಳು ಮೊದಲಿಗೆ ಮುಖದಲ್ಲಿ ದದ್ದೆಗಳು ನಂತರ ಇತರೆ ಭಾಗಗಳಿಗೆ ವಿಸ್ತರಿಸಬಹುದು. ಈ ದದ್ದೆಗಳು ಮೂರು ದಿನದಲ್ಲಿ ಗುಣವಾಗುತ್ತವೆ. ಆದ್ದರಿಂದಲೇ ರುಬೆಲ್ಲಾವನ್ನು ಮೂರು ದಿನಗಳ ದಡಾರ ಎನ್ನಲಾಗುತ್ತದೆ.  ಸಣ್ಣ ಜ್ವರ, ತಲೆನೋವು, ಕೀಲುನೋವು ಕೂಡಾ ಇರಬಹುದು. ವಯಸ್ಕರಿಗಿಂತಲೂ ಮಕ್ಕಳು ಬೇಗನೆ ಗುಣವಾಗುತ್ತಾರೆ.

ಗರ್ಭಿಣಿ ತಾಯಿಯಲ್ಲಿ ರುಬೆಲ್ಲಾ ಸೋಂಕು ಟಾರ್ಚ್ ಎಲ್‌ಜಿಬಿ ಮತ್ತು ಐಜಿಎಂ ಪರೀಕ್ಷೆಗಳಿಂದ ಪತ್ತೆ ಹಚ್ಚಲಾಗುತ್ತದೆ. ಪೋಷಕರಿಗೆ ಮೊದಲ ಮೂರು ತಿಂಗಳಲ್ಲಿ ರುಬೆಲ್ಲಾ ತಂದೊಡ್ಡುವ ಸಂಕಟಗಳ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಮೂರರಿಂದ 11ನೇ ವಾರದಲ್ಲಿ ಈ ಸೋಂಕು ಕಾಣಿಸಿಕೊಂಡರೆ ಅದು ಶೇ 100ರಷ್ಟು ಭ್ರೂಣಕ್ಕೂ ಸೋಂಕು ತಗಲುತ್ತದೆ. 

ಇದರಿಂದ ಪೋಷಕರು ಗರ್ಭವನ್ನು ಮುಂದುವರೆಸಬೇಕೋ ಅಥವಾ ಅದನ್ನು ನಿವಾರಿಸಬೇಕೋ ಎಂಬ ಗೊಂದಲದಲ್ಲಿ ಸಿಲುಕುತ್ತಾರೆ. ಗರ್ಭ ನಿವಾರಣೆಯನ್ನು ಕೂಡಲೇ ಮಾಡಬಹುದು ಅಥವಾ  ಸೋಂಕು ಭ್ರೂಣಕ್ಕೂ ತಗುಲಿದೆಯೇ ಎಂದು ಪರಿಶೀಲಿಸಿ ನಂತರವೂ ನಿವಾರಿಸಬಹುದು. ಇದು ಆಮ್ನಿಯೋಸೆಂಟೆಸಿಸ್ ಮತ್ತು ಫೆಟಲ್ ಬ್ಲಡ್ ಸ್ಯಾಂಪ್ಲಿಂಗ್ ಒಳಗೊಂಡಿರುತ್ತದೆ.

ಗರ್ಭದೊಳಗಿನ ಮಗುವಿನ ಸುತ್ತಲಿನ  ಸಣ್ಣ ಪ್ರಮಾಣದ ಅಮ್ನಿಯೋಟಿಕ್ ದ್ರವವನ್ನು ಅಲ್ಟ್ರಾಸೌಂಡ್ ಮೂಲಕ ಗಮನಿಸಿ ವೈರಸ್ ಇದೆಯೇ ಎಂದು ಪರಿಶೀಲಿಸುವುದೇ ಆಮ್ನಿಯೋಸೆಂಟೆಸಿಸ್. ಫೆಟಲ್ ಬ್ಲಡ್ ಸ್ಯಾಂಪ್ಲಿಂಗ್ ಕೂಡಾ ಅಲ್ಟ್ರಾಸೌಂಡ್ ಮೂಲಕವೇ ಹೊಕ್ಕುಳಬಳ್ಳಿಯಿಂದ ರಕ್ತ ತೆಗೆದು ಅದನ್ನು ಎಲ್‌ಜಿಎಂ ಮತ್ತು ಎಲ್‌ಜಿಜಿ ಆಂಟಿಬಾಡಿಗಳಿಗಾಗಿ ಪರೀಕ್ಷಿಸುವುದು. ಇತ್ತೀಚಿನ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲೂ ಗರ್ಭಗವಚದ ದ್ರವದಲ್ಲಿ ರುಬೆಲ್ಲಾ ವೈರಸ್‌ಗಾಗಿ ಪರೀಕ್ಷಿಸಬಹುದು. ಈ ಪರೀಕ್ಷೆಗಳಿಂದ ತೀವ್ರ ಸೋಂಕು ಪತ್ತೆಯಾದಲ್ಲಿ ರೋಗಿಯೊಂದಿಗೆ ಗರ್ಭವನ್ನು ನಿವಾರಿಸಲು ಚರ್ಚೆ ನಡೆಸಬೇಕು. ಅದರಲ್ಲೂ ಆಕೆ 20 ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿದ್ದಾಳೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ತಾಯಿಯಲ್ಲಿ ತಡವಾಗಿ ಪರೀಕ್ಷೆ ನಡೆಸಿದರೆ ಆಗ ಭ್ರೂಣದ ಬೆಳವಣಿಗೆಯನ್ನು ಸತತ ಅಲ್ಟ್ರಾಸೌಂಡ್ ಮೂಲಕ ಗಮನಿಸಬೇಕು.

ಹೆರಿಗೆಯ ನಂತರ ಎಚ್ಚರಿಕೆಯಿಂದ ಮಗುವಿನ ಪರೀಕ್ಷೆ ಮತ್ತು ನಿರಂತರ ಗಮನಿಸುವಿಕೆ ಅಗತ್ಯ. ಜನ್ಮಜಾತ ರುಬೆಲ್ಲಾ ಸಿಂಡ್ರೋಮ್‌ನಿಂದ ಉಳಿದ ಮಗುವು ಕೆಲ ತಿಂಗಳು ರುಬೆಲ್ಲಾ ವೈರಸ್ ಉಳಿಸಿಕೊಳ್ಳಬಹುದು. ಈ ಮಕ್ಕಳು  ವಾರ್ಡ್‌ನಲ್ಲಿರುವ ಇತರೆ ಮಕ್ಕಳಿಗೂ ಸೋಂಕು ತಗುಲಿಸಬಹುದು. ಅಥವಾ ಗರ್ಭಿಣಿ ಸ್ತ್ರೀಯರು ಆ ಮಗುವಿನ ಸಂಪರ್ಕಕ್ಕೆ ಬರುವ ಸಾಧ್ಯತೆ ಇರುತ್ತದೆ.  ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಪ್ರಕಾರ ಈ ಲಸಿಕೆ ಎಂಎಂಆರ್ ಲಸಿಕೆಯ ಅಂಗವಾಗಿ ನೀಡಲಾಗುತ್ತದೆ. ಈ ಲಸಿಕೆ 1971ರಲ್ಲಿ ಅನುಮತಿ ಪಡೆದಿದೆ. ಮೊದಲ ಹಂತ 12ರಿಂದ 18 ತಿಂಗಳಲ್ಲಿ. ಎರಡನೇ ಹಂತ 36ನೇ ತಿಂಗಳಲ್ಲಿ ನೀಡಬೇಕಾಗುತ್ತದೆ. ಆದ್ದರಿಂದ ಲಸಿಕೆ ಪಡೆಯದ ಸ್ತ್ರೀಯರು ಗರ್ಭಧಾರಣೆಯ ವಯಸ್ಸಿನಲ್ಲಿದ್ದರೆ ಅವರು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT