ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 16.38 ಲಕ್ಷ ಭತ್ತ ಬೆಳೆ ಹಾನಿ

Last Updated 7 ಸೆಪ್ಟೆಂಬರ್ 2013, 6:43 IST
ಅಕ್ಷರ ಗಾತ್ರ

ಶಿರಸಿ: ವರದಾ ನದಿಯ ಪ್ರವಾಹದಿಂದ ತಾಲ್ಲೂಕಿನ ಬನವಾಸಿ ಹೋಬಳಿಯ ಆರೆಂಟು ಹಳ್ಳಿಗಳಲ್ಲಿ 921 ಎಕರೆ ಭತ್ತ ಬೆಳೆ ಹಾನಿಯಾಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ರೂ16.38 ಲಕ್ಷ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಬಸವರಾಜ್ ಮಾಹಿತಿ ನೀಡಿದರು.

ಅವರು ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 15 ದಿನಗಳ ಹಿಂದೆ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಶೇ 60ಕ್ಕಿಂತ ಹೆಚ್ಚು ಹಾನಿ ಸಂಭವಿಸಿದ ಪ್ರದೇಶಗಳ ವರದಿಯನ್ನು ಸಲ್ಲಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ 5400 ಹೆಕ್ಟೇರ್ ಪ್ರದೇಶದ ಅಡಿಕೆ ತೋಟಕ್ಕೆ ಕೊಳೆರೋಗ ತಗುಲಿದ್ದು, ಈವರೆಗೆ 4559 ಹೆಕ್ಟೇರ್ ಪ್ರದೇಶಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.

ಅಂದಾಜು ರೂ5.43 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಶೇ 60ರ ಪ್ರಮಾಣದಲ್ಲಿ ಪರಿಹಾರ ನೀಡಿದರೆ ಈ ಮೊತ್ತ ರೂ 4.12 ಕೋಟಿಯಷ್ಟಾಗಲಿದೆ. ಜಿಲ್ಲೆಗೆ ಮೊದಲ ಹಂತದಲ್ಲಿ ಪರಿಹಾರ ಮೊತ್ತ ರೂ 4.12 ಕೋಟಿ ಬಿಡುಗಡೆಯಾಗಿದೆ ಎಂದು ಅಧಿಕಾರಿ ಅಣ್ಣಪ್ಪ ನಾಯ್ಕ ಹೇಳಿದರು.

ಕೊಳೆರೋಗ ಹರಡಿರುವ ಮರಗಳಿಗೆ ಹಾನಿಯಾಗುವ ಸಂಭವ ಇದ್ದು, ರೈತರು ಔಷಧಿ ಸಿಂಪರಣೆ ಮೂಲಕ ಮರಗಳನ್ನು ರಕ್ಷಿಸಿಕೊಳ್ಳಬೇಕು. ಈ ಹಿಂದೆ ಮೈಲುತುತ್ತಕ್ಕೆ ಸಹಾಯಧನ ಪಡೆದವರಿಗೆ ಸಹ ಮತ್ತೊಮ್ಮೆ ಸಹಾಯಧನದಲ್ಲಿ ಔಷಧಿ ನೀಡಲಾಗುವುದು ಎಂದರು.

`ಬಿಸಲಕೊಪ್ಪ ಭಾಗದಲ್ಲಿ ಮಳೆಗಾಲದಲ್ಲಿ ಶುರುವಾದ ವಿದ್ಯುತ್ ಕಿರಿಕಿರಿ ಮಳೆ ನಿಂತು ವಾರ ಕಳೆದರೂ ಸರಿಯಾಗಿಲ್ಲ. ಮಳೆಗಾಲದಲ್ಲಂತೂ ಒಂದು ತಿಂಗಳಿನಲ್ಲಿ 10 ದಿನ ಸರಿಯಾಗಿ ವಿದ್ಯುತ್ ಪೂರೈಕೆಯಾಗಿಲ್ಲ. ಈಗಲೂ ಇದೇ ಸ್ಥಿತಿ ಮುಂದುವರಿದಿದೆ' ಎಂದು ಸದಸ್ಯ ಸುನೀಲ ನಾಯ್ಕ ಹೆಸ್ಕಾಂ ವಿರುದ್ಧ ಆರೋಪಿಸಿದರು.

`ಅತಿಥಿ ಶಿಕ್ಷಕರ ನೇಮಕಾತಿ ಅಡಿಯಲ್ಲಿ ತಾಲ್ಲೂಕಿನಲ್ಲಿ 45 ಶಿಕ್ಷಕರ ನೇಮಕವಾಗಿದ್ದು, ಶೇ 90ರಷ್ಟು ಶಿಕ್ಷಕರ ಕೊರತೆ ಸಮಸ್ಯೆ ಬಗೆಹರಿದಂತಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಗುರುಪಾದ ಹೆಗಡೆ, ಉಪಾಧ್ಯಕ್ಷ ಸಂತೋಷ ಗೌಡರ್, ಸದಸ್ಯ ದತ್ತಾತ್ರೇಯ ವೈದ್ಯ ಅವರು ಮಳೆಯಿಂದ ಮನೆ ಹಾನಿಗೊಳಗಾದ ಫಲಾನುಭವಿಗೆ ಚೆಕ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT