ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 400 ಕೋಟಿಗೂ ಹೆಚ್ಚು ಬೆಳೆ ನಷ್ಟ

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ರೈತರ ಬದುಕು ಅಭದ್ರವಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಅನಾವೃಷ್ಟಿಯ ದವಡೆಯ್ಲ್ಲಲಿ ನಲುಗಿದ್ದಾರೆ. ಜಿಲ್ಲೆಯ 22 ಹೋಬಳಿಗಳ ಪೈಕಿ 21ರಲ್ಲಿ ತೀವ್ರ ಬರ ಮತ್ತು 6 ಹೋಬಳಿಗಳು ಮಧ್ಯಮ ಬರ ಪರಿಸ್ಥಿತಿಗೆ ಸಿಲುಕಿವೆ.

ಆಗಸ್ಟ್ ಅಂತ್ಯಕ್ಕೆ ಮುಂಗಾರು ಹಂಗಾಮು ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೆ 3.58 ಲಕ್ಷ ಹೆ. ಗುರಿ ಪೈಕಿ 2.19 ಲಕ್ಷ (ಶೇ. 81.3) ಹೆ. ಬಿತ್ತನೆಯಾಗಿದೆ. ಆದರೆ ಮಳೆ ಇಲ್ಲದೆ ಬೆಳೆಗಳು ಒಣಗತೊಡಗಿವೆ.  ಕಳೆದ ವರ್ಷ 3.88 ಲಕ್ಷ ಹೆ.ನಲ್ಲಿ (ಶೇ. 108.5ರಷ್ಟು)   ಬಿತ್ತನೆಯಾಗಿತ್ತು.

ಹಿರಿಯೂರು ತಾಲ್ಲೂಕಿನಲ್ಲಿ ಹಸಿರೇ ಮಾಯವಾಗಿದೆ. ಬಿತ್ತನೆಯಾಗದ ಒಣ ಭೂಮಿ ಮತ್ತು ಬಾಡುತ್ತಿರುವ ಬೆಳೆಗಳು ಕಾಣುತ್ತವೆ. ಈ ತಾಲ್ಲೂಕಿನ ಐಮಂಗಲ ಸೇರಿದಂತೆ ಎಲ್ಲ ಹೋಬಳಿಗಳು ತೀವ್ರ ಬರಕ್ಕೆ ಸಿಲುಕಿದ್ದು, ಗಂಭೀರ ಪರಿಸ್ಥಿತಿ ಉಂಟಾಗಿದೆ. ಹಿರಿಯೂರು ತಾಲ್ಲೂಕಿನ 49,200 ಹೆ. ಪೈಕಿ ಕೇವಲ 15,830 ಹೆ. (ಶೇ. 32.2) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಬೇಸಿಗೆ ಬಿಸಿಲು ನೆನಪಿಸುವಂತೆ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬೆಳೆಗಳು ಬಾಡಿರುವುದರಿಂದ ರೈತರ ಆಸೆಗಳು ಕಮರಿ ಹೋಗಿವೆ. ತಡವಾಗಿ ಬಿತ್ತನೆಯಾಗಿರುವ ಬೆಳೆಗಳು ಕಾಳು ಕಟ್ಟದೆ ಜೊಳ್ಳಾಗುವ ಸಂಭವ ಹೆಚ್ಚಾಗಿದೆ.

ಬರ ಪರಿಸ್ಥಿತಿಯಿಂದಾಗಿ ಶೇಂಗಾ, ಮೆಕ್ಕೆಜೋಳ ಬೆಳೆಗಳಿಂದ ಅಂದಾಜು ರೂ 400 ಕೋಟಿಗೂ ಹೆಚ್ಚು ನಷ್ಟವಾಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಪ್ರಸ್ತುತ ಹವಾಮಾನ ಪರಿಸ್ಥಿತಿ ಮುಂದುವರಿದರೆ ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಕನಿಷ್ಠ ಬೆಂಬಲ ಬೆಲೆ ಆಧಾರದ ಮೇಲೆ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗಿದೆ.

ಶೇಂಗಾ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, 1.46 ಲಕ್ಷ ಹೆ. ಪ್ರದೇಶದ ಪೈಕಿ ಈ ಬಾರಿ ಕೇವಲ 90,668 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ಮತ್ತು ಹಿರಿಯೂರು ತಾಲ್ಲೂಕುಗಳು ಅತಿ ಹೆಚ್ಚು ಶೇಂಗಾ ಬೆಳೆಯುವ ಪ್ರದೇಶಗಳು. ಪ್ರಸಕ್ತ ಸಾಲಿನಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ 25 ಸಾವಿರ ಹೆ. ಪೈಕಿ ಕೇವಲ 2,901 ಹೆ. ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ 329.7 ಮಿ.ಮೀ. ವಾಡಿಕೆಗೆ 234.3 ಮಿ.ಮೀ. ಮಳೆಯಾಗಿದ್ದು, ಪ್ರಮುಖವಾಗಿ ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಹೋಬಳಿ ತೀವ್ರ ಬರಗಾಲಕ್ಕೆ ಸಿಲುಕಿದೆ. ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಬಿತ್ತನೆಯೇ ಆಗಿಲ್ಲ. ಚಿತ್ರದುರ್ಗ ತಾಲ್ಲೂಕಿನ ಕಸಬಾ ಮತ್ತು ತುರುವನೂರು ಹೋಬಳಿಗಳು ತೀವ್ರ ಬರಕ್ಕೆ ಸಿಲುಕಿವೆ.

97,934 ಹೆ.ನಲ್ಲಿ ಬೆಳೆದಿರುವ ಮೆಕ್ಕೆಜೋಳ ಈಗ ಬಾಡುವ ಸ್ಥಿತಿಗೆ ತಲುಪಿದ್ದು, ಇಳುವರಿ ಕಡಿಮೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಬೆಳೆಗಳ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ನಿರಂತರವಾಗಿ ವರದಿ ಸಲ್ಲಿಸಲಾಗುತ್ತಿದೆ. ಮುಂಗಾರಿನಲ್ಲಿ ಬೆಳೆಗಳು ನಷ್ಟವಾಗಿರುವುದರಿಂದ ಹಿಂಗಾರಿನ ಬೆಳೆಗಳಿಗೆ ಈಗಾಗಲೇ ಇಲಾಖೆ ಸಿದ್ಧತೆ ಕೈಗೊಂಡಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಎಚ್.ಎನ್. ಸುಜಾತಾ ಹೇಳುತ್ತಾರೆ. ಆದರೆ, ಸರ್ಕಾರ ಮಾತ್ರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಹಿಂದೇಟು ಹಾಕುತ್ತಿದೆ ಎನ್ನುವುದು ರೈತರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT