ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 450ಕೋಟಿ ತೆರಿಗೆ ಪಾವತಿ-ಇನ್ಫಿಗೆ ಆದೇಶ

Last Updated 25 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ನಿಯಮ ಉಲ್ಲಂಘಿಸಿ ತೆರಿಗೆ ವಿನಾಯ್ತಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ದೈತ್ಯ ಸಂಸ್ಥೆ ‘ಇನ್ಫೋಸಿಸ್’ಗೆ ಆದಾಯ ತೆರಿಗೆ ಇಲಾಖೆಯು ರೂ 450 ಕೋಟಿ ಪಾವತಿಸುವಂತೆ ಆದೇಶಿಸಿದೆ. ಶುಕ್ರವಾರ ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್ ಪಳನಿಮಾಣಿಕ್ಯಂ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

‘ಇನ್ಫೋಸಿಸ್’ ತನ್ನ ಸಾಗರೋತ್ತರ ಸೇವೆಗಳನ್ನು, ತಂತ್ರಾಂಶ ರಫ್ತು ಎಂದು ತೋರಿಸಿ ರೂ 450 ಕೋಟಿಗಿಂತಲೂ ಹೆಚ್ಚಿನ ತೆರಿಗೆ ವಿನಾಯಿತಿ ಪಡೆದಿತ್ತು. 2007-08ನೇ ಸಾಲಿನ ತೆರಿಗೆ ವರ್ಷದಲ್ಲಿ ರೂ 657.81ಕೋಟಿ ತೆರಿಗೆ ವಿನಾಯಿತಿ ಘೋಷಿಸಿಕೊಂಡಿತ್ತು, ಆದರೆ, ಇದನ್ನು ಇತ್ತೀಚೆಗೆ ಪರಿಷ್ಕರಣೆಗೆ ಒಳಪಡಿಸಿದ ಆದಾಯ ತೆರಿಗೆ ಇಲಾಖೆಯು  ರೂ 456.38 ಕೋಟಿ ಗಳಷ್ಟು ಮೊತ್ತವನ್ನು ಮರು ಪಾವತಿಸಲು ಆದೇಶ ಹೊರಡಿಸಿದೆ ಎಂದು ಮಾಣಿಕ್ಯಂ ಹೇಳಿದ್ದಾರೆ.

ಸಾಗರೋತ್ತರ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮದಡಿ, ಭಾರತೀಯ ಐಟಿ ಕಂಪೆನಿಗಳು ತಮ್ಮ ಎಂಜಿನಿಯರ್‌ಗಳನ್ನು ಮೂರರಿಂದ ಆರು ತಿಂಗಳ     ಅಲ್ಪಾವಧಿ ಯೋಜನೆಗಳಿಗೆ ಯೂರೋಪ್, ಅಮೆರಿಕ ಮತ್ತಿತರ ದೇಶಗಳಿಗೆ ಕಳುಹಿಸಿಕೊಡುವುದು ಸಾಮಾನ್ಯ.

ಆದರೆ, ಈ ರೀತಿಯ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮತ್ತು ವಿದೇಶಗಳಲ್ಲಿ ನಿಯೋಜಿಸಲಾಗುವ ತಾಂತ್ರಿಕ ಮಾನವ ಸಂಪನ್ಮೂಲಗಳಿಂದ ಬರುವ ವರಮಾನ  ತೆರಿಗೆ ವಿನಾಯತಿ ವ್ಯಾಪ್ತಿಗೆ  ಬರುವುದಿಲ್ಲ.  ಇದನ್ನು ತಂತ್ರಾಂಶ ರಫ್ತು ಎಂದು ತೋರಿಸಿ ತೆರಿಗೆ ವಿನಾಯತಿ ಪಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ ವಿವಿಧ ಕಲಂಗಳಲ್ಲಿ ತೆರಿಗೆ ಮುಕ್ತ ರಫ್ತು ವರಮಾನದ ಕುರಿತು ಸ್ವಷ್ಟವಾಗಿ ಹೇಳಲಾಗಿದ್ದು, ಇನ್ಫೋಸಿಸ್ ಘೋಷಿಸಿಕೊಂಡಿರುವ    ತೆರಿಗೆ ವಿನಾಯತಿ ಈ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮಾಣಿಕ್ಯಂ ಹೇಳಿದ್ದಾರೆ.

ಭಾರತದಲ್ಲಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್, ಮತ್ತು ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್)ಘಟಕಗಳಿಗೆ  ಸಂಬಂಧಪಟ್ಟ ವಾಣಿಜ್ಯ ಕಾರ್ಯಕ್ರಮಗಳಿಗಾಗಿ ವಿದೇಶಗಳಿಗೆ ಎಂಜಿನಿಯರ್‌ಗಳನ್ನು ಕಳುಹಿಸಿ  ಕೊಡಲಾಗಿದೆ.

ಆದ್ದರಿಂದ, ಇದರಿಂದ ಬರುವ ವರಮಾನಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಇನ್ಫೋಸಿಸ್ ಕೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT