ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ15 ಲಕ್ಷ ಮೌಲ್ಯದ ಮರಳು ವಶ

Last Updated 5 ಜನವರಿ 2012, 6:50 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕಿನ ಕೊಪ್ಪ ವ್ಯಾಪ್ತಿಯ ಅಣೆ ತಗ್ಗಹಳ್ಳಿ, ಅರಗಿನಮೆಳೆ ಹಾಗೂ ಕೊಪ್ಪಲು ಗ್ರಾಮಗಳಲ್ಲಿ ಶಿಂಷಾ ನದಿ ಪಾತ್ರದಿಂದ ತೆಗೆದು  ರಾಶಿ ಮಾಡಲಾಗಿದ್ದ ಅಂದಾಜು ರೂ.15 ಲಕ್ಷ ಮೌಲ್ಯದ 250ಕ್ಕೂ ಹೆಚ್ಚು ಲಾರಿ ಲೋಡ್ ಮರಳು ದಾಸ್ತಾನನ್ನು ಮಂಗಳವಾರ ರಾತ್ರಿ ತಹಶೀಲ್ದಾರ್ ವಿ.ನಾಗರಾಜು ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಮರಳು ದಾಸ್ತಾನು ಬಳಿ ಇದೀಗ ಎರಡು ಮೀಸಲು ಪೊಲೀಸ್ ತುಕಡಿಗಳನ್ನು, 40 ಕ್ಕೂ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರನ್ನು ನಿಯೋಜಿಸಲಾಗಿದ್ದು, ಮರಳುಕೋರರು ಮರಳು ಸಾಗಿಸದಂತೆ ನಿಗಾ ವಹಿಸಲಾಗಿದೆ. ಅಕ್ರಮ ಮರಳು ದಾಸ್ತಾನು ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಉಪವಿಭಾಗಾಧಿಕಾರಿ ರಂಗಪ್ಪ, ಡಿವೈಎಸ್ಪಿ ಉತ್ತಪ್ಪ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಜಾಫರ್ ಮಾತನಾಡಿ, ಶಿಂಷಾನದಿ ಪಾತ್ರದಲ್ಲಿ ಮರಳು ತೆಗೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಷ್ಟಾದರೂ ಅಕ್ರಮವಾಗಿ ಮರಳು ತೆಗೆಯುವ ಹಾಗೂ ದಾಸ್ತಾನು ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕೂಡಲೇ ಮರಳು ದಾಸ್ತಾನು ಮಾಡಿರುವ  ಜಮೀನುಗಳ ಮಾಲೀಕರನ್ನು ಪಹಣಿ ಮೂಲಕ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಜತೆಗೆ ಆ ಜಮೀನನ್ನು ಸರ್ಕಾರಿ ಬೀಳು ಎಂದು ನಮೂದಿಸಿ ವಶಪಡಿಸಿಕೊಳ್ಳಲು ತಹಶೀಲ್ದಾರ್ ನಾಗರಾಜು ಅವರಿಗೆ ತಾಕೀತು ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಮಾತನಾಡಿ, ಶಿಂಷಾ ನದಿ ಪಾತ್ರದ ಯಾವುದೇ ಗ್ರಾಮದ ಮನೆಗಳ ಬಳಿ, ರಸ್ತೆ ಬದಿಗಳಲ್ಲಿ, ಜಮೀನುಗಳಲ್ಲಿ ಅಕ್ರಮ ಮರಳು ದಾಸ್ತಾನು ವಶಪಡಿಸಿಕೊಳ್ಳಿ. ಅಲ್ಲದೇ ದಾಸ್ತಾನು ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿ. ಈ ಕಾರ್ಯಾಚರಣೆ ಅಗತ್ಯವಾದ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಲು ಇಲಾಖೆ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಒಂದು ಕಣ ಮರಳು ನದಿಯಿಂದ ತೆಗೆಯದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪಿಎಸ್‌ಐ ಮುನಿಯಪ್ಪ ಅವರಿಗೆ ಆದೇಶಿಸಿದರು.

ಮೂವರ ಬಂಧನ
ಅಲ್ಲಿಂದ ಕೊಪ್ಪ ಮಾರ್ಗವಾಗಿ ತಗ್ಗಹಳ್ಳಿ ಸೇತುವೆ ಬಳಿ ಬರುತ್ತಿದ್ದಂತೆ ನದಿಯಲ್ಲಿ ಮರಳು ತೆಗೆಯುತ್ತಿದ್ದ ಉತ್ತರ ಪ್ರದೇಶದ ದೇವು, ದೀಪು, ದಿನೇಶ್ ಅವರನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಂಧಿಸಲಾಯಿತು.

ಇವರೊಂದಿಗೆ ಬಿಹಾರ ರಾಜ್ಯದಿಂದ ಮರಳು ಹೆಕ್ಕುವ ಸಲುವಾಗಿ 200 ಕೂಲಿಯಾಳುಗಳು ಆಗಮಿಸಿದ್ದಾರೆ. ಈ ಎಲ್ಲ ಕೂಲಿಯಾಳುಗಳನ್ನು ಇಲ್ಲಿನ ಸ್ಥಳೀಯ ಮರಳುಕೋರರು ತಮ್ಮ ಮನೆಯಲ್ಲಿಟ್ಟುಕೊಂಡು ಶಿಂಷಾ ನದಿಯಿಂದ ಅಕ್ರಮ ಮರಳು ಹೆಕ್ಕುವ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಾಫರ್ ಹಾಗೂ ಎಸ್ಪಿ ಕೌಶಲೇಂದ್ರಕುಮಾರ್ ಸ್ಥಳೀಯರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಎಸ್ಪಿ ಕೌಶಲೇಂದ್ರಕುಮಾರ್, ಉತ್ತರ ಪ್ರದೇಶದಿಂದ ಕೂಲಿಯಾಳುಗಳನ್ನು ಕರೆತಂದು ಮನೆಯಲ್ಲಿಟ್ಟುಕೊಂಡು ಪೋಷಿಸಿ, ಮರಳು ದಂಧೆ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ. ಅಲ್ಲದೇ ಮರಳುಕೋರರನ್ನು ಬಂಧಿಸಿ ಪ್ರಕರಣ ದಾಖಲಿಸಿ ಎಂದು ಡಿವೈಎಸ್‌ಪಿ ಉತ್ತಪ್ಪ ಅವರಿಗೆ ತಾಕೀತು ಮಾಡಿದರು.

ಎರಡು ಟ್ರ್ಯಾಕ್ಟರ್ ವಶ
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟ್ರ್ಯಾಕ್ಟರ್‌ಗಳನ್ನು ತಹಶೀಲ್ದಾರ್ ನಾಗರಾಜು ಅವರ ನೇತೃತ್ವದಲ್ಲಿ ದಾಳಿ ನಡೆಸಿ ಬುಧವಾರ ಸಂಜೆ ವಶಕ್ಕೆ ತೆಗೆದುಕೊಳ್ಳಲಾಯಿತು.

ಕೊಪ್ಪಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ಕೊತ್ತನಹಳ್ಳಿ ಕಾಲುವೆ ಏರಿ ಮೇಲೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್‌ಗಳನ್ನು ತಹಶೀಲ್ದಾರ್ ಅವರ ಜೀಪು ಬೆನ್ನಟ್ಟಿತು.

ಆದರೆ ಅಲ್ಲಿಂದ ವೇಗವಾಗಿ ಪರಾರಿಯಾದ ಟ್ರಾಕ್ಟರ್‌ಗಳನ್ನು 3 ಕಿ.ಮೀ. ಗೂ ಹೆಚ್ಚು ದೂರ ಬೆನ್ನಟ್ಟಿ ನಂತರ ಹೊಸಕರೆ ಗ್ರಾಮದೊಳಗೆ ಹಿಡಿಯಲಾಯಿತು.

ಆದರೆ ಆ ಸಂದರ್ಭದಲ್ಲಿ ಟ್ರಾಕ್ಟರ್ ಚಾಲಕರು ಅಲ್ಲಿಂದ ಟ್ರಾಕ್ಟರ್ ಬಿಟ್ಟು ಪರಾರಿಯಾದರು ಎನ್ನಲಾಗಿದೆ. ಬೆಸಗರಹಳ್ಳಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT