ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ20 ಕೋಟಿ ಕ್ರಿಯಾಯೋಜನೆ ಸರ್ಕಾರಕ್ಕೆ ಸಲ್ಲಿಕೆ; ಗುಳೇ ತಡೆಗೆ ಒತ್ತು ನೀಡಿ

Last Updated 19 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ರಸ್ತೆ, ಚರಂಡಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ, ತೊಂದರೆ ಆಗುವುದಿಲ್ಲ. ಜನಪ್ರತಿನಿಧಿಗಳನ್ನು ಜನರು ಪ್ರಶ್ನಿಸುವುದಿಲ್ಲ ಎಂದರು.

ಆಯಾ ಗ್ರಾಮಗಳಲ್ಲಿ ಕೆಲಸ ನೀಡುವ ಮೂಲಕ `ಗುಳೇ~ ಹೋಗದಂತೆ ನೋಡಿಕೊಳ್ಳಬೇಕು. ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಸಣ್ಣ ನೀರಾವರಿ ಇಲಾಖೆ ಅಧಿಕಾರಿ ನಾಗರಾಜ್ ಮಾತನಾಡಿ, ಮಳೆ ಬಾರದಿದ್ದರೆ ಡಿಸೆಂಬರ್ ಅಂತ್ಯದವರೆಗೆ ಕೈಗೊಳ್ಳಲು 485 ಕಾಮಗಾರಿಗಳಿಗೆ ರೂ 9.83 ಕೋಟಿ ಕ್ರಿಯಾಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 120 ಕೊಳವೆಬಾವಿಗಳಿವೆ. ಕೊಳವೆಬಾವಿಗಳು ಅನಿವಾರ್ಯ ಎಂಬಂತಾಗಿದೆ ಎಂದರು.

ಸಿಇಒ ಎ.ಬಿ. ಹೇಮಚಂದ್ರ ಮಾತನಾಡಿ, ಕೊಳವೆಬಾವಿಗಳಿಂದಲೇ ಸಮಸ್ಯೆ ಪರಿಹಾರ ಆಗುವುದಿಲ್ಲ. ಮರುಪೂರಣಕ್ಕೆ ಕ್ರಮ ಕೈಗೊಳ್ಳಬೇಕು. ಕೆಟ್ಟಿದ್ದನ್ನು ದುರಸ್ತಿ ಮಾಡಬೇಕು. ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬಹುದು. ನೀರಿಲ್ಲ ಎಂಬ ದೂರು ಬರಬಾರದು. ಎಂಜಿನಿಯರ್‌ಗಳು ಕಡ್ಡಾಯ ಹಳ್ಳಿಗಳಲ್ಲಿ ಇರಬೇಕು. ರಜೆ ಹಾಕಬಾರದು ಎಂದು ಸೂಚಿಸಿದರು.

ಪ್ರಸ್ತಾವ ಸಲ್ಲಿಕೆ
ಕುಡಿಯುವ ನೀರಿಗೆ ಸಂಬಂಧಿಸಿದಂತೆ ರೂ 7.52 ಕೋಟಿ ಕ್ರಿಯಾಯೋಜನೆ ಸರ್ಕಾರದಮಟ್ಟದಲ್ಲಿದೆ. ಹೊಸದು ಸೇರಿಸಿ ಒಟ್ಟು ರೂ 20 ಕೋಟಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬಿಕಾ ರಾಜಪ್ಪ ಮಾತನಾಡಿ, ಹೊನ್ನಾಳಿ ತಾಲ್ಲೂಕಿನ ಚೀಲೂರಿನಲ್ಲಿ ಕಲುಷಿತ ನೀರು ಬರುತ್ತಿದೆ ಎಂಬ ದೂರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಸಮಸ್ಯೆ ಬಂದಾಗ ಎಚ್ಚೆತ್ತುಕೊಳ್ಳುವ ಬದಲಿಗೆ, ಹಳೆಯ ಪೈಪ್‌ಲೈನ್ ಬದಲಾಯಿಸ ಬೇಕು. ಅಂಗನವಾಡಿಗಳಲ್ಲಿ ಶೌಚಾಲಯ ಸರಿಯಾಗಿ ನಿರ್ಮಿಸಿಲ್ಲ. ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕು. ಶೌಚಾಲಯ ನಿರ್ಮಾಣದ ಬಾಕಿ ಹಣ ಫಲಾನುಭವಿಗಳಿಗೆ ಬಂದಿಲ್ಲ. ಇತ್ತ ಗಮನಹರಿಸುವಂತೆ ಸೂಚಿಸಿದರು.

ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಶೌಚಾಲಯ ಬಳಕೆಯಾಗದೇ ಇರುವುದು ಕಂಡುಬಂದಲ್ಲಿ ಸಹಿಸುವುದಿಲ್ಲ ಎಂದು ಸಿಇಒ ಹೇಮಚಂದ್ರ, ಡಿಡಿಪಿಐ ಡಿ.ಕೆ. ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್. ವಾಸುದೇವ ಅವರಿಗೆ ಸೂಚಿಸಿದರು.

ಪ್ರತಿಕ್ರಿಯಿಸಿದ ಡಿಡಿಪಿಐ, ಶಾಲೆಗಳಿಗೆ ಹೋದಾಗ ಮೊದಲು ಶೌಚಾಲಯ ವ್ಯವಸ್ಥೆ ನೋಡುತ್ತೇನೆ ಎಂದು ಹೇಳಿದ್ದು ಸಭೆಯಲ್ಲಿ ನಗೆಯುಕ್ಕಿಸಿತು.ಡಿಎಚ್‌ಒ ಡಾ.ಬಿ.ಆರ್. ಸುಮಿತ್ರಾದೇವಿ ಮಾತನಾಡಿ, ಸೆಪ್ಟೆಂಬರ್‌ನಲ್ಲಿ 287 ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿವೆ. 88 ಪಾಸಿಟಿವ್ ಬಂದಿದೆ. 6 ಚಿಕುನ್‌ಗುನ್ಯಾ, 8 ಮಲೇರಿಯಾ ಪ್ರಕರಣ ಕಂಡುಬಂದಿದೆ. ನಿರಂತರವಾಗಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಗ್ರಾಮೀಣ ಸ್ವಚ್ಛತೆಗೆ ಕ್ರಮ ವಹಿಸಬೇಕು. ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಿಕೊಂಡರೆ ಸಾಲದು ಅದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅಧ್ಯಕ್ಷೆ ಹಾಗೂ ಸಿಇಒ ಸೂಚಿಸಿದರು.

ಖಾತ್ರಿ: ಸಮರೋಪಾದಿ ಅನುಷ್ಠಾನ
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರೂ 240.49 ಕೋಟಿ ಕಾರ್ಮಿಕ ಬಜೆಟ್ ಬಂದಿದ್ದು, ರೂ ಇದರಲ್ಲಿ 92.71 ಕೋಟಿ ಖರ್ಚಾಗಿದೆ. 600 ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಿಇಒ ಎ.ಬಿ. ಹೇಮಚಂದ್ರ ತಿಳಿಸಿದರು.

ಆದರೂ, ನನಗೆ ಸಮಾಧಾನವಾಗುತ್ತಿಲ್ಲ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ 10 ಕಾಮಗಾರಿ ತೆಗೆದುಕೊಳ್ಳಬೇಕು. 50-100 ಮಂದಿ ಕೆಲಸ ಮಾಡುವಂತಾಗಬೇಕು. ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕಿನಲ್ಲಿ ಒತ್ತು ನೀಡಬೇಕು ಎಂದರು.

ಅಧಿಕಾರಿಗಳು ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಬೇಕು. ಪಾರದರ್ಶಕ ಆಗಿರಬೇಕು. ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬೇಕು. ಸುಮ್ಮನಿದ್ದರೆ, ವಾಸ್ತವ ಹೇಳದಿದ್ದರೆ ಸಮಸ್ಯೆ ಉಳಿದುಬಿಡುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT