ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ.30 ಕೋಟಿ ಅವ್ಯವಹಾರ ಲೋಕಾಯುಕ್ತಕ್ಕೆ

Last Updated 7 ಸೆಪ್ಟೆಂಬರ್ 2011, 10:55 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ವ್ಯಾಪಕವಾಗಿ ನಡೆದಿದೆ ಎನ್ನಲಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಭಾರೀ ಅವ್ಯವಹಾರದ ತನಿಖೆಯನ್ನು ಜಿಲ್ಲಾ ಲೋಕಾಯುಕ್ತ ಪೋಲಿಸರು ಕೈಗೆತ್ತಿಕೊಂಡಿದ್ದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಪ್ರತಿ ತಾಲ್ಲೂಕಿನಲ್ಲೂ ಅವ್ಯವಹಾರ, ಭ್ರಷ್ಟತೆಯೇ ಎದ್ದು ಕಾಣುತ್ತಿದ್ದು, ಲಕ್ಷಾಂತರ ಕೂಲಿಕಾರರಿಗೆ ಕೂಲಿ ಹಣವನ್ನು ಕೂಡ ನೀಡಿಲ್ಲ. ಈಗಾಗಲೇ ಕೂಲಿ ಹಣಕ್ಕಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ. ಅವ್ಯವಹಾರದ ಪರಿಣಾಮ ಈ ಹಿಂದೆ ಆರೇಳು ತಿಂಗಳು ಕಾಲ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳ್ಳದೆ ಸ್ಥಗಿತಗೊಳಿಸಲಾಗಿತ್ತು.

ಆನಂತರ ತನಿಖೆ, ಲೆಕ್ಕ ಪತ್ರಗಳ ಪರಿಶೀಲನೆಯ ನಂತರ ಕೇಂದ್ರ ಸರ್ಕಾರದ ನಿರ್ದೇಶನದಂತೆ ಸ್ಥಗಿತಗೊಂಡಿದ್ದ ಯೋಜನೆಗೆ ಮರುಚಾಲನೆ ನೀಡಲಾಗಿದೆ.

ಇಷ್ಟೆಲ್ಲ ರಾದ್ದಾಂತಗಳ ನಡುವೆಯೂ ಪಾಠ ಕಲಿಯದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತದೇ `ತಪ್ಪು~ ದಾರಿ ತುಳಿಯುವ ಮೂಲಕ ಲೋಕಾಯಕ್ತ ತನಿಖೆಗೆ ಕೊರಳೊಡ್ಡಿದ್ದಾರೆ. `ಹಸುಗೆ ಜ್ವರ ಬಂದರೆ, ಎಮ್ಮೆಗೆ ಬರೆ~ ಎಂಬಂತೆ ಲೋಕಾಯುಕ್ತ ತನಿಖೆ ಕಾರಣದಿಂದಾಗಿ ಈಗ ಪಾವಗಡ ತಾಲ್ಲೂಕಿನಲ್ಲಿ ಮತ್ತೊಮ್ಮೆ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.

ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲೂ ಜನತೆ ಅವ್ಯವಹಾರದ ಕುರಿತು ಲೋಕಾಯುಕ್ತದ ಮೆಟ್ಟಿಲು ಏರಿರಲಿಲ್ಲ. ಇದೇ ಮೊದಲ ಭಾರಿಗೆ ಪಾವಗಡದ ಜನತೆ ಯೋಜನೆಯಲ್ಲಾಗುತ್ತಿರುವ ಅವ್ಯವಹಾರದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದು ದೊಡ್ಡ ಸುದ್ದಿಯಾಗಿದೆ.

ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ವೈಯಕ್ತಿಕವಾಗಿ, ಇಲ್ಲವೆ ಸಂಘ ಸಂಸ್ಥೆಗಳಷ್ಟೇ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲಿ ಇಡೀ ಗ್ರಾಮದ ಜನತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದು ವಿಶೇಷವಾಗಿದೆ.

ಅವ್ಯವಹಾರ ಹೇಗೆ?: 2009-10ನೇ ಸಾಲಿನಲ್ಲಿ ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 30 ಕೋಟಿ ವೆಚ್ಚದಲ್ಲಿ ನಡೆಸಲಾಗಿದೆ ಎನ್ನಲಾದ 1500ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಹಣ ಪಾವತಿ ಮಾಡುವಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಚೆಕ್‌ಡ್ಯಾಂ, ರಸ್ತೆ, ಕೆರೆ ಹೂಳೆತ್ತುವುದು ಸೇರಿದಂತೆ ಹಲವು ಕಾಮಗಾರಿ ನಡೆಸಲಾಗಿದ್ದು, ಇದನ್ನು ಎಂ.ಬಿ ಪುಸ್ತಕದಲ್ಲೂ ನಮೂದಿಸಲಾಗಿತ್ತು. ಆದರೆ ಭ್ರಷ್ಟತೆಯ ಕಾರಣ ಈ ಕಾಮಗಾರಿಗೆ ಹಣ ಪಾವತಿ ಮಾಡಲು ಎಂಐಎಸ್ ಫೀಡ್ ಮಾಡಿರಲಿಲ್ಲ ಎನ್ನಲಾಗಿದೆ.

ಹಳೆ ಕಾಮಗಾರಿಗಳನ್ನೆ ಈಗ ಹೊಸ ಕಾಮಗಾರಿಗಳೆಂದು ದಾಖಲೆಯಲ್ಲಿ ತೋರಿಸಿ ಹಣ ನೀಡುವಂತೆ ಜಿಲ್ಲಾ, ತಾಲ್ಲೂಕು ಪಂಚಾಯತ್ ಅಧಿಕಾರಿಗಳ ಮೌಖಿಕ ಆದೇಶದಂತೆ ಹಣ ಪಾವತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪಾವಗಡ ತಾಲ್ಲೂಕಿನಲ್ಲಾದ ಅವ್ಯವಹಾರದ ಕುರಿತು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಜಿ.ಪಂ. ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ತಾಲ್ಲೂಕಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿತ್ತು. ಜಿ.ಪಂ. ತನಿಖೆ ನಡೆಸುತ್ತಿರುವಾಗಲೇ ಪಳವಳ್ಳಿ ಗ್ರಾಮದ ಜನರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು ಹೊಸ ತಿರುವಿಗೆ ಕಾರಣವಾಗಿದೆ.

ಪಾವಗಡ ತಾಲ್ಲೂಕು ಪಂಚಾಯಿತಿ 12-10-2010ರಂದು ನಡೆದ ಸಾಮಾನ್ಯ ಸಭೆಯಲ್ಲಿ 2009-10ನೇ ಸಾಲಿನಲ್ಲಿ ನಡೆದ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಹಣ ನೀಡಬಾರದೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ನಿರ್ಣಯ ಉಲ್ಲಂಘಿಸಿ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸೇರಿಕೊಂಡು ಹಳೆ ಕಾಮಗಾರಿಗಳಿಗೆ ಹೊಸ ಕಾಮಗಾರಿಗಳೆಂದು ತೋರಿಸಿ ರೂ. 30 ಕೋಟಿ ಪಾವತಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಎರಡು ಸಂಸ್ಥೆಗಳ ಮೇಲೂ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ.

ಜನತೆಯ ದೂರಿನ ಆಧಾರದ ಮೇಲೆ ವರದಿ ನೀಡುವಂತೆ ಲೋಕಾಯುಕ್ತರು ಜೂನ್ 26ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಯಾಗಿ ಪಾವಗಡ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವರದಿ ನೀಡಿದ್ದು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜನರು ಬಾಳೆ, ಅಡಿಕೆ, ಜೋಳ ಬೆಳೆದಿದ್ದು, ಇದಕ್ಕೆ ಹಣ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು ರೂ. 30 ಲಕ್ಷ ನೀಡಬೇಕಾಗುತ್ತದೆ. ಆದರೆ ಹಣವನ್ನು ನೀಡಿಲ್ಲ ಎಂದು ವರದಿ ನೀಡಿದ್ದಾರೆ.

ಕಾಮಗಾರಿಗೆ ಹಣ ಪಾವತಿ ಕುರಿತು ಕೇಳಿದ ವಿವರಣೆಗೆ ಬಾಳೆ, ಅಡಿಕೆ, ಜೋಳದ ಲೆಕ್ಕ ತೋರಿಸಿರುವುದು ಕೂಡ ಹಾಸ್ಯಾಸ್ಪದವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಸೆ. 3ರಂದು ಲೋಕಾಯುಕ್ತರು ಮತ್ತೊಂದು ಪತ್ರ ಬರೆದು ವಿವರಣೆ ಕೋರಿದ್ದಾರೆ. ಅಲ್ಲದೆ ರೂ. 30 ಕೋಟಿ ಮೊತ್ತದ ಕಾಮಗಾರಿಗಳಿಗೆ ಯಾಕೆ ಎಂಐಎಸ್ ಫೀಡ್ ಮಾಡಿರಲಿಲ್ಲ ಎಂಬ ಉತ್ತರ ಕೂಡ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ಅಲ್ಲದೆ ಒಂದೇ ಕಾಮಗಾರಿಗೆ ಎಷ್ಟು ಬಿಲ್ ಪಡೆಯಲಾಗಿದೆ ಎಂಬುದು ಬೆಳಕಿಗೆ ಬರಬೇಕಾಗಿದೆ. ಈಗಾಗಲೇ ಅವ್ಯವಹಾರದ ಅಧ್ಯಯನ ನಡೆಸಲು ತಾಂತ್ರಿಕ ವಿಭಾಗವನ್ನು ಲೋಕಾಯುಕ್ತ ಪೊಲೀಸರು ಕೋರಿದ್ದಾರೆ ಎಂದು ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT