ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾ ಕೊರಳಿಗೆ ಆರು ಚಿನ್ನದ ಪದಕ

Last Updated 23 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಧಾರವಾಡ: ಚಿನ್ನದ ಸಂಭ್ರಮ... ಮುಖದಲ್ಲಿ ಸಾಧನೆ ಮಾಡಿದ ತೃಪ್ತಿ... ಮುಗಿಲು ಮುಟ್ಟಿದ ಸಂತಸ... ಇನ್ನೂ ಸಾಧನೆ ಮಾಡಬೇಕು ಎಂಬ ಹಂಬಲ... ಇದು ಕಂಡು ಬಂದಿದ್ದು ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 61ನೇ ಘಟಿಕೋತ್ಸವ ಸಮಾರಂಭದಲ್ಲಿ. ಈ ಜ್ಞಾನದೇಗುಲದ ಗಾಂಧಿ ಭವನದ ತುಂಬೆಲ್ಲ ಚಿನ್ನದ ನಗು ಕಾಣುತ್ತಿತ್ತು. ಚಿನ್ನದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿನಿಯೊಬ್ಬರು ಉಪನ್ಯಾಸಕ ರಾಗಬೇಕು ಎಂದು ಆಸೆ ಪಟ್ಟರೆ, ಮತ್ತೊಬ್ಬರು ಕಮ್ಯುನಿಕೇಶನ್‌ದಲ್ಲಿ ಸಂಶೋಧನೆ ನಡೆಸುವುದಾಗಿ ಹೇಳುತ್ತಾರೆ.

ಎಂಟು ಸುವರ್ಣ ಪದಕ ಗಳಿಸುವ ಮೂಲಕ 61ನೇ ಘಟಿಕೋತ್ಸವದ ಚಿನ್ನದ ಹುಡುಗ ಎಂಬ ಕೀರ್ತಿ ಪಡೆದ ಸ್ನಾತಕೋತ್ತರ ಬಯೋಕೆಮೆಸ್ಟ್ರಿ ಅಧ್ಯಯನ ವಿಭಾಗದ ಸುರೇಶ ಶ್ರೀಧರ ಭಟ್ಟ ಅವರೊಂದಿಗೆ ಅವರ ಪಾಲಕರು ಸಂತೋಷದ ಕ್ಷಣ ಸವಿದರು. ಗುಲಬರ್ಗಾ ಜಿಲ್ಲೆಯ ಸೇಡಂನ ಸುರೇಶ ಅವರಿಗೆ ದಿ. ಪದ್ಮಾಬಾಯಿ ಬಾಲಾಜಿರಾವ್ ಸುವರ್ಣ ಪದಕ, ವಾಮನರಾವ್ ಕೋರೆ, ಡಾ. ಕೃಷ್ಣಾಬಾಯಿ ಆರ್.ಪಾಟೀಲ, ದಿ. ಡಾ. ಎಸ್.ಎಂ.ಕುರಡಿಕೇರಿ, ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್, ಸಿ.ಎಸ್.ಬೆನ್ನೂರ, ಡಾ. ಮುಮತಾಜ್ ಅಹಮ್ಮದಖಾನ್ ಹಾಗೂ ಪ್ರೊ. ಎಂ.ಮಾದಯ್ಯ ಸ್ಮಾರಕ ಚಿನ್ನದ ಪದಕಗಳು ಲಭಿಸಿವೆ.

‘ತುಂಬಾ ಖುಷಿ ಆಗಿದೆ. ಈ ಸಾಧನೆಗೆ ಪಾಲಕರೇ ಪ್ರೇರಣೆ. ಪಾಲಕರು, ಸಹೋದರರು, ಸ್ನೇಹಿತರ ಸದಾ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಪ್ರೋಟೀನ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ನಡೆಸುವ ಉದ್ದೇಶ ಹೊಂದಿದ್ದೇನೆ’ ಎಂದು ಸುರೇಶ ಅತೀವ ಸಂತಸದಿಂದ ನುಡಿದರು. ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಓದಿರುವ ಮಧುರಾ ಮಥಾಯಿ ಆರ್ಯ ಅವರಿಗೆ ಆರು ಚಿನ್ನದ ಪದಕ ದೊರೆತಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ರಾಮನಗರದವರಾದ ಇವರಿಗೆ ದಿ. ಗುದ್ಲೆಪ್ಪ ಹಳ್ಳಿಕೇರಿ, ಡಾ. ಶ್ರೀಕೃಷ್ಣ ಸಿಂಗ್, ಪ್ರೊ. ಬಿ.ಬಿ.ಬಾಗಿ, ಪ್ರೊ. ಎನ್.ಎಂ. ಬುಜುರ್ಕೆ, ಡಾ. ಸುಭಾಸ ಭೂಸನೂರಮಠ ಹಾಗೂ ಪಾರ್ವತೆವ್ವ ಮೆಳವಂಕಿ ಅವರ ಹೆಸರಿನಲ್ಲಿರುವ ಸುವರ್ಣ ಪದಕಗಳು ಅವರಿಗೆ ದೊರೆತಿವೆ.

‘ನನ್ನ ಪಾಲಕರಿಗೆ ಚಿನ್ನದ ಪದಕಗಳನ್ನು ಸಮರ್ಪಿಸುತ್ತೇನೆ. ಗಣಿತ ವಿಷಯದಲ್ಲಿ ಸಂಶೋಧನೆ ನಡೆಸುವ ಉದ್ದೇಶ ಹೊಂದಿದ್ದು, ಉಪನ್ಯಾಸಕಿಯಾಗಬೇಕು ಎಂಬ ಬಯಕೆ ಇದೆ’ ಎಂದು ಹೇಳುತ್ತಾರೆ. ನೆಟ್ ಪರೀಕ್ಷೆ ಬರೆದು, ಉಪನ್ಯಾಸಕಿ ಆಗಬೇಕು ಎಂಬ ಆಸೆ ಇಟ್ಟುಕೊಂಡಿರುವ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ರೂಪಾ ಬಸವರಾಜ ಕೋರೆ, ಮೂಲತಃ ವಿಜಾಪುರ ಜಿಲ್ಲೆಯ ಇಂಡಿಯವರು. ಇವರಿಗೆ ದಿ. ಶಿವಪ್ಪ ರೋಡಗಿ, ಪ್ರೊ. ಬಿ.ವಿ.ನಾಡಕರ್ಣಿ, ಡಾ. ಎಂ.ಸಿ.ಮೋದಿ, ಪ್ರೊ. ರವಿಶಂಕರ ಕನಮಡಿ, ಪ್ರೊ. ಎಸ್.ಕೆ.ಸೈದಾಪುರ, ಡಾ. ಸಿ.ಜೆ.ಸವಣೂರಮಠ ಅವರ ಹೆಸರಿನ ಸುವರ್ಣ ಪದಕಗಳು ಲಭಿಸಿವೆ.

ಪತ್ರಿಕೋದ್ಯಮ ವಿಭಾಗದಲ್ಲಿ ಆರು ಚಿನ್ನದ ಪದಕ ಪಡೆದಿರುವ ಹೊನ್ನಾವರದ ಸಂಜಯ ಸೀತಾರಾಮ ನಾಯ್ಕ ‘ನನಗೆ ಅತೀವ ಸಂತೋಷವಾಗಿದೆ. ಕಷ್ಟಪಟ್ಟು ಬೆಳೆದಿದ್ದಕ್ಕೆ ಫಲ ಸಿಕ್ಕಿದೆ. ಕಮ್ಯುನಿಕೇಶನ್‌ದಲ್ಲಿ ಸಂಶೋಧನೆ ಮಾಡಬೇಕು ಎಂಬ ಉದ್ದೇಶವಿದೆ’ ಎಂದು ಹೇಳುತ್ತಾರೆ. ಸಂಜಯ ಅವರಿಗೆ ಲೀಲಾ ಮಹಾದೇವ ಕೇಸರಿ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಕೆ.ಎಂ.ರಾಜಶೇಖರ ಹಿರೇಮಠ, ದಿ. ಎಚ್.ಆರ್.ಮೊಹರೆ, ಕೆ.ಶಾಮರಾವ್, ದಿ. ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸುವರ್ಣ ಪದಕಗಳು ದೊರೆತಿವೆ. ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಪ್ರೀತಿ ಸೋಮನಗೌಡ ಪಾಟೀಲ ಅವರಿಗೆ ಐದು ಚಿನ್ನದ ಪದಕಗಳು ದೊರೆತಿವೆ. ತಮ್ಮ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT