ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಮ್ ಸಿಗದೆ ಪರದಾಡಿದ ಜೇಟ್ಲಿ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಬುಧವಾರ ರಾತ್ರಿ ಹೋಟೆಲ್ ಕೊಠಡಿಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.

`ನಮ್ಮ ಮೆಟ್ರೊ~ ಉದ್ಘಾಟನೆಗೆ ಆಗಮಿಸಿದ ಅವರು, ನೇರವಾಗಿ ತಮಗೆ ಕೊಠಡಿ ಕಾಯ್ದಿರಿಸಿದ್ದ ಒಬೆರಾಯ್ ಹೋಟೆಲ್‌ಗೆ ತೆರಳಿದರು. ಆಗ ಅವರಿಗೆ `ಶಾಕ್~ ಕಾದಿತ್ತು. ಕಾರಣ ಜೇಟ್ಲಿ ಹೆಸರಲ್ಲಿ ರೂಮ್ ಕಾಯ್ದಿರಿಸಿರಲಿಲ್ಲ.

ಅವರು ಯಾರಿಗೂ ಹೇಳದೆ ಸುಮ್ಮನೆ ಹೋಟೆಲ್‌ನ ಸಭಾಂಗಣದಲ್ಲಿ ಕುಳಿತಿದ್ದರು. ನಂತರ ಯಾರೋ ಒಬ್ಬರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಇದರಿಂದ ಗಾಬರಿಯಾದ ಸಿ.ಎಂ ತಕ್ಷಣವೇ ತಮ್ಮ ಸ್ನೇಹಿತರ ಕಾರಿನಲ್ಲಿ ರಾತ್ರಿ 11.30ಕ್ಕೆ ಹೋಟೆಲ್‌ಗೆ ಧಾವಿಸಿದರು. ಆ ವೇಳೆಗೆ ಗೃಹ ಸಚಿವ ಆರ್.ಅಶೋಕ, ಶಾಸಕ ಸಿ.ಟಿ.ರವಿ ಕೂಡ ಅಲ್ಲಿಗೆ ತೆರಳಿದರು.

ಇವರೆಲ್ಲರೂ ಅಲ್ಲಿಗೆ ತೆರಳುವ ವೇಳೆಗೆ ಜೇಟ್ಲಿ ಅವರಿಗೆ ಹೋಟೆಲ್‌ನವರು 511ನೇ ಸಂಖ್ಯೆಯ ಕೊಠಡಿ ನೀಡಿದ್ದರು. ಈ ವಿಚಾರ ಕೇಳಿ ಮುಖ್ಯಮಂತ್ರಿಯೂ ನಿಟ್ಟುಸಿರುಬಿಟ್ಟರು ಎನ್ನಲಾಗಿದೆ.

ಸಮಸ್ಯೆ ಏಕಾಯಿತು?
ಜೇಟ್ಲಿ ಅವರು ರಾತ್ರಿ ಬರುತ್ತೇನೆಂದು ಹೇಳಿದ್ದನ್ನು ಮೆಟ್ರೊ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಎಂದು ತಪ್ಪಾಗಿ ತಿಳಿದ ಕಾರಣ ಈ ಸಮಸ್ಯೆ ಆಗಿದೆ. ಆದರೆ, ಶಿಷ್ಟಾಚಾರ ಸಿಬ್ಬಂದಿ ಮಾತ್ರ ವಿಮಾನ ನಿಲ್ದಾಣಕ್ಕೆ ತೆರಳಿ ಜೇಟ್ಲಿ ಅವರನ್ನು ಕರೆತಂದರು. ಜೇಟ್ಲಿ ಬರುವ ವಿಷಯ ಮುಖ್ಯಮಂತ್ರಿಗಾಗಲಿ ಅಥವಾ ಪಕ್ಷದ ಮುಖಂಡರಿಗಾಗಲಿ ಗೊತ್ತಿರಲಿಲ್ಲ ಎನ್ನಲಾಗಿದೆ. ಜೇಟ್ಲಿ ಇದ್ದ ಕೊಠಡಿಗೆ ತೆರಳಿ, ಆದ ತಪ್ಪಿಗೆ ಸಿಎಂ ಕ್ಷಮೆ ಯಾಚಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT