ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಮ್ ಹಾಕ್ತಾರೆ...!

Last Updated 25 ಜೂನ್ 2012, 19:30 IST
ಅಕ್ಷರ ಗಾತ್ರ

`ಪೂರ್ವ ದಿಕ್ಕಿನಲ್ಲಿ ಕೂತ್ಕೋಬೇಕು~ ಎಂದ ಒಬ್ಬ, ಇಲ್ಲ `ಉತ್ತರ ದಿಕ್ಕು ಸರಿ~ ಎಂದ ಮತ್ತೊಬ್ಬ. ಅವರಿಬ್ಬರ ತಲೆಯ ಮೇಲೆ ಮೆಲ್ಲಗೆ ತಟ್ಟಿದ ಚಿನ್ನಾಭರಣ ಅಲಂಕೃತ ಕೃಷ್ಣಸುಂದರ `ನೀವು ಸುಮ್ನಿರ‌್ರಪ್ಪಾ; ಒಂದು ನಿಮಿಷ~ ಎಂದ.
 
ನಾಲ್ಕೂ ಬೆರಳಲ್ಲಿ ಉಂಗುರ ತೊಟ್ಟ ಕೈಯಲ್ಲಿದ್ದ ಮೊಬೈಲ್ ಕಿವಿಗೆ ಒತ್ತಿಟ್ಟುಕೊಂಡು `ಏಯ್... ದೇವರ ಮನೇಲಿ ನನ್ನ ಜಾತಕ ಇದೆ. ಅದರಲ್ಲಿ ನನಗೆ ಯಾವ ದಿಕ್ಕು ಒಳ್ಳೇಯದು ಅಂತಾ ನೋಡಿ ಹೇಳು ಕಣೆ~ ಎಂದ. ಮರುಕ್ಷಣ ಅತ್ತ ಕಡೆಯಿಂದ ಏನು ಉತ್ತರ ಬಂತೋ ಗೊತ್ತಿಲ್ಲ `ಉತ್ತರ... ಉತ್ತರ... ಉತ್ತರ ಸರಿಯಾದ ದಿಕ್ಕು~ ಎಂದ.

ಅವನ ಆಣತಿಯಂತೆ ಕಥೆಗಾರನ ಗೆಟಪ್‌ನಲ್ಲಿದ್ದ ವ್ಯಕ್ತಿಯನ್ನು ಉತ್ತರ ದಿಕ್ಕಿಗೆ ಪ್ರತಿಷ್ಠಾಪನೆ ಮಾಡಿಯಾಗಿತ್ತು. ಅವನ ಕೈಯಲ್ಲಿ ಒಂದು ಪ್ಯಾಡ್ ಹಾಗೂ ಪೆನ್ನು. ಅದೇ ಪ್ಯಾಡ್‌ಗೆ ಹೂವಿನ ಮಾಲೆ ಹಾಕಿ ಕುಂಕುಮ ಇಟ್ಟರು.
 
ಅಲ್ಲಿಗೆ ಶುರು ಹೊಸ ಸಿನಿಮಾಕ್ಕೆ ಹಾಕಿದ್ದ ರೂಮ್‌ನಲ್ಲಿ ಕಥೆ ಬರೆಯುವ ಹಾಗೂ ದೃಶ್ಯಗಳನ್ನು ಹೆಣೆಯುವ ಕೆಲಸ. ಹೌದು; ಸಿನಿಮಾ ಮಾಡುವ ಹೆಚ್ಚಿನ ಜನರು ಹೀಗೆ ಶಾಸ್ತ್ರ ಮಾಡುತ್ತಾರೆ. ಈ ಶಾಸ್ತ್ರಕ್ಕೆ ರೂಮ್ ಹಾಕಲೇಬೇಕು; ಆಗಲೇ ಹೊಸ ಸಿನಿಮಾವೊಂದರ ನಿರ್ಮಾಣಕ್ಕೆ ಮುನ್ನುಡಿ.

`ರೂಮ್ ಹಾಕೀವಿ~ ಎಂದು ಗಾಂಧೀನಗರದಲ್ಲಿ ಹೇಳುವುದು ಸಾಮಾನ್ಯ. ಇದು ಹೊರಗಿನವರಿಗೆ ಕೇಳಲು ವಿಚಿತ್ರ ಎನಿಸಬಹುದು; ಆದರೆ ಸ್ಯಾಂಡಲ್‌ವುಡ್ ಮಂದಿಗೆ ಇದು ಪರಿಚಿತ ಪದಜೋಡಿ. `ರೂಮ್ ಹಾಕಲಾಗಿದೆ~ ಎಂದರೆ ಮತ್ತೊಂದು ಚಲನಚಿತ್ರ ಸಿದ್ಧವಾಗುತ್ತದೆ ಎನ್ನುವುದರ ಸಂಕೇತ.

ಹೀಗೆ ಸಿನಿಮಾ ಮಾಡುವ ಉದ್ದೇಶದೊಂದಿಗೆ ಲಾಡ್ಜ್, ಹೋಟೆಲ್, ಅಪಾರ್ಟ್‌ಮೆಂಟ್, ಐಷಾರಾಮಿ ಬಂಗಲೆಯ ಕೋಣೆಯಲ್ಲಿ ಕಥೆ, ಚಿತ್ರಕಥೆ, ಹಾಡು ಹಾಗೂ ಸಂಗೀತ ಸಂಯೋಜನೆಯ ದಳಗಳು ಬಿಚ್ಚಿಕೊಂಡು ಅರಳಿದ ಹೂವಾಗತೊಡಗುತ್ತವೆ.

ಚಿತ್ರರಂಗದ ಮಂದಿ ಹಾಕಿದ್ದ ಇಂಥ ಮೂರು ಪ್ರತ್ಯೇಕ ರೂಮ್‌ಗಳಲ್ಲಿ ಮೂರನೇ ವ್ಯಕ್ತಿ ಎನ್ನುವಂತೆ ಕುಳಿತು ಅಲ್ಲಿ ನಡೆಯುವ ಘಟನಾವಳಿಗಳಿಗೆ ಸಾಕ್ಷಿಯಾದಾಗ ಮನಕ್ಕೆ ಕಚಗುಳಿ ಇಟ್ಟ ಅನುಭವ.

ಗಾಂಧಿನಗರದ ಅಂಚಿನಲ್ಲಿನ ಹೋಟೆಲ್. ಭಾರಿ ಜನದಟ್ಟಣೆ ಅಲ್ಲಿ. ಅದನ್ನು ಹೋಟೆಲ್ ಅನ್ನುವುದಕ್ಕಿಂತ ಲಾಡ್ಜ್ ಎಂದು ಹೇಳಬಹುದು. ಸಾಮಾನ್ಯವಾಗಿ ಅಲ್ಲಿ ಟ್ರಾನ್ಸ್‌ಫರ್‌ಗೆ ಶಿಫಾರಸು ಮಾಡಿಸಿಕೊಳ್ಳಲು ಜಿಲ್ಲೆ ಹಾಗೂ ತಾಲ್ಲೂಕುಗಳ ಸರ್ಕಾರಿ ಉದ್ಯೋಗಿಗಳು ಬಂದು ತಂಗುವುದೇ ಹೆಚ್ಚು.

ಸಿನಿಮಾದವರೂ ರೂಮ್ ಹಾಕುವುದೂ ಅಲ್ಲೇ! ಅಂಥದೊಂದು ಕೋಣೆಯಲ್ಲಿ ಶುರುವಾಗಿದ್ದು ಹೆಸರಿಡದ ಹೊಸ ಚಿತ್ರವೊಂದಕ್ಕೆ ಕಥೆ ಬರೆಯುವ ಕೆಲಸ. ಮೊದಲ ಬಾರಿಗೆ ಚಿತ್ರ ಮಾಡುತ್ತಿದ್ದ ಯುವಕರ ದಂಡು ಸೇರಿತ್ತು.
 
ಆ ದಂಡಿನ ನಡುವೆ ಧಡೂತಿಯೊಬ್ಬ ಚಿನ್ನ...ಚಿನ್ನವಾಗಿದ್ದ! ಅಂದರೆ ಮೈತುಂಬಾ ಚಿನ್ನ ಎನ್ನಬಹುದು ಅಷ್ಟೊಂದು ದಪ್ಪನೆಯ ಚಿನ್ನದ ಸರ, ಕಡಗ ಹಾಗೂ ಉಂಗುರ. ಕಥೆ ಬರೆಯುವುದಕ್ಕೆ ಬಂದಿದ್ದ ಜುಬ್ಬಾಧಾರಿ ಮಾತ್ರ ಪಾಪದವರು ಎನ್ನುವಂತೆ ಮುದ್ದೆಯಾಗಿ ಕುಳಿತಿದ್ದ. ದಿಕ್ಕು ನೋಡಿ; ಪೂಜೆಯ ಶಾಸ್ತ್ರ ಮಾಡಿ ಮೊದಲ ಸಾಲು `ಶ್ರೀ... ಸಮ್ ದೇವರ ಕೃಪೆ...~ ಎಂದು ಬರೆಯುವಷ್ಟರಲ್ಲಿ.

ಇಡ್ಲಿ-ವಡೆ, ಚೌಚೌವ್ ಬಾತ್, ಚಹಾ-ಕಾಫಿ ಸಮಾರಾಧನೆ. ಬಾಯಿ ಒರೆಸಿಕೊಂಡು ಕಥೆಯ ಕಡೆಗೆ ಚಿತ್ತ ಹರಿಯುವಷ್ಟರಲ್ಲಿ, ನಿರ್ಮಾಪಕ ನಿದ್ದೆಗೆ ಜಾರಿಯಾಗಿತ್ತು. ನಡುನಡುವೆ ಮೊಬೈಲ್ ರಿಂಗಣಿಸಿದಾಗ ಮಾತ್ರ ದಡಬಡಿಸಿ ಕಣ್ಣುಬಿಟ್ಟು ಜೋರಾಗಿ ಮಾತು ಶುರು. ಆಗ ಯುವಕರ ದಂಡಿನ ದೃಶ್ಯ ಕಲ್ಪನೆಯ ಚರ್ಚೆಗೆ ಬ್ರೇಕ್.

ಹೀಗೆ ಅದೆಷ್ಟೊಂದು ಬಾರಿ ಆಯಿತು. ಮೊದಲ ದೃಶ್ಯವೂ ಕಾಗದದ ಮೇಲೆ ಅಕ್ಷರಗಳಾಗಿ ಇಳಿದಿರಲಿಲ್ಲ. ಅಷ್ಟರಲ್ಲಿ ಊಟ. ಮತ್ತೆ ಹರಟೆ. ಬೆಳಕು ಕರಗಿ ಕತ್ತಲೆ ಆಗುವ ಹೊತ್ತಿಗೆ ನಿರ್ಮಾಪಕ ಎದ್ದು ನಡೆದಾಗಿತ್ತು. ಅಷ್ಟು ಹೊತ್ತಿಗಾಗಲೇ ಕಥೆ ಬರೆಯುವ ಆರಂಭದ ಉತ್ಸಾಹವೂ ಮಾಯವಾಗಿತ್ತು.

ಹೀಗೆ ಎಲ್ಲೆಡೆ ಆಗುತ್ತದೆಂದಲ್ಲ. ಕೆಲವರು ಗಂಭೀರವಾಗಿ ಕುಳಿತು ಪ್ರತಿಯೊಂದು ದೃಶ್ಯಗಳನ್ನು ಹೆಣೆಯುತ್ತಾರೆ. ಚರ್ಚೆ ಮಾಡುತ್ತಾರೆ. ಆಗ ಹೊಸ ಹೊಸ ವಿಚಾರಗಳು ಬಂದು ಸಿನಿಮಾ ಕಥೆ ಕೂಡ ಆಸಕ್ತಿಕರವಾಗುತ್ತದೆ. ಇನ್ನೊಂದು ರೀತಿಯೂ ಇದೆ. ಅಲ್ಲಿ ನಡೆಯುವುದು ಕದಿಯುವ ಕೆಲಸ.

ಕೋಣೆಯಲ್ಲಿ ಕುಳಿತು ಪ್ರತಿ ದಿನ ಎಂಟು-ಹತ್ತು ತಾಸು ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದು. ಅವುಗಳಲ್ಲಿ ಇಷ್ಟವಾಗುವ ದೃಶ್ಯಗಳನ್ನು ತಮ್ಮ ಸ್ಕ್ರಿಪ್ಟ್‌ಗೆ ಬಟ್ಟಿ ಇಳಿಸುವುದು. ಆದ್ದರಿಂದಲೇ ರೋಮ್‌ನಲ್ಲಿ ಅನ್ಯ ಭಾಷೆಯ ಚಿತ್ರಗಳ ರಾಶಿರಾಶಿ `ಸೀಡಿ~ ಹಾಗೂ `ಡಿವಿಡಿ~.

ಗೊತ್ತಿರುವ ಭಾಷೆಯಾಗಿದ್ದರೆ ಕಥೆ ಬರೆಯುವ ವ್ಯಕ್ತಿಗೆ ಶ್ರಮ ಕಡಿಮೆ. ಗೊತ್ತಿಲ್ಲದ ಭಾಷೆ ಆಗಿದ್ದರೆ ಅದನ್ನು ತಿಳಿದವನನ್ನು ಕರೆಯಿಸಿ ತಿಂಡಿ-ಕಾಫಿ ಕೊಟ್ಟು ಭಾಷಾಂತರ ಮಾಡಿಸಿಕೊಳ್ಳುವ ಕಾಯಕ.

ಎಲ್ಲಕ್ಕಿಂತ ಆಸಕ್ತಿಕರ ಎನಿಸುವುದು ಹಾಡುಗಳನ್ನು ಬರೆಯುವ ಸಂದರ್ಭ. ಕಾರಣ ಸಂಗೀತ ಸಂಯೋಜನೆಯೊಂದಿಗೆ ಪದಗಳನ್ನು ಹೊಂದಿಸುವ ಕ್ಷಣಗಳವು. ಸಂಗೀತ ಇದ್ದಾಗ ಅದಕ್ಕೆ ಸಾಲು ಬರೆಯುವುದು ಕುತೂಹಲ.

ಹಾಡುಗಳೇ ಸಿನಿಮಾ ಯಶಸ್ಸಿಗೆ ಮುಖ್ಯ ಎನ್ನುವ ಭಾವನೆ ಬಲವಾಗಿ ಬೇರು ಬಿಟ್ಟಿದ್ದು ಕೂಡ ನಿರ್ಮಾಪಕ ಕೂಡ ಆಗ ತುಂಬಾ ಸೀರಿಯಸ್. ಭಾರಿ ಮೊತ್ತವನ್ನು ಇನ್ವೆಸ್ಟ್ ಮಾಡುವ ನಿರ್ಮಾಪಕರದ್ದು `ಒಳ್ಳೇ ಹಾಡು ಇರಬೇಕು...~ ಎನ್ನುವ ಮಂತ್ರ ಪಠಣ.

ಕೆಲವು ನಿರ್ಮಾಪಕರಿಗೆ ನಾಯಕಿಯ ಆಯ್ಕೆಯೇ ಮೊದಲ ಆದ್ಯತೆ. ಇನ್ನೂ ಕಥೆಯ ಮೊದಲ ಸಾಲು ಕಾಗದದ ಮೇಲೆ ಮೂಡಿರುವುದಿಲ್ಲ; ಆಗಲೇ ಹೀರೊಯಿನ್ ಸೆಲೆಕ್ಷೆನ್‌ಗೆ ಮುಂಬೈಗೆ ಹೋಗುವ ಉತ್ಸಾಹ! ಹೀಗೆ ಹೊಸ ಸಿನಿಮಾಕ್ಕಾಗಿ ರೂಮ್ ಹಾಕಿದಲ್ಲಿ ತೆರೆದು ಕೊಳ್ಳುವ ದೃಶ್ಯಗಳು ಹಲವು.

ಕಲಾ ಚಿತ್ರ ನಿರ್ದೇಶಕರಿಗೆ ಬೇಕಿಲ್ಲ
ಕಲಾತ್ಮಕ ಚಿತ್ರಗಳನ್ನು ಮಾಡುವ ಹೆಚ್ಚಿನ ನಿರ್ದೇಶಕರು ಹಾಗೂ ನಿರ್ಮಾಪಕರು ರೂಮ್ ಹಾಕುವ ಗೊಡವೆಗೆ ಹೋಗುವುದಿಲ್ಲ. ಅದಕ್ಕೆ ಕಾರಣವೂ ಇದೆ. ಇಂಥ ಸಿನಿಮಾ ಮಾಡುವವರು ಚಿಂತಕರು ಎನ್ನುವ ಮಟ್ಟದಲ್ಲಿ ತಮ್ಮನ್ನು ಇಟ್ಟುಕೊಂಡವರು.
 
ಆದ್ದರಿಂದ ಏಕಾಂತದಲ್ಲಿ ಕುಳಿತು ಕಥೆ ಹಾಗೂ ಚಿತ್ರಕಥೆಯನ್ನು ಹೆಣೆಯುತ್ತಾರೆ. ಆದರೆ ಬಿ. ವಿ. ಕಾರಂತ್ ಅವರಂಥವರು ಮಾತ್ರ ತಾವು ಮಾಡಿಕೊಂಡ ದೃಶ್ಯ ಕಲ್ಪನೆಯನ್ನು ಜೊತೆಗಿದ್ದವರೊಂದಿಗೆ ಹಂಚಿಕೊಂಡು ಇನ್ನಷ್ಟು ಸೊಗಸು ಮಾಡಲು ಯತ್ನಿಸಿದ್ದು.

ಶಂಕರನಾಗ್ ಕೂಡ ಹಲವಾರು ನಿಟ್ಟಿನಿಂದ ಅಭಿಪ್ರಾಯಗಳು ಹರಿದು ಬರಲೆಂದು ಅನೇಕ ವಿಚಾರವಂತರನ್ನು ಒಟ್ಟು ಗೂಡಿಸಿಕೊಂಡು ಕಥೆಯ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆದರೆ ಕಲಾತ್ಮಕ ಚಿತ್ರ ಮಾಡುವ ಎಲ್ಲ ನಿರ್ದೇಶಕರು ಹೀಗಲ್ಲ. ಅವರು ಒಂಟಿಯಾಗಿದ್ದುಕೊಂಡೇ ಚಿತ್ರದ ಕಥೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಾರೆ.

ಇಲ್ಲವೇ ಜನಪ್ರಿಯ ಕಥೆ ಹಾಗೂ ಕಾದಂಬರಿಗಳನ್ನು ಎತ್ತಿಕೊಂಡು ಸಿನಿಮಾ ಮಾಡುವ ಸಾಹಸಕ್ಕೆ ಕೈಹಾಕುತ್ತಾರೆ. ಬೇರೆಯವರೊಂದಿಗೆ ಚರ್ಚೆ ಮಾಡಿದರೆ ತಾವು ಯೋಚಿಸಿದ ಕಥಾನಕದ ಲಯ ತಪ್ಪುತ್ತದೆ ಎನ್ನುವ ಭಯವೂ ಕೆಲವರಲ್ಲಿದೆ.

ರೋಮ್‌ನಿಂದ ಹೊರಟಾಗ ಸಿಕ್ಕ ಹಾಡಿನ ಸಾಲು!
`ಆನ್ ಮಿಲೋ ಸಜನಾ~ ಹಿಂದಿ ಸಿನಿಮಾದ `ಅಚ್ಚಾ ತೋ ಹಮ್ ಚಲ್ತೇ ಹೈ...~ ಗೀತೆಯ ಎಳೆ ಸಿಕ್ಕಿದ್ದು ಹೀಗೆ ಹಾಡು ಹೆಣೆಯಲು ಕೋಣೆಯಲ್ಲಿ ಇದ್ದಾಗ! ಹೌದು; ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರು ಹಾರ್ಮೊನಿಯಂ ಮುಂದೆ ಕುಳಿತು ದಿನವನ್ನು ಸವೆಸಿದ್ದರು. ಗೀತೆ ರಚನಕಾರ ಆನಂದ್ ಭಕ್ಷಿ ಕೂಡ ಪೇನ್ಸಿಲ್-ಪ್ಯಾಡ್ ಹಿಡಿದು ಕಾಲ ಕಳೆದಿದ್ದರು. ಅಷ್ಟು ಹೊತ್ತಿಗೆ ಹತ್ತಾರು ಲೋಟ ಚಹಾ ಕುಡಿದಾಗಿತ್ತು.

ಆದರೂ ಒಂದು ಒಳ್ಳೆಯ ಪಂಚಿಂಗ್ ಸಾಲು ಸಿಕ್ಕಿರಲಿಲ್ಲ. ಆಗ ಬೇಸತ್ತು ಮುಕುಲ್ ದತ್ತಾ ಜೊತೆಗಿದ್ದ ಸಿನಿಮಾ ತಂಡದ ಸದಸ್ಯರೊಬ್ಬರು ಎದ್ದು ಕೋಣೆಯ ಬಾಗಿಲತ್ತ ಹೋಗಿ `ಅಚ್ಛಾ ತೋ ಹಮ್ ಚಲ್ತೇ ಹೈ...~ (ಸರಿ, ನಾನಿನ್ನು ಹೊರಡುವೆ) ಎಂದಿದ್ದರು.
 
ತಕ್ಷಣ ಆ ಸಾಲೇ ಆನಂದ್ ಭಕ್ಷಿ ಅವರಿಗೆ ಪ್ರೇರಣೆ ಆಯಿತು. ಅದೇ ಸಾಲಿಗೆ ಸ್ಪಂದಿಸಿದ್ದ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರೂ ಹಾರ್ಮೊನಿಯಂನಲ್ಲಿ ಅದೇ ಸಾಲನ್ನು ಲಯದೊಂದಿಗೆ ನುಡಿಸಿದರು.
 
ಆಗ ಸಿದ್ಧವಾಯಿತು ಜನಪ್ರಿಯ ಗೀತೆ. ಈಗ ಸಿನಿಮಾದವರು ಕುಳಿತು ಚರ್ಚಿಸುವ ಕೋಣೆಯಲ್ಲಿ ಅದೆಷ್ಟೊಂದು ವಿಶಿಷ್ಟವಾದ ಸೃಜನಾತ್ಮಕ ದೃಶ್ಯ, ಹಾಡು, ಕತೆಗಳು ರೂಪ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT