ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಆಸ್ತಿ: ಇನ್ನಷ್ಟು ದಾಳಿ?

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಬಂಧನಕ್ಕೆ  ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳನ್ನು ತಪಾಸಣೆ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ವಶಪಡಿಸಿಕೊಂಡಿರುವ ಸಿಬಿಐ, ಬಂಧಿತರು ಹಾಗೂ ಅವರ ಆಪ್ತರು ಹೊಂದಿರುವ ಆಸ್ತಿ, ಅದಿರು ವಹಿವಾಟಿನ ದಾಖಲೆಗಳಿಗಾಗಿ ಮತ್ತೆ ದಾಳಿ ಮುಂದುವರಿಸುವ ಸಾಧ್ಯತೆ ಇದೆ.

ನಗರದ ಆ್ಯಕ್ಸಿಸ್ ಬ್ಯಾಂಕ್‌ಗೆ ಶನಿವಾರ ಬೆಳಿಗ್ಗೆ 9ಕ್ಕೆ ಶ್ರೀನಿವಾಸ ರೆಡ್ಡಿ ಅವರನ್ನು ಕರೆ ತಂದಿದ್ದ ಸಿಬಿಐ ಅಧಿಕಾರಿಗಳು ರಾತ್ರಿ 8ರವರೆಗೆ ತಪಾಸಣೆ, ಪರಿಶೀಲನೆ ನಡೆಸಿ ಹೈದರಾಬಾದ್‌ಗೆ ಮರಳಿದ್ದು, ಗಾಲಿ ಜನಾರ್ದನ ರೆಡ್ಡಿ ಅವರನ್ನೂ ನಗರಕ್ಕೆ ಕರೆತರಲಿದ್ದಾರೆ ಎಂಬ ವದಂತಿಗಳು ಹರಡಿದ್ದವು.

ಸಿಬಿಐ ನ್ಯಾಯಾಲಯವು ಸೆ. 19ರವರೆಗೆ ಈ ಇಬ್ಬರನ್ನು ಸಿಬಿಐ ವಶಕ್ಕೆ ಒಪ್ಪಿಸಿದ್ದು,  ವಿಚಾರಣೆ ಹಿನ್ನೆಲೆಯಲ್ಲಿ ಬಂಧನ ಅವಧಿ ವಿಸ್ತರಿಸುವಂತೆ ಕೋರುವ ಸಾಧ್ಯತೆಗಳಿವೆ.

ಕಳೆದ ಕೆಲವು ದಿನಗಳಿಂದ ಸಿಬಿಐನ ಪ್ರತ್ಯೇಕ ತಂಡಗಳು ಪ್ರಮುಖ ಮಾಹಿತಿಗಳ ಸಂಗ್ರಹಕ್ಕಾಗಿ ಬಳ್ಳಾರಿಯಲ್ಲೇ ಬೀಡು ಬಿಟ್ಟಿದ್ದು, ರೆಡ್ಡಿ ಆಪ್ತರ ಚಲನವಲನಗಳ ಮೇಲೆ ನಿಗಾ ಇರಿಸಿ, ಸೂಕ್ಷ್ಮವಾಗಿ ಅವಲೋಕಿಸುತ್ತಿವೆ ಎಂದೂ ಹೇಳಲಾಗುತ್ತಿದೆ.

ದಾಳಿ ಸಾಧ್ಯತೆ: ಏತನ್ಮಧ್ಯೆ, ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿಯೂ ನಗರದಲ್ಲಿ ಬೀಡುಬಿಟ್ಟಿದ್ದು, ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. 

 ಹೆಸರು ಹೇಳಲು ಇಚ್ಛಿಸದ ಕೆಲವರು ನಗರದ ಖಾಸಗಿ ವಸತಿ ಗೃಹವೊಂದರಲ್ಲಿ  ಸೋಮವಾರಕ್ಕಾಗಿ 17 ಕೊಠಡಿಗಳನ್ನು ಕಾದಿರಿಸಿದ್ದು ಇದಕ್ಕೆ ಪುಷ್ಟಿ ನೀಡಿದೆ.

ಸಿಬಿಐ ತನಿಖೆಯಿಂದ ಪತ್ತೆಯಾಗಿರುವ ಪ್ರಮುಖ ಮಾಹಿತಿಯನ್ನಾಧರಿಸಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರೆಡ್ಡಿ ಪಾಳಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT