ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಬಂಧನಕ್ಕೆ ಅಭ್ಯಂತರ ಇಲ್ಲ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಶಿರಾ: ಜಾಮೀನಿಗಾಗಿ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣದಲ್ಲಿ ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್‌ಬಾಬು ಅವರನ್ನು ಸಿಬಿಐ ಬಂಧಿಸಿದಲ್ಲಿ ನಮ್ಮ ಪಕ್ಷದ ಅಭ್ಯಂತರವೇನೂ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. 
 

ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗೋಶಾಲೆಗೆ ಭಾನುವಾರ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಬಿಐ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಸಿಬಿಐ ಕಾನೂನು ರೀತಿಯೇ ನಡೆದುಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಯಾವುದೇ ಕ್ರಮ ಕೈಗೊಂಡರೂ ನಮ್ಮ  ಅಭ್ಯಂತರ ಇಲ್ಲ ಎಂದರು.

ಬಿಜೆಪಿ ಅಧ್ಯಕ್ಷ ಸ್ಥಾನ ಮಾಜಿ ಮುಖ್ಯಮಂತ್ರಿ ಸದಾನಂದಗೌಡರಿಗೆ ನೀಡಬೇಕು ಎಂದು ಸ್ವಾಮೀಜಿಯೊಬ್ಬರು ಒತ್ತಾಯಿಸಿದ್ದಾರೆ ಎಂಬ ಪ್ರಶ್ನೆಗೆ, ನಮಗೆ ಸ್ವಾಮೀಜಿಗಳ ಆಶೀರ್ವಾದ ಬೇಕು ನಿಜ. ಆದರೆ, ಅಧ್ಯಕ್ಷರ ಆಯ್ಕೆಯಲ್ಲಿ ಸ್ವಾಮೀಜಿಗಳ ಸಲಹೆಗಿಂತ ಪಕ್ಷದ ಹೈಕಮಾಂಡ್ ಆಯ್ಕೆಯೇ ಅಂತಿಮ ಎಂದು ಉತ್ತರಿಸಿದರು.

`ಸಾಮೂಹಿಕನಾಯಕತ್ವದಲ್ಲಿ ಚುನಾವಣೆ~

ಚಿತ್ರದುರ್ಗ:
ಮುಂದಿನ ಚುನಾವಣೆಯನ್ನು ಯಾವುದೇ ಒಬ್ಬರ ನಾಯಕತ್ವದಲ್ಲಿ ಎದುರಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಬರ ನಿರ್ವಹಣೆ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಹಾಗೂ ಅನಂತಕುಮಾರ್ ಸೇರಿದಂತೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಸ್ಪಷ್ಟಪಡಿಸಿದರು.

ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಸಚಿವರಾಗಲು ಯೋಗ್ಯ ವ್ಯಕ್ತಿ. ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ನೋವಿನಿಂದ ತಮ್ಮ ಬಗ್ಗೆ ಟೀಕೆ ಮಾಡಿದ್ದಾರೆ. ಆದರೂ, ಚಂದ್ರಪ್ಪ ಒಳ್ಳೆಯ ಸ್ನೇಹಿತ. ಈಗ ಮಾತುಕತೆ ಮೂಲಕ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT