ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಮನೆ ಕಂಡು ದಂಗಾದ ಸಿಬಿಐ ಸಿಬ್ಬಂದಿ..!

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ಮನೆ ಮೇಲೆ  ಸೋಮವಾರ ಬೆಳಗಿನಜಾವ ದಾಳಿ ನಡೆಸಿದ ಸಿಬಿಐ ಸಿಬ್ಬಂದಿ ರೆಡ್ಡಿ ಅವರ ಐಷಾರಾಮಿ ಬಂಗಲೆ ಮತ್ತು ಅಲ್ಲಿನ ವೈಭವ ಕಂಡು ದಂಗಾಗಿ ಹೋಗಿದ್ದಾರೆ.

ಇಂದ್ರಲೋಕವನ್ನೇ ನಾಚಿಸುವಂತಹ ವೈಭವವನ್ನು ಒಳಗೊಂಡಿರುವ ಆ ಬೃಹತ್ ಬಂಗಲೆ, ಅದರ ಆವರಣದಲ್ಲಿ ಇರುವ ಪೀಠೋಪಕರಣಗಳು, ಹುಲ್ಲು ಹಾಸು, ನೆಲಹಾಸು, ಬೃಹದಾಕಾರದ ಕಂಬಗಳು, ಕಟ್ಟಡದ ವಿನ್ಯಾಸ, ಸುತ್ತಲೂ ಇರುವ ಕಾಂಪೌಂಡು, ಹಿಂಭಾಗದಲ್ಲಿರುವ ಗುಡ್ಡ, ಗಿಡ, ಮರಗಳು, ಹೂ, ಬಳ್ಳಿ, ಈಜುಕೊಳ, ಚಿಕ್ಕದೊಂದು ಸಿನಿಮಾ ಥಿಯೇಟರ್, ಕೊಠಡಿಗಳಿಗೆಲ್ಲ ಹವಾನಿಯಂತ್ರಿತ ವ್ಯವಸ್ಥೆ, ಅಷ್ಟೇ ವೈಭವದಿಂದ ಕೂಡಿದ ದೇವರ ಕೋಣೆ ಮಾತ್ರವಲ್ಲದೇ ಹಲವು ಬಗೆಯ ಐಷಾರಾಮಿ ವಸ್ತುಗಳನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ಬೆರಗಾದರು.

ಸಿಬಿಐ ಸಿಬ್ಬಂದಿಗೆ ಭದ್ರತೆ ಒದಗಿಸಲೆಂದೇ ಅವರೊಂದಿಗೆ ಮನೆಯೊಳಗೆ ತೆರಳಿದ್ದ ಸ್ಥಳೀಯ ಪೊಲೀಸ್ ಸಿಬ್ಬಂದಿಯೊಬ್ಬರು ಈ ವಿಷಯವನ್ನು `ಪ್ರಜಾವಾಣಿ~ ಎದುರು ಹೇಳಿಕೊಂಡಿದ್ದು, ಜನಾರ್ದನರೆಡ್ಡಿ ಅವರ ಮನೆ ನಿಜಕ್ಕೂ ಮನೆಯಲ್ಲ. ಅದೊಂದು ಕೋಟೆ. ಅದರೊಳಗೆ ಏನೆಲ್ಲ ಐಶ್ವರ್ಯ ಇದೆ ಎಂಬುದನ್ನು ವರ್ಣಿಸಲಸದಳ ಎಂದು ತಿಳಿಸಿದ್ದಾರೆ.

ಚಿನ್ನದ ಕುರ್ಚಿ: ಜನಾರ್ದನರೆಡ್ಡಿ ಅವರ ನಿವಾಸದಲ್ಲಿ ದೊರೆತಿರುವ 30 ಕೆಜಿ ಚಿನ್ನದ ಪೈಕಿ 15 ಕೆಜಿ ತೂಗುವ ವಜ್ರಖಚಿತವಾದ ಸಿಂಹಾಸನದ ಮಾದರಿಯ ಕುರ್ಚಿಯೊಂದು ಸೇರಿದೆ ಎಂದು ಹೇಳಲಾಗುತ್ತಿದ್ದು, ವಿವಿಧ ವಿನ್ಯಾಸದ ವಜ್ರಾಭರಣಗಳಂತೂ ರಾಜ-ಮಹಾರಾಜರ ಕಾಲದ ವೈಭವವನ್ನು ನೆನಪಿಸುವಂತಿವೆ.

ಜನಾರ್ದನರೆಡ್ಡಿ ವರ್ಷಕ್ಕೊಮ್ಮೆ ಮಾತ್ರ ತಮ್ಮ ಜನ್ಮದಿನದಂದು ನಗರದ ದುರ್ಗಮ್ಮ ದೇವಸ್ಥಾನಕ್ಕೆ ಅಭಿಷೇಕಕ್ಕೆ ತೆರಳಲು ಬಳಸುತ್ತಿದ್ದ ರೂ 4 ಕೋಟಿ ಮೌಲ್ಯದ ರೋಲ್ಸ್‌ರಾಯ್ ಕಾರು, ತಲಾ ಕೋಟಿ ಬೆಲೆ ಬಾಳುವ ಲ್ಯಾಂಡ್ ಕ್ರೂಸರ್, ರೇಂಜ್‌ರೋವರ್, ಬಿಎಂಡಬ್ಲ್ಯೂ ಕಾರುಗಳನ್ನು ಕಂಡ ಸಿಬಿಐ ತಂಡ ಅವುಗಳನ್ನೂ ವಶಕ್ಕೆ ತೆಗೆದುಕೊಂಡಿದೆ.

ಸತತ ಮೂರು ವರ್ಷಗಳಿಂದ ನಿರ್ಮಿಸಲಾಗುತ್ತಿರುವ ಮನೆ ಎದುರಿನ ಕಾಂಪೌಂಡ್‌ನ ಎತ್ತರ, ಅದರ ವಿನ್ಯಾಸ, ಅದಕ್ಕೆ ತಗಲಿದ ವೆಚ್ಚ, ಮನೆಯಲ್ಲಿರುವ ಬೆಲೆ ಬಾಳುವ ಪೀಠೋಪಕರಣಗಳು ಹೀಗೆ ಪ್ರತಿಯೊಂದನ್ನೂ ಕಣ್ಣು ಮಿಟುಕಿಸದಂತೆ ನೋಡಿದ ಸಿಬಿಐ ಅಧಿಕಾರಿಗಳು, ಮಧ್ಯರಾತ್ರಿವರೆಗೂ ಆಸ್ತಿಯ ಲೆಕ್ಕಾಚಾರ ಹಾಕಿ, ಲಭ್ಯ ದಾಖಲೆಗಳನ್ನೆಲ್ಲ ಪರಿಶೀಲಿಸಿ, ಮರಳಿದರು ಎಂದು ಆ ಸಿಬ್ಬಂದಿಆಶ್ಚರ್ಯದಿಂದಲೇ  ವಿವರಿಸಿದ್ದಾರೆ.

ಈ ಹಿಂದೆಯೂ ಅನೇಕ ಕಡೆ ದಾಳಿ ನಡೆಸಿರುವ ಆಂಧ್ರದ ಸಿಬಿಐ ಸಿಬ್ಬಂದಿ ಇಂತಹ ಐಷಾರಾಮಿ ಕಟ್ಟಡಗಳನ್ನು ಕಂಡಿದ್ದರೂ ಗಡಿಯಾಚೆಯೂ ಅಂಥದ್ದೇ ವೈಭವವನ್ನು ಕಂಡು ನಿಬ್ಬೆರಗಾಗಿದ್ದು ಜನಾರ್ದನರೆಡ್ಡಿ ಹೊಂದಿರುವ ಆಸ್ತಿಪಾಸ್ತಿಯ ಬಗ್ಗೆ ಕುತೂಹಲ ಮೂಡಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT