ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಸೋದರರ ವಜ್ರಖಚಿತ ಕಿರೀಟ ಕೊಡುಗೆ....

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ನೀಡಿರುವ ರೂ 45 ಕೋಟಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಹಿಂತಿರುಗಿಸುವ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನವು  (ಟಿಟಿಡಿ) ಮುಂದಿನ ವಾರ ನಿರ್ಧರಿಸಲಿದೆ.

ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಈಗ ಆಂಧ್ರಪ್ರದೇಶದ ಜೈಲಿನಲ್ಲಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಟಿಟಿಡಿ ಮಂಡಳಿಯ ಸದಸ್ಯ ಆರ್. ಸೂರ್ಯಪ್ರಕಾಶ್ ರಾವ್ ಅವರು, ರೆಡ್ಡಿ ಅವರು 2009ರಲ್ಲಿ ನೀಡಿದ ಈ ಕೊಡುಗೆ ಬಗ್ಗೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದರೆ ಟಿಟಿಡಿ ಇದನ್ನು ಸ್ವೀಕರಿಸುವುದು ಎಂದು ತಿಳಿಸಿದ್ದಾರೆ.

ವಜ್ರ ಕಿರೀಟದ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲದಿದ್ದರೆ ಆಗ ಟಿಟಿಡಿ ಮಂಡಳಿಯು ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದು ಎಂದು ಅವರು ಹೇಳಿದ್ದಾರೆ.ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐನಿಂದ ಸೋಮವಾರ ಬಂಧನಕ್ಕೆ ಒಳಗಾಗಿರುವ ರೆಡ್ಡಿ ಅವರು ಈ ಹಿಂದೆ ನೀಡಿರುವ ಕಿರೀಟವನ್ನು ಟಿಟಿಡಿ ಹಿಂತಿರುಗಿಸಬೇಕು ಎಂದು ಆಡಳಿತ ಕಾಂಗ್ರೆಸ್ ಮತ್ತು  ತೆಲುಗುದೇಶಂನ ಶಾಸಕರು ಸೇರಿದಂತೆ ಕೆಲವು ಭಕ್ತರು ಒತ್ತಾಯಿಸಿದ್ದಾರೆ.

ಜನಾರ್ದನ ರೆಡ್ಡಿ ಮತ್ತು ಅವರ ಸೋದರ ಜಿ. ಕರುಣಾಕರ ರೆಡ್ಡಿ ಇಬ್ಬರೂ 2009ರ ಜೂನ್ ತಿಂಗಳಲ್ಲಿ  ಕರ್ನಾಟಕ ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಈ ಕಿರೀಟವನ್ನು ದೇವಾಲಯಕ್ಕೆ ನೀಡಿದ್ದರು.ಆದರೆ ಕಿರೀಟದ ಗಾತ್ರವು ದೇವರ ವಿಗ್ರಹದ ತಲೆಯ ಆಕಾರಕ್ಕೆ ಸರಿ ಹೊಂದದ ಕಾರಣ ದೇವಾಲಯದವರು ಅದನ್ನು ವಿಗ್ರಹಕ್ಕೆ ಅಲಂಕರಿಸಿರಲಿಲ್ಲ.

ಈ ವರ್ಷದ ಮೇ ತಿಂಗಳಲ್ಲಿ ರೆಡ್ಡಿ ಸೋದರರು ಆಂಧ್ರದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ದೇವಾಲಯಕ್ಕೆ ರೂ 15 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ಚಿನ್ನದ ವಸ್ತ್ರವನ್ನು ಕೊಡುಗೆಯಾಗಿ ನೀಡಿದ್ದರು.ಈ ದೇವಾಲಯದ ಭಕ್ತರು ಕೂಡ ಕಳಂಕಿತ ಸಚಿವರು ನೀಡಿದ ಕೊಡುಗೆಯನ್ನು ಹಿಂತಿರುಗಿಸಬೇಕು ಎಂದು ದೇವಾಲಯದ ಆಡಳಿತ ವರ್ಗವನ್ನು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT