ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿದ್ವಯರಿಗೆ ಸುಪ್ರೀಂ ಬರೆ

Last Updated 8 ಜನವರಿ 2011, 6:10 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯದ ಸಚಿವರಾಗಿರುವ ಬಳ್ಳಾರಿ ರೆಡ್ಡಿ ಸಹೋದರರ ಒಡೆತನದ ‘ಓಬಳಾಪುರಂ ಗಣಿ ಕಂಪೆನಿ’ ಮತ್ತು ಅನಂತಪುರ ಗಣಿ ಕಾರ್ಪೊರೇಷನ್ ಆಂಧ್ರ- ಕರ್ನಾಟಕ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿವೆ’ ಎಂದು ಹೇಳಿರುವ ‘ಸುಪ್ರೀಂ ಕೋರ್ಟ್‌ನ ಉನ್ನತಾಧಿಕಾರ ಸಮಿತಿ’ (ಸಿಇಸಿ) ಈ ಕಂಪೆನಿಗಳ ನಾಲ್ಕು ಗಣಿಗಾರಿಕೆ ಪರವಾನಗಿ ರದ್ದು ಮಾಡುವಂತೆ ಶಿಫಾರಸು ಮಾಡಿದೆ.

ಪ್ರವಾಸೋದ್ಯಮ ಸಚಿವ ಜಿ. ಜನಾರ್ದನರೆಡ್ಡಿ ಹಾಗೂ ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಒಡೆತನದ ಕಂಪೆನಿಗಳು ಆಂಧ್ರ ಗಡಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿವೆ ಎಂದು ಪರಿಣಿತರ ಸಮಿತಿಯ ವರದಿ ಸ್ಪಷ್ಟಪಡಿಸಿದೆ. ಈ ವರದಿಯನ್ನು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠದ ಮುಂದೆ ಸಲ್ಲಿಸಲಾಯಿತು.

ಡಿಸೆಂಬರ್ 15ರಿಂದ 29ರವರೆಗೆ ಸಮಿತಿ ಸದಸ್ಯರು ಗಣಿಗಾರಿಕೆ ಪ್ರದೇಶಗಳಲ್ಲಿ ಸುತ್ತಾಡಿ ಪರಿಸರ ಸೇರಿದಂತೆ ಪ್ರತಿಯೊಂದು ಅಂಶಗಳನ್ನು ವೀಕ್ಷಿಸಿ ಸಿದ್ಧಪಡಿಸಿದ ವರದಿಯನ್ನು ಸಮಗ್ರವಾಗಿ ಪರಿಶೀಲಿಸುವ ಇಂಗಿತವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ಒಎಂಸಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಆಂಧ್ರ ಸರ್ಕಾರದ ಅಧಿಕಾರಿಗಳು ಶಾಮೀಲಾಗದೆ ಇದು ನಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ 140 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ನಾಲ್ಕು ಗಣಿಗಳ ಪರವಾನಗಿ ರದ್ದು ಮಾಡುವಂತೆ ಶಿಫಾರಸು ಮಾಡಿದೆ.
ಅಕ್ರಮ ಗಣಿಗಾರಿಕೆ ಪ್ರದೇಶ ಬಳ್ಳಾರಿ ಮೀಸಲು ಅರಣ್ಯದಲ್ಲೂ ವ್ಯಾಪಿಸಿದೆ ಎಂದು ವರದಿ ವಿವರಿಸಿದೆ.

ಅಧಿಕಾರಿಗಳು ಗಣಿಗಾರಿಕೆ ಪರವಾನಗಿಯನ್ನು ಅಕ್ರಮವಾಗಿ ವಿಸ್ತರಿಸಿದ್ದಾರೆ. ಅನುಮತಿ ಪಡೆದಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ನಿಗದಿತ ಮಟ್ಟಕ್ಕಿಂತ ಮೂರು ಪಟ್ಟು ಅಧಿಕ ಆಳದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಮೀಸಲು ಅರಣ್ಯದೊಳಗೆ ಅನಧಿಕೃತ ಕಟ್ಟಡಗಳನ್ನು ಕಟ್ಟಿ ಅದರೊಳಗೆ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸಿಇಸಿ ವಿವರಿಸಿದೆ.

ಬಳ್ಳಾರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತಿರುವ ಕರ್ನಾಟಕ ಮತ್ತು ಆಂಧ್ರ ಗಡಿ ರೇಖೆ ನಿಗದಿ ಆಗುವವರೆಗೆ ರೆಡ್ಡಿಗಳ ಒಡೆತನದ ನಾಲ್ಕು ಕಂಪೆನಿಗಳ ಅದಿರು ಸಾಗಣೆ ಚಟುವಟಿಕೆಗಳನ್ನು ನಿಲ್ಲಿಸಬೇಕು. ಗಡಿಯಲ್ಲಿ ಶಾಶ್ವತ ಗಡಿ ಕಂಬಗಳನ್ನು ನಿರ್ಮಿಸಬೇಕು ಎಂದು ಶಿಫಾರಸು ಮಾಡಿದೆ.

ಸಿಇಸಿ 70 ಪುಟಗಳ ವರದಿಯಲ್ಲಿ ಕೆಲವು ಗುತ್ತಿಗೆ ಒಪ್ಪಂದವನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಅಕ್ರಮವಾಗಿ ವಿಸ್ತರಿಸಿದ್ದಾರೆ. ಮತ್ತಿತರ ಪ್ರಕರಣಗಳಲ್ಲಿ ಒಪ್ಪಂದ ಮುಗಿದ ಒಂದು ವರ್ಷಗಳ ಬಳಿಕ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

68.5 ಹೆಕ್ಟೇರ್‌ನಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ವರದಿಯು, ಒಪ್ಪಂದದಾಚೆಗೆ ಮೀಸಲು ಅರಣ್ಯದೊಳಗೆ ಅನಧಿಕೃತವಾಗಿ ಐದು ರಸ್ತೆಗಳನ್ನು ಮೀಸಲು ಅರಣ್ಯದ ಒಳಗೆ ನಿರ್ಮಿಸಲಾಗಿದೆ. ಇದು ಅರಣ್ಯ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ತಿಳಿಸಲಾಗಿದೆ.
ಆಂಧ್ರ ಗಣಿ ಇಲಾಖೆ ಓಎಂಸಿಗೆ ಗುತ್ತಿಗೆ ನೀಡಿರುವ ಮತ್ತೊಂದು 39.5 ಹೆಕ್ಟೇರ್ ಗಣಿಗಾರಿಕೆ ಭೂಮಿ ಅರಣ್ಯ ಪ್ರದೇಶವಾಗಿದ್ದು ಇದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಪಡೆಯುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.

ರೆಡ್ಡಿ ಸಹೋದರರಿಗೆ ಸೇರಿದ ಅನಂತಪುರ ಮೈನಿಂಗ್ ಕಾರ್ಪೊರೇಷನ್‌ನ 6.5 ಹೆಕ್ಟೇರ್ ಗಣಿಗಾರಿಕೆ ಗುತ್ತಿಗೆಯನ್ನು ಒಪ್ಪಂದ ಅಂತ್ಯಗೊಂಡ 17 ವರ್ಷಗಳ ಬಳಿಕ ವಿಸ್ತರಿಸಲಾಗಿದೆ. ಇಲ್ಲಿಂದ ಅರಣ್ಯ ಇಲಾಖೆ ಅನುಮತಿ ಪಡೆಯದೆ 11ಲಕ್ಷ ಟನ್ ಅದಿರು ಸಾಗಣೆ ಮಾಡಲಾಗಿದೆ. ಬೇರೆ ಪ್ರದೇಶದ ಪರವಾನಗಿ ಬಳಸಿ ಈ ಅದಿರನ್ನು ಸಾಗಿಸಲಾಗಿದೆ ಎಂದು ದೂರಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಶಾಮೀಲಾಗದೆ ಇಷ್ಟೆಲ್ಲ ಅಕ್ರಮಗಳು ನಡೆಯಲು ಸಾಧ್ಯವೇ ಇಲ್ಲ ಎಂದು ವರದಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT