ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆವಿನ್ಯೂ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಇಲ್ಲ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕ್ಷೆ ಮಂಜೂರಾತಿ ಪಡೆದ ಬಳಿಕ ನಿಯಮ ಉಲ್ಲಂಘಿಸುವುದು ಒಂದೆಡೆಯಾದರೆ, ರೆವಿನ್ಯೂ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣ ಪತ್ರ ಯಾವುದನ್ನೂ ಪಡೆಯದೇ ಲಕ್ಷಾಂತರ ಕಟ್ಟಡಗಳು ನಿರ್ಮಾಣವಾಗಿವೆ. ಇಂದಿಗೂ ನಿರ್ಮಾಣವಾಗುತ್ತಿವೆ! ಇದಕ್ಕೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಭೂಪರಿವರ್ತನೆಯಾದ ಹಾಗೂ ಭೂಪರಿವರ್ತನೆಯಾಗದ ರೆವಿನ್ಯೂ ಪ್ರದೇಶಗಳು ದೊಡ್ಡ ಪ್ರಮಾಣದಲ್ಲಿವೆ. ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲೇ ಇಂತಹ ಪ್ರದೇಶಗಳು ಹೆಚ್ಚಾಗಿವೆ. ಈ ಪ್ರದೇಶಗಳಲ್ಲಿ ಖಾತಾ, ನಕ್ಷೆ ಮಂಜೂರಾತಿ ಇಲ್ಲದೆಯೂ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆ ವಿಫಲವಾಗಿದೆ.

ಪಾಲಿಕೆಯು ಅಭಿವೃದ್ಧಿ ಶುಲ್ಕ ಸಂಗ್ರಹಣೆಗೆ ನಿಯಮಾವಳಿ ರೂಪಿಸುವುದಾಗಿ 2001ರಲ್ಲಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ 2001ರಿಂದ 2007ರವರೆಗೆ ಈ ಶುಲ್ಕವನ್ನೇ ಸಂಗ್ರಹಿಸಲಿಲ್ಲ. ಆರು ವರ್ಷಗಳ ಬಳಿಕ ಪರಿವರ್ತನಾ ಶುಲ್ಕ ಸಂಗ್ರಹಿಸಿ ಖಾತಾ ನೀಡುವಂತೆ 2007ರ ನವೆಂಬರ್ 7ರಲ್ಲಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.

ಇದನ್ನು ಪ್ರಶ್ನಿಸಿ ಸಂಸ್ಥೆಯೊಂದು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ, ಶುಲ್ಕ ಸಂಗ್ರಹಣೆಗೆ ನಿಯಮ ರೂಪಿಸದ ಕಾರಣ ಆಯುಕ್ತರ ಸುತ್ತೋಲೆಯನ್ನು ರದ್ದುಪಡಿಸಿರುವುದಾಗಿ 2008ರ ಜುಲೈ 21ರಂದು ಹೈಕೋರ್ಟ್ ಆದೇಶ ನೀಡಿತು. ಅದರಂತೆ ಕರ್ನಾಟಕ ಪೌರ ನಿಗಮಗಳ ಕಾಯ್ದೆಯ 466 (ಬಿ) ನಿಯಮದನ್ವಯ ಪಾಲಿಕೆ ನಿಯಮಗಳನ್ನು ರೂಪಿಸಿ 2010ರ ಫೆಬ್ರುವರಿ 3ರಂದು ಸರ್ಕಾರಕ್ಕೆ ಸಲ್ಲಿಸಿತು. ಬಳಿಕ ಅನುಮೋದನೆ ಪಡೆಯಿತು.

ನಾಲ್ಕು ವರ್ಷ ಅಂತರ:

ಆ ಬಳಿಕ ಆಸ್ತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಸುಧಾರಣಾ ಶುಲ್ಕ ದರ ನಿಗದಿಪಡಿಸುವ ಪ್ರಸ್ತಾವಕ್ಕೆ 2010ರ ಡಿಸೆಂಬರ್‌ನಲ್ಲಿ ನಡೆದ ಕೌನ್ಸಿಲ್ ಸಭೆ ಅನುಮೋದನೆ ನೀಡಿತು. ಆನಂತರ ಸುಧಾರಣಾ ಶುಲ್ಕ ಸಂಗ್ರಹಿಸಿ ಖಾತಾ ಪಡೆಯುವ ಪ್ರಕ್ರಿಯೆ ಆರಂಭವಾಯಿತು. ಆದರೆ 2007ರಿಂದ 2010ರ ಡಿಸೆಂಬರ್‌ವರೆಗಿನ ಅವಧಿಯಲ್ಲಿ ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡ ಅಕ್ರಮ ಕಟ್ಟಡಗಳ ಬಗ್ಗೆ ಪಾಲಿಕೆ ಬಳಿ ಲೆಕ್ಕವಿಲ್ಲ.

ಭೂಪರಿವರ್ತನೆಯಾಗದ ಆಸ್ತಿಗಳು:
ಕೃಷಿಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಅಕ್ರಮವಾಗಿ ಬಳಸಿಕೊಂಡವರು ಭೂಪರಿವರ್ತನೆ ಮಾಡಿಕೊಳ್ಳುವ ಪ್ರಕ್ರಿಯೆಗೆ 2010ರ ಸೆಪ್ಟೆಂಬರ್‌ವರೆಗೆ ಸರ್ಕಾರ ಗಡುವು ನೀಡಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರಿಗೆ ಈ ಬಗ್ಗೆ ತಿಳಿಸುವ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿಲ್ಲ.

ಗಡುವು ಮುಗಿದ ಬಳಿಕ ಎಚ್ಚೆತ್ತುಕೊಂಡ ಪಾಲಿಕೆ, ಭೂ ಪರಿವರ್ತನೆಯಾಗದ ರೆವಿನ್ಯೂ ಕಟ್ಟಡ, ನಿವೇಶನ ಮಾಲೀಕರಿಂದಲೂ ಪರಿವರ್ತನಾ ಶುಲ್ಕ ಹಾಗೂ ಸುಧಾರಣಾ ಶುಲ್ಕ ಸಂಗ್ರಹಿಸಿ ಖಾತಾ ನೀಡುವ ಸಂಬಂಧ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿತು.

ಈ ಪ್ರಸ್ತಾವವು ಹಲವು ಹಂತಗಳನ್ನು ದಾಟಿ ಇದೀಗ ನಗರಾಭಿವೃದ್ಧಿ ಇಲಾಖೆಗೆ ತಲುಪಿದೆ. ಸದ್ಯದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಅವಧಿಯಲ್ಲೂ ರೆವಿನ್ಯೂ ನಿವೇಶನಗಳಲ್ಲಿ ಸಾಕಷ್ಟು ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿವೆ.

ನಾಲ್ಕು ವರ್ಷಗಳಷ್ಟು ದೀರ್ಘಾವಧಿವರೆಗೆ ಸುಧಾರಣಾ ಶುಲ್ಕವನ್ನು ಸಂಗ್ರಹಿಸಿ ಖಾತಾ ಪಡೆಯುವ ವ್ಯವಸ್ಥೆ ಇರಲಿಲ್ಲ. ಇನ್ನೊಂದೆಡೆ ಸರ್ಕಾರ ಕೂಡ ಭೂಪರಿವರ್ತನಾ ಶುಲ್ಕ ಹಾಗೂ ಸುಧಾರಣಾ ಶುಲ್ಕ ಸಂಗ್ರಹಿಸಿ ಖಾತಾ ವಿತರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳದೆ ವಿಳಂಬ ಮಾಡುತ್ತಿದೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂಬುದು ರೆವಿನ್ಯೂ ನಿವೇಶನದಾರರ ದೂರು.

ಈ ನಡುವೆ ಪಾಲಿಕೆ ಭೂಪರಿವರ್ತನೆಯಾಗದ ನಿವೇಶನದಾರರಿಗೆ `ಬಿ~ ಖಾತಾ ನೀಡುವ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಲು ಮುಂದಾಗಿದೆ. ಈ ಪ್ರದೇಶಗಳಲ್ಲಿ ಮೂಲ ಸೌಕರ್ಯಕ್ಕೆ ಸಾಕಷ್ಟು ಹಣ ವೆಚ್ಚ ಮಾಡಿರುವುದರಿಂದ ಭೂ ಪರಿವರ್ತನೆಯಾಗದಿದ್ದರೂ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂಬುದು ಪಾಲಿಕೆಯ ವಾದ.

ಸಂಪೂರ್ಣ ಅಕ್ರಮ ಕಟ್ಟಡ:
`ಬಿ~ ಖಾತಾವನ್ನೇ ನೆಪ ಮಾಡಿಕೊಂಡು ಸಾಕಷ್ಟು ಆಸ್ತಿದಾರರು ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಈ ಕಟ್ಟಡಗಳಿಗೆ ಪಾಲಿಕೆ ನಕ್ಷೆ ಮಂಜೂರಾತಿ ನೀಡುವುದಿಲ್ಲ. ಹಾಗಿದ್ದರೂ ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ವಾಸದ ಮನೆಗಳು ಮಾತ್ರವಲ್ಲ, ವಾಣಿಜ್ಯ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ತಲೆಯೆತ್ತುತ್ತಿವೆ.

ಈ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ಅವಕಾಶವಿಲ್ಲದ ಕಾರಣ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇದಕ್ಕೆ ಅಡ್ಡಿಪಡಿಸಬಹುದು. ಕಾನೂನು ಪ್ರಕಾರ ನೋಟಿಸ್ ನೀಡಿ ಕ್ರಮ ಜರುಗಿಸಬಹುದು. ಆದರೆ ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವಿದೆ.

ನಿವೇಶನದಾರರಿಗೆ ಕಿರಿಕಿರಿ:
ರೆವಿನ್ಯೂ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗುವ ಕಟ್ಟಡಗಳನ್ನು ತಡೆಗಟ್ಟಲು ಪಾಲಿಕೆ ಬಿಗಿ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಕಿರಿಯ ಎಂಜಿನಿಯರ್ ಸ್ಥಳಕ್ಕೆ ತೆರಳಿ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುವುದು, ಒಂದಷ್ಟು ಹಣ ಪಡೆದು ಸುಮ್ಮನಾಗುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ಈ ನಡುವೆ ರೆವಿನ್ಯೂ ನಿವೇಶನದಾರರು ಅಧಿಕಾರಿಗಳ ನಡುವೆ ಸಂಘರ್ಷ ನಡೆಯುವ ಸ್ಥಿತಿ ಕೂಡ ಇದೆ.

`ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ನಿವೇಶನದಾರರು ಜಗಳ ತೆಗೆಯುತ್ತಾರೆ. ಈಗಲೇ ಭೂಪರಿವರ್ತನಾ ಶುಲ್ಕ ಹಾಗೂ ಸುಧಾರಣಾ ಶುಲ್ಕ ಪಾವತಿಸಲು ಸಿದ್ಧರಿದ್ದೇವೆ ಕಟ್ಟಿಸಿಕೊಳ್ಳಿ. ಎಷ್ಟು ಕಾಲ ಹೀಗೆ ಸರ್ಕಾರದ ಆದೇಶ ನಿರೀಕ್ಷಿಸಿ ಕಟ್ಟಡ ನಿರ್ಮಾಣ ಮುಂದೂಡುವುದು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ನಮ್ಮ ಬಳಿ ಉತ್ತರವಿಲ್ಲ~ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರೊಬ್ಬರು ತಿಳಿಸಿದರು.
- ಮುಂದುವರೆಯಲಿದೆ

3 ಲಕ್ಷ ಅಕ್ರಮ ಕಟ್ಟಡ!
`ಬಿಬಿಎಂಪಿ ವ್ಯಾಪ್ತಿಯಲ್ಲಿ ರೆವಿನ್ಯೂ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಹಾಗೂ ನಿರ್ಮಾಣವಾಗುತ್ತಿರುವ ಕಟ್ಟಡಗಳ ಸಂಖ್ಯೆ ಸುಮಾರು ಮೂರು ಲಕ್ಷ ಎಂಬ ಅಂದಾಜು ಇದೆ. ಆಸ್ತಿ ತೆರಿಗೆ ಸಂಗ್ರಹಣೆ ಉದ್ದೇಶಕ್ಕಾಗಿ `ಬಿ~ ಖಾತಾ ನೀಡಲಾಗುತ್ತಿದೆ. ಆದರೆ ಸಾಕಷ್ಟು ರೆವಿನ್ಯೂ ನಿವೇಶನದಾರರು ಈ ಖಾತಾವನ್ನೂ ಪಡೆಯದ ಕಾರಣ ಆದಾಯವೂ ಬರುತ್ತಿಲ್ಲ~ ಎಂದು ಪಾಲಿಕೆಯ ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

`ಈ ಲಕ್ಷಾಂತರ ಕಟ್ಟಡಗಳು `ಅಕ್ರಮ- ಸಕ್ರಮ~ ಯೋಜನೆ ಜಾರಿಯಾದ ಬಳಿಕ ಕಾನೂನುಬದ್ಧವಾಗಲಿವೆ. ಇದರಿಂದ ಅಕ್ರಮ ನಡೆಸಿದರೂ ಒಂದಲ್ಲ ಒಂದು ದಿನ ಸಕ್ರಮವಾಗಲಿದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೇ ನಕ್ಷೆ ಮಂಜೂರಾತಿ, ರಸ್ತೆ ಅಗೆತದ ಶುಲ್ಕಗಳು ಪಾಲಿಕೆಯ ಕೈತಪ್ಪಲಿವೆ. ಅಂತಿಮವಾಗಿ ನಗರ ವಿರೂಪವಾಗಲಿದೆ~ ಎಂದರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT