ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್, ಗಣಿಗಾರಿಕೆಗೆ ಕಡಿವಾಣ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಸೂಕ್ಷ್ಮ ಪರಿಸರ ವಲಯದ ಪಟ್ಟಿಗೆ ಸೇರಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಅಧಿಕೃತವಾಗಿ ಆದೇಶ ಹೊರಡಿಸಿದೆ.

2011ರ ಸೆಪ್ಟೆಂಬರ್‌ನಲ್ಲಿ ಸೂಕ್ಷ್ಮ ಪರಿಸರ ವಲಯದ ಘೋಷಣೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು. ಇದಕ್ಕೆ ಉದ್ಯಾನದ ವ್ಯಾಪ್ತಿಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು.  ಈ ವಲಯದ ಘೋಷಣೆಯಿಂದಾಗುವ ಪ್ರಯೋಜನ ಕುರಿತು ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳೀಯಶಾಸಕರು ಹಾಗೂ ವನ್ಯಜೀವಿ ತಜ್ಞರು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಅರಣ್ಯ ಇಲಾಖೆಯಿಂದ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಸೂಕ್ಷ್ಮ ಪರಿಸರ ವಲಯದ ಪಟ್ಟಿಗೆ ಬಂಡೀಪುರ ಅಧಿಕೃತವಾಗಿ ಸೇರ್ಪಡೆಯಾಗಿರುವ ಬಗ್ಗೆ ಕೇಂದ್ರದ ಗೆಜೆಟ್‌ನಲ್ಲಿ ಅ. 4ರಂದು ಪ್ರಕಟಿಸಲಾಗಿದೆ. ಆ ಮೂಲಕ ದೇಶದಲ್ಲಿಯೇ ಈ ಪಟ್ಟಿಗೆ ಸೇರ್ಪಡೆಗೊಂಡ ಮೊದಲ ಹುಲಿ ರಕ್ಷಿತಾರಣ್ಯ ಎಂಬ ಹೆಗ್ಗಳಿಕೆಗೆ ಬಂಡೀಪುರ ಪಾತ್ರವಾಗಿದೆ.

ಈ ಉದ್ಯಾನವು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ನಂಜನಗೂಡು ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿಗೆ ಒಳಪಟ್ಟಿದೆ. ಪ್ರಸ್ತುತ 912.04 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಹುಲಿಗಳ ಸಾಂದ್ರತೆಯೂ ಹೆಚ್ಚಿದೆ.
 
ನೀಲಗಿರಿ ಜೀವವೈವಿಧ್ಯ ತಾಣವೂ ಉದ್ಯಾನದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ಈ ಪ್ರದೇಶದಲ್ಲಿ ಆನೆಗಳ ಸಾಂದ್ರತೆಯೂ ಹೆಚ್ಚಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪ್ರಕಟಿಸಿರುವ ಅಧಿಸೂಚನೆಯ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದ್ದು, ಉದ್ಯಾನದ ವ್ಯಾಪ್ತಿಯ 123 ಗ್ರಾಮಗಳ 479.18 ಚ.ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯದ ಪಟ್ಟಿಗೆ ಸೇರಿಸಲಾಗಿದೆ.

ಅಕ್ರಮಕ್ಕೆ ಕಡಿವಾಣ: ಪರಿಸರ ಪ್ರವಾಸೋದ್ಯಮದ ನೆಪದಲ್ಲಿ ಉದ್ಯಾನದ ಸುತ್ತಮುತ್ತ ರೆಸಾರ್ಟ್, ಹೋಟೆಲ್‌ಗಳ ಹಾವಳಿ ಹೆಚ್ಚುತ್ತಿತ್ತು. ಇದರಿಂದ ವನ್ಯಜೀವಿಗಳ ಸ್ವಚ್ಛಂದ ಬದುಕಿಗೂ ತೊಂದರೆಯಾಗುತ್ತಿತ್ತು.
ಆನೆ ಪಥದಲ್ಲಿಯೂ ರೆಸಾರ್ಟ್ ಹಾವಳಿ ಉಲ್ಬಣಿಸಿತ್ತು. ಇದರಿಂದ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚುತ್ತಿತ್ತು. ಈಗ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

`ಸೂಕ್ಷ್ಮ ಪರಿಸರ ವಲಯದ ಘೋಷಣೆಯಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗೆ ಧಕ್ಕೆಯಾಗುವುದಿಲ್ಲ. ಭೂಸ್ವಾಧೀನದ ಆತಂಕವೂ ಇರುವುದಿಲ್ಲ. ಇದರಿಂದ ಜನರು ಹಾಗೂ ವನ್ಯಜೀವಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ~ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ `ಪ್ರಜಾವಾಣಿ~ಗೆ ತಿಳಿಸಿದರು.

ಕೃಷಿಕರಿಗೆ ಅನುಕೂಲ

ಸೂಕ್ಷ್ಮ ಪರಿಸರ ವಲಯದ ಘೋಷಣೆಯಿಂದಾಗಿ ಸ್ಥಳೀಯರ ಜಮೀನಿನ ಸಂರಕ್ಷಣೆ ಹಾಗೂ ಪರಿಸರ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಅವಕಾಶ ಸಿಕ್ಕಿದಂತಾಗಿದೆ.

ಪ್ರಸ್ತುತ ವಲಯದ ವ್ಯಾಪ್ತಿಯ ಗ್ರಾಮಸ್ಥರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಸಾವಯವ ಕೃಷಿ, ಮಳೆನೀರು ಸಂಗ್ರಹದಂತಹ ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.


ಗಣಿಗಾರಿಕೆ, ಕೈಗಾರಿಕೆಗೆ ನಿರ್ಬಂಧ
ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಜಲ್ಲಿಕ್ರಷರ್, ಕೈಗಾರಿಕೆ, ವಾಣಿಜ್ಯ ಹೋಟೆಲ್, ಸಾಮಿಲ್ ಸ್ಥಾಪಿಸುವಂತಿಲ್ಲ. ಕಂಪೆನಿಗಳು ಬಹು ಉದ್ದೇಶಿತ ಕೃಷಿ, ತೋಟಗಾರಿಕೆ ಮಾಡುವಂತಿಲ್ಲ. ಮಾರಾಟದ ಉದ್ದೇಶಕ್ಕಾಗಿ ಅಂತರ್ಜಲ ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ.

ಜಲ ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆ ನಿಷೇಧಿಸಲಾಗಿದೆ. ಪ್ರವಾಸಿಗರು ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ವಾಣಿಜ್ಯ ಉದ್ದೇಶವಿಟ್ಟುಕೊಂಡು ಕಂಪೆನಿಗಳು ಕೋಳಿ, ಜಾನುವಾರು ಸಾಕಾಣಿಕೆ ಮಾಡುವಂತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT