ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸ್ಟಾಗೆ ನಾಲ್ಕನೇ ಸ್ಥಾನ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮನಾಮ (ಎಎಫ್‌ಪಿ/ ಪಿಟಿಐ): ಸಹಾರಾ ಫೋರ್ಸ್ ಇಂಡಿಯಾ ತಂಡದ ಪೌಲ್ ಡಿ ರೆಸ್ಟಾ ಭಾನುವಾರ ಇಲ್ಲಿ ನಡೆದ ಬಹರೇನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು 12 ಪಾಯಿಂಟ್ ಗಿಟ್ಟಿಸಿಕೊಂಡರು.

ಪ್ರಸಕ್ತ ಋತುವಿನಲ್ಲಿ ಫೋರ್ಸ್ ಇಂಡಿಯಾ ತಂಡದ ಚಾಲಕ ತೋರಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಡಿ ರೆಸ್ಟಾ ಐದನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಅವರು ಕೇವಲ 2.2 ಸೆಕೆಂಡ್‌ಗಳ ಅಂತರದಲ್ಲಿ ಮೂರನೇ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡರು.

ಈ ತಂಡದ ಇನ್ನೊಬ್ಬ ಚಾಲಕ ಅಡ್ರಿಯಾನ್ ಸುಟಿಲ್ ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಆರನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ಅವರು 13ನೇ ಸ್ಥಾನ ಪಡೆದರು. ಮೊದಲ ಲ್ಯಾಪ್‌ನಲ್ಲಿ ಸುಟಿಲ್ ಮತ್ತು ಫೆರಾರಿ ತಂಡದ ಫಿಲಿಪ್ ಮಾಸಾ ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತು. ಇದರಿಂದ ಅವರು ಚೇತರಿಸಿಕೊಳ್ಳಲು ವಿಫಲರಾದರು.

ವೆಟೆಲ್‌ಗೆ ಅಗ್ರಸ್ಥಾನ: ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಈ ರೇಸ್ ಗೆದ್ದುಕೊಂಡರು. ಎರಡನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ಜರ್ಮನಿಯ ಚಾಲಕ 57 ಲ್ಯಾಪ್‌ಗಳ ಸ್ಪರ್ಧೆ (ಒಟ್ಟು 308 ಕಿ.ಮೀ) ಪೂರೈಸಲು ಒಂದು ಗಂಟೆ 36 ನಿಮಿಷ 00.498 ಸೆಕೆಂಡ್‌ಗಳನ್ನು ತೆಗೆದುಕೊಂಡರು.

ಇದಕ್ಕಿಂತ 9.1 ಸೆಕೆಂಡ್‌ಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡ ಲೋಟಸ್ ತಂಡದ ಕಿಮಿ ರೈಕೊನೆನ್ ಎರಡನೇ ಸ್ಥಾನ ಪಡೆದರೆ, ಇದೇ ತಂಡದ ರೊಮೇನ್ ಗ್ರಾಸ್‌ಜೀನ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. 11ನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ಗ್ರಾಸ್‌ಜೀನ್ ಬಳಿಕ ಅದ್ಭುತ ಪ್ರದರ್ಶನ ತೋರಿದರು.

ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್, ಮೆಕ್‌ಲಾರೆನ್ ತಂಡದ ಸೆರ್ಜಿಯೊ ಪೆರೆಜ್, ರೆಡ್‌ಬುಲ್ ತಂಡದ ಮಾರ್ಕ್ ವೆಬರ್, ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ, ಮರ್ಸಿಡಿಸ್ ತಂಡದ ನಿಕೊ ರೋಸ್‌ಬರ್ಗ್ ಮತ್ತು ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ ಕ್ರಮವಾಗಿ ಐದರಿಂದ ಹತ್ತರವರೆಗಿನ ಸ್ಥಾನ ಪಡೆದರು.

ನಿಕೊ ರೋರ್ಸ್‌ಬರ್ಗ್ `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸಿದ್ದರು. ಆದರೆ ಕಾರಿನ ಹಿಂದಿನ ಟಯರ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಹಿನ್ನಡೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT