ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಕೇಳುಗರ ಸಂಖ್ಯೆ ವೃದ್ಧಿ: ಕಾಕಡೆ

Last Updated 25 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ವಿಜಾಪುರ: ಸಮೂಹ ಮಾಧ್ಯಮಗಳ ಸಂಖ್ಯೆ ಹೆಚ್ಚಾದಂತೆ ಆಕಾಶವಾಣಿಯ ಪ್ರಭಾವ ಕುಂಠಿತಗೊಳ್ಳುತ್ತದೆ ಎಂಬ ಆತಂಕದ ನಡುವೆಯೂ ರೇಡಿಯೊ ಕೇಳುಗರ ಸಂಖ್ಯೆ ವೃದ್ಧಿಸುತ್ತಿದೆ ಎಂದು ಮಹಿಳಾ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಹೇಳಿದರು.

ವಿಜಾಪುರ ಆಕಾಶವಾಣಿ ಕೇಂದ್ರದಿಂದ ಇತ್ತೀಚೆಗೆ ಇಲ್ಲಿ ಹಮ್ಮಿಕೊಂಡಿದ್ದ `ಆಕಾಶವಾಣಿ ಹಬ್ಬ~ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಭರಾಟೆ ಮಧ್ಯೆಯೂ ಶ್ರವಣ ಮಾಧ್ಯಮ ಆಕಾಶವಾಣಿ ತನ್ನತನ ಉಳಿಸಿಕೊಂಡಿರುವುದು ಗಮನಾರ್ಹ. ಎಫ್.ಎಂ. ಕೇಂದ್ರಗಳ ಸ್ಥಾಪನೆಯಿಂದಾಗಿ ಪ್ರಸಾರ ಗುಣಮಟ್ಟ ಸುಧಾರಣೆಯಾಗಿದೆ. ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಮಾಹಿತಿ ಪ್ರಸಾರ ಮಾಡುತ್ತಿರುವ ಎಫ್.ಎಂ. ಕೇಂದ್ರಗಳು ನಗರವಾಸಿಗಳ ದೈನಂದಿನ ಬದುಕಿನ ಸಂಗಾತಿಯಾಗಿವೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ ಮಾತನಾಡಿ, ಆಕಾಶವಾಣಿ ಹಬ್ಬವು ಸ್ಥಳೀಯ ಸಂಗೀತ ಕಲಾವಿದರಿಗೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಜಾಪುರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಬಸವರಾಜ ಜಡಿ, ಆಕಾಶವಾಣಿಯು ಮೊದಲಿನಿಂದಲೂ ಕಲಾವಿದರನ್ನು ಪ್ರೊತ್ಸಾಹಿಸುತ್ತಿದೆ. ಸಂಘ-ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಹೊಸದಾಗಿ ಆಯ್ಕೆಗೊಂಡಿರುವ ಆಕಾಶವಾಣಿ ಕೇಂದ್ರದ ಅರೆಕಾಲಿಕ ಉದ್ಘೋಷಕರಿಗೆ `ವಾಣಿ~ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮ ನಿರ್ವಾಹಕ ಆರ್.ಎನ್. ಶಿರಬಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರ್ವಾಹಕ ಎಂ.ಎಸ್. ಕೆಂಡದಮಠ,  ಪ್ರಸಾರ ನಿರ್ವಹಣಾಧಿಕಾರಿ ಗುರುನಾಥ ಕಡಬೂರ, ತಾಂತ್ರಿಕ ವಿಭಾಗದ ಎಂ.ಎಂ. ಗುತ್ತಿ, ಬಿ.ಎಫ್. ಹನುಮಣ್ಣವರ, ಬಸವರಾಜ ವಂಟಗೋಡಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀದೇವಿ ಭಂಡಾರಕರ ಪ್ರಾರ್ಥಿಸಿದರು. ಕೇಂದ್ರದ ತಾಂತ್ರಿಕ ವಿಭಾಗದ ಮುಖ್ಯಸ್ಥ ಕಬೀರ ಲಮಾಣಿ ಸ್ವಾಗತಿಸಿದರು. ಮಹಾನಂದ ಬೋಳಿಶೆಟ್ಟಿ ಮನೋಹರ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಭಾವ ಸಂಗಮ: ಆಕಾಶವಾಣಿ ಹಬ್ಬದ ಅಂಗವಾಗಿ ನಡೆದ ಭಾವ ಸಂಗಮ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ವಚನ, ದಾಸರ ಪದ, ಭಕ್ತಿಗೀತೆ, ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.

ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದ ಪಂಡಿತ ಕೈವಲ್ಯಕುಮಾರ ಗುರವ ಅವರು ಪ್ರಸ್ತುತ ಪಡಿಸಿದ ಹಿಂದುಸ್ತಾನಿ ಗಾಯನವು ಕೇಳುಗರನ್ನು ಮಂತ್ರಮುದ್ಧಗೊಳಿಸಿತು.

ಲತಾ ಜಹಗೀರದಾರ, ಶಶಿಕಲಾ ಕುಲಹಳ್ಳಿ, ಗೀತಾ ಕುಲಕರ್ಣಿ, ಬಸವರಾಜ ಹಿರೇಮಠ, ಶ್ರೀದೇವಿ ಭಂಡಾರಕರ ಸಂಗೀತ ಕಾರ್ಯಕ್ರಮ ನೀಡಿದರು. ಅಳಗಿ ಜಗನ್ನಾಥ ಅವರು ತಬಲಾ, ಪರಶುರಾಮ ಕಟ್ಟಿ ಹಾರ್ಮೋನಿಯಂ ಸಾಥ್ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT