ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮಾ ವಸ್ತ್ರಲೋಕ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಫ್ಯಾಷನ್ ಜಗತ್ತು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ನಾವೂ ಕ್ರಿಯಾತ್ಮಕವಾಗಿ ಬದಲಾಗುವುದೇ ಈ ಕ್ಷೇತ್ರದಲ್ಲಿನ ಸವಾಲು' ಎನ್ನುತ್ತಾ ಇತ್ತೀಚೆಗೆ ನಗರದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ತಮ್ಮ ವಸ್ತ್ರ ವಿನ್ಯಾಸದ ಕುರಿತು ಮಾತು ಹಂಚಿಕೊಂಡರು ವಸ್ತ್ರವಿನ್ಯಾಸಕಿ ರೇಷ್ಮಾ ಕುನ್ಹಿ.

ನಿಮ್ಮ ಪ್ರಕಾರ ಫ್ಯಾಷನ್ ಎಂದರೆ ಏನು? ವಸ್ತ್ರ ವಿನ್ಯಾಸ ಕ್ಷೇತ್ರ ಭಾರತದಲ್ಲಿ ಹೇಗಿದೆ?
ನಾವು ನಮ್ಮ ವಸ್ತ್ರದಲ್ಲಿ ಎಷ್ಟು ಕ್ರಿಯಾಶೀಲರಾಗಿದ್ದೇವೆ ಎಂದು ತೋರುವುದೇ ಫ್ಯಾಷನ್. ಅದು ಆಭರಣದ ಮೂಲಕವೂ ಗೋಚರಿಸುತ್ತದೆ. ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ವಸ್ತ್ರವಿನ್ಯಾಸದಲ್ಲಿ ನಮ್ಮ ದೇಶ ಸ್ವಲ್ಪ ಹಿಂದಿತ್ತು. ಆದರೆ ಈಗೀಗ ಇಲ್ಲೂ ವಸ್ತ್ರವಿನ್ಯಾಸಕರು ಹೆಚ್ಚುತ್ತಿರುವುದು ಸಂತಸದ ಸಂಗತಿ.

ವಸ್ತ್ರ ವಿನ್ಯಾಸಕರಾಗಲು ಪ್ರೇರಣೆ?
ನಾನು ಬಿ.ಕಾಂ. ಪದವೀಧರೆ. ನನ್ನನ್ನು ಸೆಳೆದದ್ದು ವಸ್ತ್ರವಿನ್ಯಾಸ ಕ್ಷೇತ್ರ. ಆದ್ದರಿಂದ ಡಿಪ್ಲೊಮಾ ಇನ್ ಡಿಸೈನ್ ಪೂರೈಸಿದೆ. ಮೂಲತಃ ಮುಂಬೈನವಳಾದರೂ ಕಳೆದ ಎಂಟು ವರ್ಷಗಳಿಂದ ಯುರೋಪ್, ಹಾಂಕಾಂಗ್‌ನಲ್ಲಿ ವಾಸವಿದ್ದೆ. ಸದ್ಯಕ್ಕೆ ಎರಡೂವರೆ ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದೇನೆ. 2000ದಿಂದಲೇ ವಿನ್ಯಾಸ ಕ್ಷೇತ್ರದಲ್ಲಿ ಗುರುತಿಸಿಕೊಂಡೆ.

ವಸ್ತ್ರ ವಿನ್ಯಾಸದಲ್ಲಿನ ಸವಾಲುಗಳೇನು?
ವಸ್ತ್ರವನ್ನು ಎಲ್ಲರಿಗೂ ಆಕರ್ಷಿತವಾಗುವಂತೆ ವಿನ್ಯಾಸಗೊಳಿಸುವುದೇ ಇಲ್ಲಿನ ಸವಾಲು. ಎಲ್ಲರ ಕಣ್ಣೂ ನಮ್ಮ ವಸ್ತ್ರದತ್ತ ನೆಡುವಂತೆ ಮಾಡುವುದರಲ್ಲೇ ವಸ್ತ್ರವಿನ್ಯಾಸದ ಮಹತ್ವ ಇರುವುದು. ಅಂತಹ ಇನ್ನೂ ನೂರಾರು ವಸ್ತ್ರಗಳನ್ನು ಹೊರತರಬೇಕೆಂಬುದೇ ನನ್ನ ಬಯಕೆ.

ಇದುವರೆಗೂ ಎಷ್ಟು ಡಿಸೈನಿಂಗ್ ಶೋಗಳನ್ನು ನೀಡಿದ್ದೀರಿ?
ದೇಶ ವಿದೇಶಗಳಲ್ಲಿ ಹಲವಾರು ಶೋ ನೀಡಿದ್ದೇನೆ. ಬೆಂಗಳೂರಿನಲ್ಲಿ ಆರರಿಂದ ಏಳು ಶೋ ನೀಡಿದ್ದೇನೆ. ಹೈದರಾಬಾದ್, ಬೆಂಗಳೂರು, ಮುಂಬೈ, ಅಮೆರಿಕದಲ್ಲೂ ನನ್ನ ವಸ್ತ್ರವಿನ್ಯಾಸಗಳು ಇವೆ.

ವಸ್ತ್ರವಿನ್ಯಾಸದಲ್ಲಿ ನಿಮ್ಮ ಥೀಮ್?
ನನಗೆ ಇಂಡೋ-ವೆಸ್ಟರ್ನ್ ಶೈಲಿಯೆಂದರೆ ತುಂಬಾ ಇಷ್ಟ. ಏಕೆಂದರೆ ಭಾರತೀಯರು ಪೂರ್ಣ ಪಾಶ್ಚಾತ್ಯ ಶೈಲಿಯನ್ನೂ ಇಷ್ಟಪಡುವುದಿಲ್ಲ. ಸಂಪೂರ್ಣ ಭಾರತೀಯ ಸಾಂಪ್ರದಾಯಿಕ ಶೈಲಿಯನ್ನೂ ಒಪ್ಪುವುದಿಲ್ಲ. ಆದ್ದರಿಂದ ಈ ಭಾರತೀಯ- ಪಾಶ್ಚಾತ್ಯ ಎರಡರ ಮಿಶ್ರಣ ಶೈಲಿ ವಸ್ತ್ರಗಳು ಆಪ್ತವೆನಿಸುತ್ತವೆ.

ಯಾವ ರೀತಿಯ ವಸ್ತ್ರಗಳನ್ನು ವಿನ್ಯಾಸಗೊಳಿಸುತ್ತೀರಾ? ವಿನ್ಯಾಸದಲ್ಲಿ ಬಹು ಮುಖ್ಯ ಅಂಶವೇನು?
ಗೌನ್, ಸೀರೆ, ಲೆಹಂಗಾ, ಸಲ್ವಾರ್, ಸ್ಕರ್ಟ್ ಹೀಗೆ ಕಾಲಕ್ಕೆ ತಕ್ಕಂತೆ ವಸ್ತ್ರಗಳಲ್ಲಿ ವಿಭಿನ್ನ ಕಲೆಯನ್ನು ಮೂಡಿಸುತ್ತೇನೆ. ವಿನ್ಯಾಸದಲ್ಲಿ ಬಹು ಮುಖ್ಯ ಅಂಶವೆಂದರೆ ಬಣ್ಣ ಸಂಯೋಜನೆ. ಡಿಸೈನರ್ ಆದ ಮೇಲೆ ಎಲ್ಲ ಬಣ್ಣದಲ್ಲೂ ಆಟವಾಡಬೇಕು. ಆದರೆ ನನಗೆ ಕಪ್ಪು ಬಿಳುಪು ಸಂಯೋಜನೆಯನ್ನು ವಸ್ತ್ರಗಳಲ್ಲಿ ಮೂಡಿಸುವುದು ಬಲು ಇಷ್ಟ.

ನಿಮ್ಮ ಪ್ರಕಾರ ಭಾರತೀಯರಿಗೆ ಒಪ್ಪುವಂತಹ ಉಡುಪು? ವಸ್ತ್ರಗಳಲ್ಲಿ ನಿಮ್ಮ ಪರಿಕಲ್ಪನೆ?
ಕಪ್ಪು ಬಣ್ಣದ ಸಲ್ವಾರ್, ಸೀರೆ, ಜೀನ್ಸ್, ಲೆಗ್ಗಿನ್ಸ್, ಇವುಗಳು ಭಾರತೀಯ ಯುವತಿಯರ ಬಳಿ ಇರಲೇಬೇಕಾದ ಉಡುಪುಗಳು. ನನಗೆ ಪ್ರಕೃತಿ ಎಂದರೆ ತುಂಬಾ ಇಷ್ಟ. ಹೂವು, ನವಿಲು, ಹೀಗೆ ಪ್ರಕೃತಿಯ ಆಯಾಮಗಳನ್ನು ಆಕರ್ಷಕ ಬಣ್ಣಗಳಿಂದ ರೂಪಿಸುತ್ತೇನೆ. `ಇಂಟರ್‌ನ್ಯಾಷನಲ್ ಸ್ಟೈಲಿಂಗ್ ವಿತ್ ಇಂಡಿಯನ್ ಸೋಲ್' ಎಂಬುದೇ ನನ್ನ ಪರಿಕಲ್ಪನೆ.

ಯಾವ ರೀತಿಯ ವಸ್ತ್ರಗಳು ಫ್ಯಾಷನ್‌ಗೆ ಪೂರಕವೆನಿಸುತ್ತವೆ?
ಕಾಲಕ್ಕೆ ಒಪ್ಪುವಂಥದ್ದು ಯಾವುದಾದರೂ ಸರಿ. ಆದರೆ ಜಾರ್ಜೆಟ್, ರೇಷ್ಮೆ, ವೆಲ್ವೆಟ್, ಕ್ರೇಪ್, ಕ್ರಿಸ್ಟಲ್ ಕಲೆ ಹೊಂದಿರುವ ಉಡುಪುಗಳು ಮಹಿಳೆಯರನ್ನು ಹೆಚ್ಚು ಸುಂದರವಾಗಿ ಕಾಣಿಸುತ್ತವೆ.

ಯಾವ ಬ್ರಾಂಡ್‌ಗಳಿಗೆ ವಸ್ತ್ರವಿನ್ಯಾಸ ಮಾಡಿದ್ದೀರಿ?
ಜೆಮೊ-ಫ್ರಾನ್ಸ್‌ಗೆ ಡಿಸೈನ್ ಹೆಡ್ ಆಗಿ ಕೆಲಸ ಮಾಡಿದ್ದೇನೆ. ಬಿಲ್‌ಲ್ಬಾಂಗ್, ಜೆಮೊ ಫ್ರಾನ್ಸ್, ಫಾರೆವರ್ 21, ಕೆನ್ಸೀ, ಮ್ಯಾಕ್ ಅಂಡ್ ಜ್ಯಾಕ್, ಟಾಪ್‌ಶಾಪ್‌ಗೆ ಫ್ಯಾಷನ್ ಬ್ರಾಂಡ್‌ಗಳಿಗೆ ವಸ್ತ್ರ ವಿನ್ಯಾಸಕಿಯಾಗಿದ್ದೆ.

ನಿಮ್ಮ ವಸ್ತ್ರ ವಿನ್ಯಾಸದ ಹೆಸರು?
ನನ್ನದೇ ವಿನ್ಯಾಸಗಳ ಸಂಗ್ರಹವನ್ನು 2010ರಲ್ಲಿ ಬಾರ್‌ಕೋಡ್ ಡಿಸೈನ್ ಮತ್ತು ರೇಷ್ಮಾ ಕುನ್ಹಿ ಎಂಬ ಹೆಸರಿನಲ್ಲಿ ಹೊರತಂದಿದ್ದೇನೆ.

ಸಿನಿಮಾಗಳಿಗೆ, ನಟ ನಟಿಯರಿಗೆ ವಸ್ತ್ರವಿನ್ಯಾಸಗೊಳಿಸಿದ್ದೀರಾ?
ಹೌದು. ತಮಿಳು, ಕನ್ನಡ ಸಿನಿಮಾಗಳಿಗೂ, ಜಾಹೀರಾತುಗಳಿಗೂ ವಸ್ತ್ರವಿನ್ಯಾಸಗೊಳಿಸಿದ್ದೇನೆ. ನಿಕೋಲ್ ಫರಿಯಾ, ಪ್ರಿಯಾಂಕಾ ಉಪೇಂದ್ರ, ನಿಧಿ ಸುಬ್ಬಯ್ಯ, ನೀತೂ, ನಂದಿತಾ, ಸಿಂಧು ಲೋಕನಾಥ್, ಮಹಿಮಾ ಚೌಧರಿ, ರೈಮಾ ಸೇನ್, ಉಪೇಂದ್ರ, ದಿಗಂತ್ ಹೀಗೆ ಹಲವು ತಾರೆಯರಿಗೆ ವಸ್ತ್ರವಿನ್ಯಾಸ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT