ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ

Last Updated 22 ಡಿಸೆಂಬರ್ 2012, 10:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರೇಷ್ಮೆ ಆಮದು ಸುಂಕ ಇಳಿಕೆ, ಅಂತರ್ಜಲ ಮಟ್ಟ ಕುಸಿತ, ಕೂಲಿಕಾರರ ಕೊರತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ಇತ್ತೀಚೆಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

ಬೆಂಗಳೂರಿನ ಮಡಿವಾಳದ ಬಳಿಯಿರುವ ಮಂಡಳಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ವೇದಿಕೆ ಸದಸ್ಯರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬಹುತೇಕ ಕೃಷಿಕರು ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಇತ್ತೀಚಿನ ಆಘಾತಕಾರಿ ಬೆಳವಣಿಗೆಯಿಂದ ರೇಷ್ಮೆ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಶೇ 5ಕ್ಕೆ ಇಳಿಸಿರುವ ವಿದೇಶಿ ರೇಷ್ಮೆ ಮೇಲಿನ ಆಮದು ಸುಂಕವನ್ನು ಈ ಹಿಂದಿನಂತೆ ಶೇ 31.5ಕ್ಕೆ ಏರಿಸಬೇಕು. ಒಂದು ಕೆ.ಜಿ. ಮಿಶ್ರತಳಿ ರೇಷ್ಮೆ ಗೂಡಿನ ಉತ್ಪಾದನಾ ವೆಚ್ಚವನ್ನು ರಾಜ್ಯ ಸರ್ಕಾರದ ವರದಿಯಂತೆ 165 ರೂಪಾಯಿಗೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ವರದಿಯಂತೆ 195 ರೂಪಾಯಿಗೆ ನಿಗದಿಪಡಿಸಲಾಗಿದೆ. ಆದರೆ ಈ ಅವೈಜ್ಞಾನಿಕ ದರಗಳನ್ನು ಪುನರ್‌ವಿಮರ್ಶಿಸಿ ಉತ್ಪಾದನಾ ವೆಚ್ಚವನ್ನು 325 ರಿಂದ 350 ರೂಪಾಯಿವರೆಗೆ ಏರಿಕೆ ಮಾಡಬೇಕು.

ಸಂಶೋಧನಾ ಕೇಂದ್ರಗಳನ್ನು ಬಲಪಡಿಸಿ, ರೇಷ್ಮೆ ಹುಳುವಿನ ತಳಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.
ರೇಷ್ಮೆ ಹುಳು ಸಾಕಣೆ ಮನೆ ನಿರ್ಮಾಣಕ್ಕೆ ಶೇ 50ರಷ್ಟು ಸಹಾಯಧನ ನೀಡಬೇಕು. ಹನಿ ನೀರಾವರಿಗೆ ನೀಡುತ್ತಿರುವ ಸಹಾಯಧನವನ್ನು ಶೇ 100ಕ್ಕೆ ಏರಿಸಿ, ಹಿಪ್ಪುನೇರಳೆ ಬೆಳೆಯುವ ಎಲ್ಲಾ ಭೂಮಿಗೂ ಅನ್ವಯವಾಗುವಂತೆ ಸಹಾಯಧನ ನೀಡಬೇಕು. ಯಂತ್ರೋಪಕರಣಗಳಿಗೆ ಶೇ 75ರಷ್ಟು ಸಹಾಯಧನ ನೀಡಬೇಕು. ಬಡ ರೇಷ್ಮೆ ನೂಲು ಬಿಚ್ಚಾಣಿಕೆದಾರರನ್ನು ಉಳಿಸಲು ಸರ್ಕಾರದ ವತಿಯಿಂದ ಒಂದೇ ಸೂರಿನಡಿ ಸಣ್ಣ-ಸಣ್ಣ ಆಧುನಿಕ ತಂತ್ರಜ್ಞಾನದ ನೂಲು ಬಿಚ್ಚಾಣಿಕೆ ಘಟಕಗಳನ್ನು ಸ್ಥಾಪಿಸಬೇಕು ಎಂದು ಅವರು ತಿಳಿಸಿದರು.

ಮನವಿಗಳಿಗೆ ಸ್ಪಂದಿಸಿದ ಬಿಸ್ಸೇಗೌಡ, ರೇಷ್ಮೆಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಂತಹಂತವಾಗಿ ಪ್ರಯತ್ನಿಸಲಾಗುವುದು. ಒಂದು ತಿಂಗಳ ಅವಧಿಯೊಳಗೆ ರೇಷ್ಮೆಕೃಷಿಕರ ಸಭೆ ಕರೆದು, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಬೋದಗೂರು ಆಂಜಿನಪ್ಪ, ಅಧ್ಯಕ್ಷ ಮಳ್ಳೂರು ಶಿವಣ್ಣ, ಪ್ರಧಾನ ಕಾರ್ಯದರ್ಶಿ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಕಾರ್ಯದರ್ಶಿ ಡಿ.ಕೆ.ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಮಳ್ಳೂರು ಹರೀಶ್, ಸದಸ್ಯರಾದ ಭಕ್ತರಹಳ್ಳಿ ಬೈರೇಗೌಡ, ನಿರಂಜನ್, ಸುರೇಶ್, ದೇವರಾಜ್, ಕೆಂಪಣ್ಣ, ಕೃಷ್ಣಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT