ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಧಾರಣೆ ದಿಢೀರ್ ಕುಸಿತ: ಪ್ರತಿಭಟನೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ದಿಢೀರನೆ ರೇಷ್ಮೆ ಗೂಡಿನ ಧಾರಣೆ ಕುಸಿದಿದ್ದರಿಂದ ಕುಪಿತಗೊಂಡ ರೈತರು ಮಂಗಳವಾರ ಮಾರುಕಟ್ಟೆ ಎದುರಿನ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಮಾಮೂಲಿನಂತೆ ರೇಷ್ಮೆ ಗೂಡು ಮಾರುಕಟ್ಟೆಗೆ ರೇಷ್ಮೆಗೂಡು ತಂದಿದ್ದ ರೈತರಿಗೆ ಹರಾಜು ಆರಂಭಗೊಳ್ಳುತ್ತಿದ್ದಂತೆ ಶಾಕ್ ಕಾದಿತ್ತು. ಹಿಂದಿನ ದಿನ 150 ರಿಂದ 200 ರೂ ಇದ್ದ ಕೆ.ಜಿ. ರೇಷ್ಮೆಗೂಡಿನ ಧಾರಣೆ ಹಠಾತ್ತನೆ 80ರೂ. ಗಳಿಗೆ ಕುಸಿಯಿತು.

ಧಾರಣೆ ಕುಸಿತದಿಂದ ಕಂಗಾಲಾದ ರೈತರು ರೀಲರ್‌ಗಳ ಜೊತೆ ವಾಗ್ವಾದಕ್ಕಿಳಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಕುಪಿತಗೊಂಡ ರೈತರು ಹರಾಜು ಪ್ರಕ್ರಿಯೆಯನ್ನು ಬಹಿಷ್ಕರಿಸಿ ಮಾರುಕಟ್ಟೆ ಎದುರಿನ ಹೆದ್ದಾರಿಗೆ ರೇಷ್ಮೆ ಗೂಡು ಸುರಿದು ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿದರು.

`ಕೆಲ ತಿಂಗಳ ಹಿಂದೆ 200ರಿಂದ 300ರೂ ಇದ್ದ ಕೆ.ಜಿ. ಗೂಡಿನ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಎರಡು ದಿನಗಳ ಹಿಂದಷ್ಟೇ 150ರಿಂದ 200 ರೂ. ಇದ್ದ ಬೆಲೆ ಮಂಗಳವಾರ 80ರೂಗಳಿಗೆ ಕುಸಿದಿರುವುದು ನ್ಯಾಯ ಸಮ್ಮತವಲ್ಲ. ಸರಕಾರ ಬೆಂಬಲ ಬೆಲೆ ಘೋಷಿಸುವ ಜತೆಗೆ ನ್ಯಾಯಯುತ ದರ ನಿಗದಿ ಮಾಡುವವರೆಗೆ ರಸ್ತೆ ತಡೆ ನಿಲ್ಲಿಸುವುದಿಲ್ಲ~ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಕೇವಲ 80ರೂ ಹರಾಜಿನಂತೆ ರೇಷ್ಮೆ ಗೂಡು ಮಾರಾಟ ಮಾಡಿದರೆ, ಮಾಡಿದ ಖರ್ಚು ಹುಟ್ಟುವುದಿಲ್ಲ. ಸಾಲ ಮಾಡಿ ಬೆಳೆ ಬೆಳೆದ ನಮ್ಮ ಮುಂದೆ ಈಗಿರುವುದು ಆತ್ಮಹತ್ಯೆ ಒಂದೇ ದಾರಿ ಎಂದು ಮಾಧ್ಯದವರೆದರು ತಮ್ಮ ಅಳಲನ್ನು ತೋಡಿಕೊಂಡರು.

ಚೀನಾ ರೇಷ್ಮೆ ಕಾರಣ:  `ಚೀನಾ ರೇಷ್ಮೆಯಿಂದಾಗಿ ದೇಶಿ ರೇಷ್ಮೆಗೆ ಬೆಲೆ ಇಲ್ಲದಂತಾಗಿದೆ. ಪ್ರತಿ ಕೆ.ಜಿ. ಕಚ್ಚಾರೇಷ್ಮೆಗೆ 1200ರಿಂದ 1400ರೂ. ಬೆಲೆ ಸಿಗುತ್ತಿದ್ದು, ಹೆಚ್ಚಿನ ಬೆಲೆಗೆ ಹರಾಜು ಕೂಗಿದರೆ ನಮಗೆ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಹೆಚ್ಚಿನ ದರಕ್ಕೆ ಹರಾಜು ಕೂಗಲಾಗದು~  ಎಂದು ಬಿಡ್‌ದಾರರು ನಿರಾಕರಿಸಿದರು.

ಡಿವೈಸ್‌ಪಿ ಸಂಧಾನ: ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಿವೈಎಸ್‌ಪಿ ಸಿದ್ದಪ್ಪ, ಪ್ರತಿಭಟನಾ ನಿರತ ರೈತರು ಹಾಗೂ ರೀಲರುಗಳ ನಡುವೆ ಮಾತುಕತೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ಹರಾಜು ಕೂಗುವಂತೆ ತಾಕೀತು ಮಾಡಿದರು.

10ಪೈಸೆಯಿಂದ ಹರಾಜು ಕೂಗುವ ಪದ್ದತಿಯನ್ನು ಕೈಬಿಟ್ಟು ಒಂದು ರೂಪಾಯಿಯಿಂದ ಹರಾಜು ಕೂಗಬೇಕೆಂದು ರೈತರ ಬೇಡಿಕೆಗೆ ಸ್ಪಂದಿಸಿದ ಡಿವೈಎಸ್‌ಪಿ ಜಿಲ್ಲಾಧಿಕಾರಿಗಳು, ಈ ಬಗ್ಗೆ ನಿರ್ದೇಶನ ನೀಡಿದ್ದು ಒಂದು ರೂ ನಿಂದ ಹರಾಜು ಕೂಗಿ ಎಂದರು. ಆದರೆ ರೀಲರುಗಳು ಇದ್ದಕ್ಕೆ ಒಪ್ಪಲಿಲ್ಲ.

ಸಚಿವರ ಸಮ್ಮುಖದಲ್ಲಿ ಸಭೆ: ರೇಷ್ಮೆ ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ರೀಲರುಗಳ ಸಭೆ ಏರ್ಪಡಿಸಿ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸುವುದಾಗಿ ಡಿವೈಎಸ್‌ಪಿ ಟಿ. ಸಿದ್ದಪ್ಪ ಭರವಸೆ ನೀಡಿದರು.

ಬಳಿಕ ಹರಾಜು ಪ್ರಕ್ರಿಯೆ ಪ್ರಾರಂಭಗೊಂಡು ಕೆಜಿ ಗೂಡಿಗೆ 110ರೂ ನಿಂದ ಹರಾಜು ಕೂಗಲಾಯಿತು. ಆದರೆ 10ಪೈಸೆಯಿಂದ ಹರಾಜು ಕೂಗುವ ಪ್ರಕ್ರಿಯೆಯನ್ನು ಮಾತ್ರ ರೀಲರುಗಳು ಕೈಬಿಡಲಿಲ್ಲ. ನಂತರ ಗೂಡಿನ ಧಾರಣೆ 250ರಿಂದ 280ರವರೆಗೆ ರೈತರ ಗೂಡನ್ನು ಬಿಡ್‌ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT