ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರ ಅಂಚೆ ಪತ್ರ ಚಳವಳಿಗೆ ಚಾಲನೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ವಿದೇಶಿ ರೇಷ್ಮೆ ಆಮದು ಮೇಲಿನ ಸುಂಕವನ್ನು ಮೊದಲಿನಂತೆ ಶೇ 31ಕ್ಕೆ ಹೆಚ್ಚಿಸಬೇಕು ಹಾಗೂ ಒಂದು ಕೆ.ಜಿ. ರೇಷ್ಮೆ ಗೂಡಿಗೆ 350 ರೂಪಾಯಿ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೇಷ್ಮೆ ಬೆಳೆಗಾರರ ಸಂಘ ಮಂಗಳವಾರ `ಅಂಚೆ ಪತ್ರ ಚಳವಳಿ~ಗೆ ಚಾಲನೆ ನೀಡಿತು.

ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗದಲ್ಲಿ ಶಾಸಕ ಕೆ.ರಾಜು ಅವರು ಈ ಚಳವಳಿಗೆ ಚಾಲನೆ ನೀಡಿದರು.

ರಾಜ್ಯದ ರೇಷ್ಮೆ ಬೆಳೆಗಾರರು ಪ್ರಧಾನ ಮಂತ್ರಿಗಳಿಗೆ ಒಂದು ಲಕ್ಷ ಪತ್ರ ರವಾನಿಸುವ ಉದ್ದೇಶವನ್ನು ಈ ಚಳವಳಿ ಒಳಗೊಂಡಿದೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮೊದಲಿನಂತೆ ವಿದೇಶಿ ರೇಷ್ಮೆ ಆಮದು ಮೇಲಿನ ಸುಂಕವನ್ನು ಶೇ 31ಕ್ಕೆ ನಿಗದಿಪಡಿಸಬೇಕು ಎಂದು ಈ ಅಂಚೆ ಪತ್ರಗಳಲ್ಲಿ ಒತ್ತಾಯಿಸಲಾಗಿದೆ ಎಂದರು.

ಪತ್ರ ಚಳವಳಿಗೆ ಚಾಲನೆ ನೀಡಿದ ಶಾಸಕ ಕೆ.ರಾಜು ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷ್ಮೆ ರೈತರ ಬಗ್ಗೆ ಉದಾಸೀನದಿಂದ ವರ್ತಿಸಿದರೆ ಬೀದಿಗಿಳಿದು ಉಗ್ರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ವೆಂಕಟಾಚಲಯ್ಯ ಮಾತನಾಡಿ, ರೇಷ್ಮೆ ಧಾರಣೆ ಕುಸಿತದಿಂದ ರಾಜ್ಯದಲ್ಲಿ ಈಗಾಗಲೇ ಶೇ 10ರಿಂದ 15ರಷ್ಟು ಜನತೆ ರೇಷ್ಮೆ ಕೃಷಿಯಿಂದಲೇ ದೂರ ಸರಿದಿದ್ದಾರೆ. ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಉಳಿಸಿ ಬೆಳೆಸಲು ಅಗತ್ಯ ಪ್ರೋತ್ಸಾಹ ಸರ್ಕಾರಗಳಿಂದ ದೊರೆಯಬೇಕಿದೆ. ಆದರೆ ಕೇಂದ್ರ ಸರ್ಕಾರ ಕೆಲ ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿದು ರೇಷ್ಮೆ ರೈತರ ಮರಣಶಾಸನ ರೂಪಿಸಿದೆ. ಇದನ್ನು ಈ ಬಜೆಟ್‌ನಲ್ಲಿ ಸರಿಪಡಿಸಿಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ರಾಜ್ಯ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಜಿ. ಮಹೇಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ  ಮಾ. 5ರಂದು ದೆಹಲಿಯ `ಕಾನ್ಸ್‌ಟಿಟ್ಯೂಷನ್ ಕ್ಲಬ್~ನಲ್ಲಿ ರೇಷ್ಮೆ ರಾಜ್ಯಗಳ ಅಖಿಲ ಭಾರತ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯಗಳ ರೇಷ್ಮೆ ಬೆಳೆಗಾರರು, ತಜ್ಞರು, ಅಧಿಕಾರಿಗಳು, ಜನಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಮಾವೇಶದ ಮರು ದಿನವಾದ ಮಾರ್ಚ್ 6ರಂದು ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ದೇಶದ ರೇಷ್ಮೆ ಬೆಳೆಗಾರರ ಹಿತ ಕಾಯುವಂತೆ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೀರಣಗೆರೆ ಹೊಂಬಾಳೇಗೌಡ, ತಾಲ್ಲೂಕು ಅಧ್ಯಕ್ಷ ಅಪ್ಪಾಜಿಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಚಿಕ್ಕಬೈರೇಗೌಡ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸ್, ನಗರಸಭೆ ಸದಸ್ಯ ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT